Advertisement

ಸಿರಿಬಾಗಿಲು: ಹಳಿಗೆ ಕುಸಿದ ಗುಡ್ಡ

04:10 AM Jul 04, 2018 | Karthik A |

ಸಕಲೇಶಪುರ/ ಸುಬ್ರಹ್ಮಣ್ಯ: ಮಂಗಳೂರು-ಹಾಸನ ರೈಲು ಮಾರ್ಗದ ಎಡಕುಮೇರಿ-ಕಡಗರಹಳ್ಳಿ ನಿಲ್ದಾಣದ ನಡುವೆ 85ನೇ ಮೈಲು ಎಡಕುಮೇರಿ ಬಳಿ ಮಂಗಳವಾರ ಗುಡ್ಡ ಜರಿದು ಮಣ್ಣು, ಮರಗಳು ಹಳಿಗಳ ಮೇಲೆ ಬಿದ್ದಿವೆ. ಪರಿಣಾಮ ಸುಬ್ರಹ್ಮಣ್ಯ ರಸ್ತೆ – ಸಕಲೇಶಪುರ ಮಾರ್ಗದಲ್ಲಿ ಮಂಗಳವಾರ ಮಧ್ಯಾಹ್ನ ಸಂಚರಿಸಬೇಕಿದ್ದ ಮಂಗಳೂರು – ಬೆಂಗಳೂರು ರೈಲನ್ನು ಎಡಕುಮೇರಿಯಿಂದ ವಾಪಸು ಮಂಗಳೂರಿಗೆ ಕರೆಸಿಕೊಳ್ಳಲಾಗಿದೆ.

Advertisement

ಪುತ್ತೂರಿನಿಂದ ಮಧ್ಯಾಹ್ನ 1.20ಕ್ಕೆ ಹೊರಟ ರೈಲು ಸಂಜೆ 5.30ಕ್ಕೆ ಪುತ್ತೂರಿಗೆ ಮರಳಿದೆ. ರಾತ್ರಿ 8 ಗಂಟೆವರೆಗೆ ಪ್ರಯಾಣಿಕರು ರೈಲು ನಿಲ್ದಾಣದ ಆವರಣದಲ್ಲೇ ದಿಕ್ಕು ತೋಚದೆ ಕುಳಿತಿದ್ದರು. ಮಕ್ಕಳ ಅಳು, ದೊಡ್ಡವರ ಜಗಳ, ಕೆಲಸಕ್ಕೆಂದು ಹೊರಟು ನಿಂತವರ ತೊಳಲಾಟ ಕಂಡುಬಂತು. ಬಳಿಕ 9 ಕೆ.ಎಸ್‌.ಆರ್‌.ಟಿ.ಸಿ. ಬಸ್‌ ಗಳಲ್ಲಿ ಪ್ರಯಾಣಿಕರನ್ನು ಬೆಂಗಳೂರಿಗೆ ಕಳುಹಿಸಲಾಯಿತು. ಕೆಲವು ಪ್ರಯಾಣಿಕರು ಟಿಕೆಟ್‌ ಹಣ ಹಿಂದಕ್ಕೆ ಪಡೆದುಕೊಂಡಿದ್ದಾರೆ. ರೈಲು ಘಾಟಿ ಏರಲಿರುವುದರಿಂದ ಸುಬ್ರಹ್ಮಣ್ಯದಲ್ಲಿ ಹಿಂಬದಿಗೂ ಎಂಜಿನ್‌ ಒಂದನ್ನು ಜೋಡಿಸಲಾಗುತ್ತದೆ. ಆ ಕಾರಣದಿಂದಾಗಿ ರೈಲು ಎಡಕುಮೇರಿ ತಲುಪಿದ್ದರೂ ಹಿಂದಕ್ಕೆ ಮರಳಿ ಬರಲು ಸಾಧ್ಯವಾಯಿತು.

ರೈಲು ಸಂಚಾರ ಯಥಾಸ್ಥಿತಿಗೆ
ರಾತ್ರಿ ಬೆಂಗಳೂರಿಗೆ ತೆರಳುವ ರೈಲು ಯಥಾ ಪ್ರಕಾರ 9 ಗಂಟೆಗೆ ಮಂಗಳೂರಿನಿಂದ ಹೊರಟಿದೆ ಎಂದು ಮಂಗಳೂರು  ಸೆಂಟ್ರಲ್‌ ರೈಲ್ವೇ ಸ್ಟೇಶನ್‌ನ ಡೆಪ್ಯುಟಿ ಸ್ಟೇಷನ್‌ ಮ್ಯಾನೇಜರ್‌ ಕಿಶನ್‌ ಕುಮಾರ್‌ ತಿಳಿಸಿದ್ದಾರೆ.

ಪಾರಾದ ರೈಲು
ಯಶವಂತಪುರ – ಮಂಗಳೂರು ರೈಲು ಪೂರ್ವಾಹ್ನ 11.30ಕ್ಕೆ ಸಕಲೇಶಪುರ ನಿಲ್ದಾಣದಿಂದ ಹೊರಟಿದ್ದು, ಸಿರಿ ಬಾಗಿಲನ್ನು ದಾಟಿ 20 ನಿಮಿಷಗಳಲ್ಲಿ  ಹಳಿಯ ಮೇಲೆ ಗುಡ್ಡ ಕುಸಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next