ರುದ್ರಪ್ರಯಾಗ: ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಚೌಕಿ ಫಾಟಾದ ತರ್ಸಾಲಿ ಎಂಬಲ್ಲಿ ಭೂಕುಸಿತ ಸಂಭವಿಸಿ ಐವರು ಯಾತ್ರಿಕರು ಸಾವನ್ನಪ್ಪಿದ್ದಾರೆ. ಭೂಕುಸಿತದ ಅವಶೇಷಗಳಡಿಯಲ್ಲಿ ಅವರು ಪ್ರಯಾಣಿಸುತ್ತಿದ್ದ ಕಾರು ಹೂತು ಹೋಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಗುರುವಾರ ಸಂಜೆ ಘಟನೆ ನಡೆದಾಗ ಗುಜರಾತ್ ನ ಒಬ್ಬರು ಸೇರಿದಂತೆ ಐವರು ಸಂತ್ರಸ್ತರು ಕೇದಾರನಾಥ ಯಾತ್ರೆಗೆ ತೆರಳುತ್ತಿದ್ದರು.
“ತಾರ್ಸಾಲಿಯಲ್ಲಿ ಬಂಡೆಗಳೊಂದಿಗೆ ಗುಡ್ಡದಿಂದ ಭಾರೀ ಮಣ್ಣು ಕುಸಿದು ಬಿದ್ದಿದ್ದರಿಂದ ಕೇದಾರನಾಥ ಹೆದ್ದಾರಿಯ 60 ಮೀಟರ್ ಭಾಗವು ಕುಸಿದಿದೆ. ಈ ಸಂದರ್ಭದಲ್ಲಿ, ವಾಹನವೊಂದು ಇಲ್ಲಿನ ಅವಶೇಷಗಳಲ್ಲಿ ಹೂತುಹೋಗಿದೆ” ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ:Gratitude: ಪುನರ್‌ಜನ್ಮ ನೀಡಿದ ವ್ಯಕ್ತಿಗೆ ಸನ್ಮಾನ ! ಸಾವಿರಾರು ಜನರಿಗೆ ಔತಣಕೂಟ
“ಶುಕ್ರವಾರ ಅವಶೇಷಗಳಡಿಯಲ್ಲಿ ಹೂತುಹೋಗಿದ್ದ ವಾಹನವೊಂದು ಪತ್ತೆಯಾಗಿದ್ದು, ಅದರಲ್ಲಿ ಐದು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮೃತರಲ್ಲಿ ಒಬ್ಬರು ಗುಜರಾತ್ ನಿವಾಸಿಯಾಗಿದ್ದಾರೆ” ಎಂದು ತಿಳಿಸಿದ್ದಾರೆ.
ಈ ಘಟನೆಯಿಂದ ಕೇದಾರನಾಥ ಧಾಮಕ್ಕೆ ಹೋಗುವ ಗುಪ್ತಕಾಶಿ-ಗೌರಿಕುಂಡ್ ಹೆದ್ದಾರಿಯಲ್ಲಿ ಬ್ಲಾಕ್ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಸ್ತೆಯ ಸುಮಾರು 60 ಮೀಟರ್ ಕೊಚ್ಚಿಹೋಗಿದೆ. ತಗ್ಗು ಪ್ರದೇಶದಲ್ಲಿರುವ ಚೌಕಿ ಜವಾಡಿ, ಕೊತ್ವಾಲಿ ರುದ್ರಪ್ರಯಾಗ, ಚೌಕಿ ತಿಲವಾಡ, ಠಾಣಾ ಅಗಸ್ತ್ಯಮುನಿ, ಕಾಕಡಗಡ ಜನರು ಮತ್ತು ಪ್ರಯಾಣಿಕರು ಅಡಚಣೆ ಎದುರಿಸುತ್ತಿದ್ದಾರೆ ಎಂದು ರುದ್ರಪ್ರಯಾಗ ಪೊಲೀಸರು ತಿಳಿಸಿದ್ದಾರೆ.