ಬಂಟ್ವಾಳ: ಪುದು ಗ್ರಾಮದ ಅಮ್ಮೆಮಾರಿನಲ್ಲಿ ಭೂಕುಸಿತ ಉಂಟಾಗಿ ಹಲವು ಮನೆಗಳು ಅಪಾಯಕ್ಕೆ ಸಿಲುಕಿವೆ. ಕೆಲವು ಮನೆಗಳು ಪೂರ್ತಿ ಧರೆಗುರುಳುವ ಆತಂಕ ಎದುರಾಗಿದ್ದು, 2 ಮನೆಯವರು ಬೇರೆಡೆಗೆ ತೆರಳಿದ್ದಾರೆ.
ಅಮ್ಮೆಮಾರಿನ ಪದೆಂಜಾರ್‌ನ ನಾರಾಯಣ ಮುಕಾರಿ ಅವರ ನಿವಾಸದ ಹಿಂಭಾಗದಲ್ಲಿ ಮಣ್ಣು ಕುಸಿದು ಮನೆ ಅಪಾಯದಲ್ಲಿದೆ. ಮನೆಯ ಹಿಂಭಾಗದ ಕಲ್ಲುಗಳು ಕೆಳಭಾಗದಲ್ಲಿ ಹರಿಯುತ್ತಿರುವ ತೋಡಿನ ಪಾಲಾಗಿದ್ದು, ಗೋಡೆ ಬಿರುಕು ಬಿಟ್ಟಿದೆ.
ಅಮ್ಮೆಮಾರಿನ ಗುಡ್ಡಪ್ರದೇಶದಲ್ಲಿ ವಾಸವಾಗಿರುವ ಹಾಜೀರ ಹಾಗೂ ಉಸ್ಮಾನ್ ಅವರ 2 ಮನೆಗಳ ಹಿಂಭಾಗ ದಲ್ಲಿ ಭೂಕುಸಿತ ಉಂಟಾಗಿದ್ದು, ಮುನ್ನೆಚ್ಚರಿಕೆಯಾಗಿ ಮನೆ ಯವರು ಸ್ಥಳಾಂತರಗೊಂಡಿದ್ದಾರೆ. ಜತೆಗೆ ಸ್ಥಳೀಯ ನಿವಾಸಿಗಳಾದ ಗಂಗು ಮುಕಾರಿ, ಫಝಲ್ ಅವರ ಮನೆಗಳೂ ಅಪಾಯದಲ್ಲಿವೆ.
ಅಬೂಬಕ್ಕರ್ ಅವರ ಮನೆಯ ಹಿಂಭಾಗ ಕುಸಿದಿದ್ದು, ಆವರಣ ಗೋಡೆ ಕುಸಿತವಾಗಿದೆ. ಗುಡ್ಡ ಕುಸಿತದಿಂದ ಕಾಂಕ್ರೀಟ್ ರಸ್ತೆ ಕೆಸರುಮಯವಾಗಿದೆ.
ಗೀತಾ ಅವರ ಮನೆಯ ಆವರಣ ಗೋಡೆ ಕುಸಿದಿದೆ. ಕುಂಜತ್ ಕಲ- ಅಮ್ಮೆಮಾರ್ ರಸ್ತೆ ಬಳಿಯೂ ಗುಡ್ಡ ಕುಸಿತವಾಗಿದೆ. ಅಮ್ಮೆಮಾರ್‌ನಲ್ಲಿ ಅನೇಕ ಮನೆಗಳು ಅಪಾಯದಲ್ಲಿರು ವುದರಿಂದ ಜಿಲ್ಲಾಧಿಕಾರಿಯವರು ಇತ್ತ ಗಮನಹರಿಸಿ ಹೆಚ್ಚಿನ ಪರಿಹಾರ ವಿತರಣೆಗೂ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿ ದ್ದಾರೆ. ಕುಸಿತ ಸಂಭವಿಸಿದ ಪ್ರದೇಶಗಳಿಗೆ ಗ್ರಾಮ ಪಂ. ಸದಸ್ಯರಾದ ಅಖ್ತರ್ ಹುಸೇನ್, ಮಹಮ್ಮದ್ ರಿಯಾಝ್, ಮಹಮ್ಮದ್ ಫೈಝಲ್, ಆತಿಕ ಅಮ್ಮೆಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.