ಸಿರುಗುಪ್ಪ: ತಾಲೂಕಿನಲ್ಲಿ ಇತ್ತೀಚೆಗೆ ಜೋರು ಗಾಳಿಯೊಂದಿಗೆ ಸುರಿದ ಮಳೆಯಿಂದಾಗಿ ತಾಲೂಕಿನ ಕರ್ಚಿಗನೂರು, ನಾಗಲಾಪುರ, ದೇಶನೂರು, ಕೆ. ಬೆಳಗಲ್ಲು,ಮುದ್ದಟನೂರು, ದರೂರು, ಕರೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೈತರು ಬೆಳೆದ ಸಾವಿರಾರು ಎಕರೆ ಭತ್ತದ ಬೆಳೆಯು ನೆಲಕ್ಕುರುಳಿ ಬಿದ್ದಿದ್ದು ಕೃಷಿ ಮತ್ತು ಕಂದಾಯ ಇಲಾಖೆ ಅಧಿ ಕಾರಿಗಳು ಜಂಟಿ ಸಮೀಕ್ಷೆಯನ್ನು ಆರಂಭಿಸಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ ಸುಮಾರು 28ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ಬೆಳೆದಿದ್ದು ಸೋನಾಮಸೂರಿ ಭತ್ತವನ್ನು ಶೇ.20ರಷ್ಟು ಪ್ರದೇಶದಲ್ಲಿ ಆರ್‌ಎನ್‌ಆರ್ ಭತ್ತವನ್ನು ಶೇ. 80ರಷ್ಟು ಪ್ರದೇಶದಲ್ಲಿ ಬೆಳೆಯಲಾಗಿದ್ದು, ಆರ್‌ಎನ್‌ಆರ್ ಭತ್ತದ ಬೆಳೆಯು 5-6 ಅಡಿ ಎತ್ತರವಾಗಿ ಸದೃಢವಾಗಿ ಬೆಳೆದಿದ್ದು, ತೆನೆಹೊತ್ತು ಬೆಳೆದಿದ್ದರಿಂದ ಮತ್ತು ಕೆಲವು ಕಡೆ ಕೊಯ್ಲಿಗೆ ಬಂದಿದ್ದು, ಇನ್ನೇನು 10-15ದಿನದೊಳಗೆ
ಕೊಯ್ಲು ಮಾಡಲಾಗುತ್ತದೆ ಎನ್ನುವ ಸಂದರ್ಭದಲ್ಲಿಯೇ ಅಕಾಲಿಕ ಮಳೆಯು ಬಂದಿರುವುದು ರೈತರನ್ನು ಚಿಂತೆಗೀಡುಮಾಡಿದೆ.
ಈಗಾಗಲೇ ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿಗಳು, ಗ್ರಾಮಲೆಕ್ಕಾಧಿಕಾರಿಗಳು, ತಾಲೂಕಿನ ಕರ್ಚಿಗನೂರು,ನಾಗಲಾಪುರ, ದೇಶನೂರು, ಕೆ. ಬೆಳಗಲ್ಲು, ಮುದ್ದಟನೂರು, ದರೂರು, ಕರೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನೆಲಕ್ಕೆ ಬಿದ್ದ ಭತ್ತದ ಬೆಳೆಯ ಸಮೀಕ್ಷೆಯನ್ನು ನಡೆಸುತ್ತಿದ್ದಾರೆ. ತಾಲೂಕಿನಾದ್ಯಂತ ಬಿದ್ದಿರುವ ಭತ್ತದ ಬೆಳೆಯ ಸಮೀಕ್ಷೆಯನ್ನು ಅಧಿಕಾರಿಗಳು ಮಾಡುತ್ತಿದ್ದು, ತಾಲೂಕಿನಲ್ಲಿ ನೆಲಕ್ಕೆ ಬಿದ್ದು ಹಾಳಾದ ಭತ್ತದ ಬೆಳೆ ಬಗ್ಗೆ ಸಮೀಕ್ಷೆ ಪೂರ್ಣಗೊಂಡ ನಂತರವಷ್ಟೇ ಎಷ್ಟು ಹೆಕ್ಟೇರ್‌ನಲ್ಲಿ ಭತ್ತದ ಬೆಳೆ ಹಾಳಾಗಿದೆ ಎನ್ನುವ ಸ್ಪಷ್ಟವಾದ ಮಾಹಿತಿ
ದೊರೆಯಲಿದೆ.