ಕೌಲಾಲಂಪುರ್: ಮಲೇಷ್ಯಾದ ಕ್ಯಾಂಪ್ ಸೈಟ್‌ನಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದ ಭೂಕುಸಿತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 50 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳದಲ್ಲಿ ಬದುಕುಳಿದವರಿಗಾಗಿ ರಕ್ಷಣಾ ಸಿಬ್ಬಂದಿ ಶೋಧ ಕಾರ್ಯ ಆರಂಭಿಸಿದ್ದಾರೆ.
ರಾಜಧಾನಿ ಕೌಲಾಲಂಪುರ್ ನ ಹೊರವಲಯದಲ್ಲಿರುವ ಸೆಲಂಗೋರ್ ರಾಜ್ಯದಲ್ಲಿ ಸುಮಾರು 3 ಗಂಟೆಗೆ ಕ್ಯಾಂಪಿಂಗ್ ಸೌಲಭ್ಯಗಳನ್ನು ಒದಗಿಸುವ ಫಾರ್ಮ್‌ಹೌಸ್ ಬಳಿಯ ರಸ್ತೆಯ ಬದಿಯಲ್ಲಿ ಭೂಕುಸಿತವು ಸಂಭವಿಸಿದೆ ಎಂದು ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಈ ವಾರ ಸ್ಯಾಂಡಲ್‌ವುಡ್‌ನಲ್ಲಿ 9 ಚಿತ್ರಗಳು ತೆರೆಗೆ
ಭೂಕುಸಿತದಲ್ಲಿ ಒಟ್ಟು 79 ಮಂದಿ ಸಿಲುಕಿದ್ದು, 23 ಮಂದಿ ಸುರಕ್ಷಿತವಾಗಿದ್ದಾರೆ ಎಂದು ಇಲಾಖೆ ತಿಳಿಸಿದೆ. ಇಬ್ಬರು ಸತ್ತವರ ಜೊತೆಗೆ, ಮೂವರು ಗಾಯಗೊಂಡಿದ್ದಾರೆ. 51 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ.
ಕ್ಯಾಂಪ್ ಸೈಟ್ ನಿಂದ ಅಂದಾಜು 30 ಮೀಟರ್ (100 ಅಡಿ) ನಷ್ಟು ಭೂಕುಸಿತ ನಡೆದಿದೆ. ಸುಮಾರು ಒಂದು ಎಕರೆ (0.4 ಹೆಕ್ಟೇರ್) ಪ್ರದೇಶದಲ್ಲಿ ಭೂಕುಸಿತ ನಡೆದಿದೆ ಎಂದು ಇಲಾಖೆಯ ನಿರ್ದೇಶಕ ನೊರಾಜಮ್ ಖಾಮಿಸ್ ಹೇಳಿದ್ದಾರೆ.
ರೆಸಾರ್ಟ್‌ಗಳು ಮತ್ತು ನೈಸರ್ಗಿಕ ಸೌಂದರ್ಯಕ್ಕಾಗಿ ಜನಪ್ರಿಯವಾಗಿರುವ ರಾಜಧಾನಿಯ ಉತ್ತರದಲ್ಲಿರುವ ಬಟಾಂಗ್ ಕಲಿ ಜಿಲ್ಲೆಯ ಸುಂದರವಾದ ಗುಡ್ಡಗಾಡು ಪ್ರದೇಶವಾದ ಗೆಂಟಿಂಗ್ ಹೈಲ್ಯಾಂಡ್ಸ್ ನ ಹೊರಗೆ ಈ ವಿಪತ್ತು ಸಂಭವಿಸಿದೆ.