Advertisement

LandSlide: ಮತ್ತೆ ಭೂಕುಸಿತ: ಮಂಗಳೂರು, ಬೆಂಗಳೂರು ರೈಲು ಸಂಚಾರ ರದ್ದು

11:27 PM Aug 10, 2024 | Team Udayavani |

ಸುಳ್ಯ/ ಮಂಗಳೂರು : ಪಟ್ಟಣದ ಆಚಂಗಿ ಗ್ರಾಮದ ಬಳಿ ರೈಲು ಹಳಿ ಮೇಲೆ ಭಾರೀ ಪ್ರಮಾಣದಲ್ಲಿ ಭೂಕುಸಿತವಾಗಿದೆ. ಪರಿಣಾಮವಾಗಿ ಮಾರ್ಗ ಮಧ್ಯೆ ಸಿಲುಕಿದ 6 ರೈಲುಗಳ ಪ್ರಯಾಣಿಕರನ್ನು ರಸ್ತೆ ಮಾರ್ಗದಲ್ಲಿ ಕಳುಹಿಸಲಾಯಿತು.

Advertisement

ಶುಕ್ರವಾರ ಮಧ್ಯರಾತ್ರಿ 12.30ರಲ್ಲಿ ಆಚಂಗಿ ಗ್ರಾಮದ ಬಳಿ ಅಲ್ಪ ಪ್ರಮಾಣದ ಭೂಕುಸಿತವಾಗಿತ್ತು. ಬಳಿಕ ದೊಡ್ಡ ಪ್ರಮಾಣದಲ್ಲಿ ಭೂಕುಸಿತವಾಗಿದೆ. ರಾತ್ರಿಯಿಂದಲೇ ರೈಲ್ವೆ ಇಲಾಖೆ ತೆರವು ಕಾರ್ಯ ಆರಂಭಿಸಿದೆ. ಗುಡ್ಡ ಕುಸಿತದಿಂದ 3 ರೈಲುಗಳ ಸಂಚಾರ ಮಾರ್ಗದಲ್ಲಿ ತಡೆಹಿಡಿದರೆ, ಇನ್ನೂ 3 ರೈಲುಗಳ ಸಂಚಾರವನ್ನು ಆರಂಭದಲ್ಲೇ ನಿರ್ಬಂಧಿಸಲಾಯಿತು. ಮಂಗಳೂರಿನಿಂದ ಬೆಂಗಳೂರಿನೆಡೆಗೆ ಸಂಚರಿಸುತ್ತಿದ್ದ ರೈಲನ್ನು ಸಕಲೇಶಪುರ ನಿಲ್ದಾಣದಲ್ಲಿ ತಡೆಹಿಡಿಯಲಾಯಿತು.

ಬೆಂಗಳೂರಿನಿಂದ ಮಂಗಳೂರಿಗೆ ಬರುವ ರೈಲುಗಳನ್ನು ಆಲೂರು ಹಾಗೂ ಹಾಸನ ರೈಲು ನಿಲ್ದಾಣದಲ್ಲಿ ತಡೆಹಿಡಿಯಲಾಯಿತು. ರೈಲುಗಳ ಸ್ಥಗಿತದಿಂದ ಪ್ರಯಾಣಿಕರು ಮೂಲ ಸೌಲಭ್ಯವಿಲ್ಲದೇ ಪರದಾಡಿದರು. ಮುಂಜಾನೆ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ಪರ್ಯಾಯ ವ್ಯವಸ್ಥೆಗೆ ಒತ್ತಾಯಿಸಿದ್ದು, ರಸ್ತೆ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ರೈಲ್ವೆ ಮಾರ್ಗದಲ್ಲಿ ಮಣ್ಣು ತೆರವು ಕಾರ್ಯಾಚರಣೆ ನಿರಂತರವಾಗಿದ್ದು, ಸದ್ಯಕ್ಕೆ ರೈಲು ಸಂಚಾರ ಬಂದ್‌ ಮಾಡಲಾಗಿದೆ.

ಹಲವು ಪ್ರಮುಖ ರೈಲುಗಳ ಸಂಚಾರ ರದ್ದು
ಸಕಲೇಶಪುರ-ಬಾಳ್ಳುಪೇಟೆಯ ಮಧ್ಯೆ ರೈಲು ಹಳಿ ಮೇಲೆ ಗುಡ್ಡ ಜರಿದ ಕಾರಣ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಶನಿವಾರ ಕಣ್ಣೂರಿನಿಂದ ಹೊರಡಬೇಕಿದ್ದ ನಂ. 16512 ಕಣ್ಣೂರು-ಕೆಎಸ್‌ಆರ್‌ ಬೆಂಗಳೂರು, ಬೆಂಗಳೂರಿನಿಂದ ಹೊರಡಬೇಕಿದ್ದ ನಂ. 16511 ಕೆಎಸ್‌ಆರ್‌ ಬೆಂಗಳೂರು-ಕಣ್ಣೂರು, ಕಾರವಾರದಿಂದ ಹೊರಡಬೇಕಿದ್ದ ನಂ. 16596 ಕಾರವಾರ-ಕೆಎಸ್‌ಆರ್‌, ಬೆಂಗಳೂರಿನಿಂದ ಹೊರಡಬೇಕಿದ್ದ ನಂ. 16595 ಕೆಎಸ್‌ಆರ್‌-ಕಾರವಾರ ಎಕ್ಸ್‌ಪ್ರೆಸ್‌ ರೈಲುಗಳು ರದ್ದಾಗಿವೆ.

Advertisement

ಅದೇ ರೀತಿ 16586 ಮುರುಡೇಶ್ವರ ಎಸ್‌ಎಂವಿಟಿ ಬೆಂಗಳೂರು, 16585 ಎಸ್‌ಎಂವಿಟಿ ಬೆಂಗಳೂರು-ಮುರುಡೇಶ್ವರ, ನಂ.07377 ವಿಜಯಪುರ-ಮಂಗಳೂರು ಸೆಂಟ್ರಲ್‌ ರೈಲು ಪೂರ್ಣ ರದ್ದಾಗಿದೆ. ಆ. 11ರಂದು ಮಂಗಳೂರಿನಿಂದ ಹೊರಡಬೇಕಿರುವ ನಂ.07378 ಮಂಗಳೂರು ಸೆಂಟ್ರಲ್‌-ವಿಜಯಪುರ ಎಕ್ಸ್‌ಪ್ರೆಸ್‌ ರೈಲು ಸೇವೆಯನ್ನೂ ರದ್ದುಗೊಳಿಸಲಾಗಿದೆ. ಆ. 10ರಂದು ಹೊರಟ 16515 ಕಾರವಾರ ಕೆಎಸ್‌ಆರ್‌ ಬೆಂಗಳೂರು ರೈಲನ್ನು ಮಂಗಳೂರು ಜಂಕ್ಷನ್‌ ವರೆಗೆ ಮಾತ್ರ ಓಡಿಸಲಾಗಿದೆ.

ಆ.11, 12ರ ರೈಲುಗಳೂ ರದ್ದು
ಭೂಕುಸಿತ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೇ ನಾಲ್ಕು ರೈಲುಗಳ ಸಂಚಾರವನ್ನು ಆ. 12ರ ವರೆಗೆ ರದ್ದುಗೊಳಿಸಿದೆ. ನಂ.16575 ಯಶವಂತಪುರ ಮಂಗಳೂರು (ಆ.11), ನಂ.16540 ಮಂಗಳೂರು ಜಂಕ್ಷನ್‌-ಯಶವಂತಪುರ (ಆ.11), ನಂ.16596 ಕೆಎಸ್‌ಆರ್‌ ಬೆಂಗಳೂರು-ಕಾರವಾರ (ಆ.11) ಹಾಗೂ ನಂ.16596 ಕಾರವಾರ ಬೆಂಗಳೂರು (ಆ.12) ರೈಲು ಸಂಚಾರ ರದ್ದುಗೊಂಡಿದೆ.

ಪ್ರಯಾಣಿಕರ ಸಂಕಷ್ಟ
ಆ. 9ರಂದು ಸಕಲೇಶಪುರ ಮಾರ್ಗವಾಗಿ ಹೊರಟಿದ್ದ ಬಹುತೇಕ ಬೆಂಗಳೂರಿಗೆ ಹೋಗುವ, ಅಲ್ಲಿಂದ ಬರುವ ರೈಲುಗಳೂ ಅರ್ಧಕ್ಕೇ ಸ್ಥಗಿತಗೊಳ್ಳುವಂತಾಗಿದ್ದು, ಬಹುತೇಕ ಪ್ರಯಾಣಿಕರು ಮಧ್ಯೆ ಸಿಲುಕಿಕೊಂಡು ಸಂಕಷ್ಟ ಎದುರಾಯಿತು. ಈ ರೈಲುಗಳನ್ನು ಚನ್ನರಾಯಪಟ್ಟಣ, ಆಲೂರು, ಸಕಲೇಶಪುರ, ಹಾಸನ ನಿಲ್ದಾಣಗಳಲ್ಲಿ ಸ್ಥಗಿತಗೊಳಿಸಲಾಯಿತು.

ಏರ್‌ಫೋರ್ಸ್‌ ಪರೀಕ್ಷೆಗಾಗಿ ಮಂಗಳೂರಿನ ಕೇಂದ್ರವೊಂದಕ್ಕೆ ಬೆಂಗಳೂರಿನಿಂದ ಹೊರಟ ಅಭ್ಯರ್ಥಿಯೊಬ್ಬರು ತನಗೆ ಪರೀಕ್ಷೆಗೆ ತಲುಪಲಾಗುತ್ತಿಲ್ಲ, ಈ ನಷ್ಟಕ್ಕೆ ಯಾರು ಹೊಣೆ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಮ್ಮ ಬೇಸರ ತೋಡಿಕೊಂಡಿದ್ದಾರೆ.
ಮಧ್ಯೆ ಸಿಲುಕಿ ಪರದಾಡಿದ ಪ್ರಯಾಣಿಕರಿಗೆ ನೈಋತ್ಯ ರೈಲ್ವೇ ವತಿಯಿಂದ ಉಪಹಾರ, ಊಟ, ನೀರು ಒದಗಿಸಲಾಯಿತು. ಅಲ್ಲದೆ 26 ಬಸ್‌ಗಳ ಮೂಲಕ ಅವರ ಮುಂದಿನ ಪ್ರಯಾಣಕ್ಕೆ ವ್ಯವಸ್ಥೆ ಮಾಡಿಕೊಡಲಾಯಿತು. ಈ ಮೂಲಕ ಸುಮಾರು 1,980 ಮಂದಿ ಪ್ರಯಾಣ ಮುಂದುವರಿಸಿದರು.

ಎರಡು ದಿನ ಹಿಂದೆ ಆರಂಭಗೊಂಡಿತ್ತು!
ಕಡಗರವಳ್ಳಿ-ಎಡಕುಮೇರಿ ಮಧ್ಯೆ ಉಂಟಾದ ಭೂಕುಸಿತದಿಂದ ಹಲವು ದಿನ ಈ ಮಾರ್ಗದಲ್ಲಿ ರೈಲು ಓಡಿರಲಿಲ್ಲ. ದುರಸ್ತಿ ಕಾರ್ಯ ಪೂರ್ಣಗೊಂಡು ಆ. 8ರಂದು ಈ ಮಾರ್ಗವಾಗಿ ಸಂಚಾರ ಪುನರಾರಂಭಗೊಂಡಿತ್ತು. ಆದರೆ ಶುಕ್ರವಾರ ತಡರಾತ್ರಿ ಭೂಕುಸಿತ ಉಂಟಾಗಿ ಮತ್ತೆ ರೈಲು ಸಂಚಾರಕ್ಕೆ ಅಡಚಣೆಯಾಗಿದೆ. ಭೂಕುಸಿತ ಉಂಟಾದ ಪ್ರದೇಶದಲ್ಲಿ ಸುಮಾರು 450 ಕಾರ್ಮಿಕರು ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next