Advertisement
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯ ಕೆಂಪೇಗೌಡ ಪೌರಸಭಾಂಗಣದಲ್ಲಿ ಬುಧವಾರ ಬೆಳಗ್ಗೆ ಮಾಸಿಕ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ನಿರ್ಣಯದ ವಿರುದ್ಧ ಕೌನ್ಸಿಲ್ ಬಾವಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ನೀರಿನ ಸಮಸ್ಯೆ ಇಲ್ಲ: ನಗರದಲ್ಲಿ ಈ ವರ್ಷ ಜೂನ್‌ವರೆಗೆ ನೀರಿನ ಸಮಸ್ಯೆ ಸೃಷ್ಟಿಯಾಗುವುದಿಲ್ಲ ಎಂದು ಜಲಮಂಡಳಿಯ ಮುಖ್ಯ ಎಂಜಿನಿಯರ್ ದೇವರಾಜು ಹೇಳಿದ್ದಾರೆ. ಬುಧವಾರ ಪಾಲಿಕೆಯ ವಿಷಯಾಧಾರಿತ ಮಾಸಿಕ ಸಭೆಯಲ್ಲಿ ನಗರದ ನೀರಿನ ಸಮಸ್ಯೆ, ಒಳಚರಂಡಿ ನೀರು ಕೆರೆಗಳಿಗೆ ಸೇರುವುದು ಹಾಗೂ ಜಲ ಮಂಡಳಿಯ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದ ಪಾಲಿಕೆ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಬೇಸಿಗೆ ಸಮಯದಲ್ಲಿ ನೀರಿನ ಸಮಸ್ಯೆ ಸೃಷ್ಟಿಯಾಗದಂತೆ ಎಚ್ಚರವಹಿಸುವ ನಿಟ್ಟಿನಲ್ಲಿ ಜಲ ಮಂಡಳಿಯ ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನು ನೇಮಿಸಿಕೊಳ್ಳಲಾಗುತ್ತದೆ. 168 ಟ್ಯಾಂಕರ್ ವ್ಯವಸ್ಥೆಯೂ ಕಲ್ಪಿಸಲಾಗುವುದು ಎಂದು ತಿಳಿಸಿದರು.
ನಗರಕ್ಕೆ ನಿತ್ಯ 1,450 ದಶಲಕ್ಷ ಲೀ. ಕಾವೇರಿ ನೀರು ಪಂಪ್ ಮಾಡಿಕೊಳ್ಳಲಾಗುತ್ತಿದೆ. ಜೂನ್‌ವರೆಗೆ ಬೇಕಾಗುವಷ್ಟು ನೀರಿನ ಸಂಗ್ರಹ ಇದೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್, ಬೋರ್‌ವೆಲ್ ಕೊರೆಸುವಿಕೆ ಹಾಗೂ ನಿರ್ವಹಣೆಯಲ್ಲಿ ಲೋಪವಾಗುತ್ತಿದೆ. ಒಳಚರಂಡಿ ನೀರು ಕೆರೆ ಹಾಗೂ ರಾಜಕಾಲುವೆ ಸೇರುತ್ತಿದೆ. ಇದನ್ನು ತಡಿಯುವ ನಿಟ್ಟಿನಲ್ಲಿ ಯಾವುದೇ ಸುಧಾರಣೆ ಮಾಡಿಕೊಳ್ಳುತ್ತಿಲ್ಲ. ವಿಮಾನ ನಿಲ್ದಾಣ ಮಾರ್ಗದಲ್ಲಿ ವಿಳಂಬ ಕಾಮಗಾರಿಗಳಿಂದ ಅಪಘಾತಗಳಾಗುತ್ತಿವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ದೇವರಾಜು, ಮುಂದಿನ ಮಾರ್ಚ್‌ನಿಂದ ಯಾವುದೇ ರಸ್ತೆಗಳಲ್ಲಿ ಕಾಮಗಾರಿ ಪ್ರಾರಂಭಿಸುವ ಮುನ್ನ ಪಾಲಿಕೆ ಸದಸ್ಯರ ಅನುಮತಿ ಪಡೆದೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.
ವೃಷಭಾವತಿ ನದಿಗೆ ಸೇರುತ್ತಿರುವ ಒಳಚರಂಡಿ ನೀರು ತಡೆಯುವುದು ಸೇರಿದಂತೆ ನಗರದಲ್ಲಿ 450 ದಶಲಕ್ಷ ಲೀ. ಒಳಚರಂಡಿ ನೀರು ಶುದ್ಧೀಕರಣಕ್ಕೆ ಯೋಜನೆ ರೂಪಿಸಿಕೊಳ್ಳಲಾಗುತ್ತಿದ್ದು, ಈ ಯೋಜನೆ ರೂಪಗೊಂಡರೆ 2021ರ ಆಗಸ್ಟ್ ವೇಳೆಗೆ ವೃಷಭಾವತಿ ನದಿಗೆ ಹರಿಯುತ್ತಿರುವ ಶೇ 80ರಷ್ಟು ಒಳಚರಂಡಿ ನೀರು ಜಲ ಮಂಡಳಿಯ ಎಸ್‌ಟಿಪಿಗೆ ಬರಲಿದೆ. 2021ರ ಸೆಪ್ಟೆಂಬರ್ ಒಳಗೆ ಒಳಚರಂಡಿ ನೀರು ಎಸ್‌ಟಿಪಿ ಮೂಲಕವೇ ಸಾಗಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವೂ ಗಡುವು ನೀಡಿದೆ ಎಂದರು.
ಜಲಮಂಡಳಿಯಿಂದ 25 ಕೋಟಿ ರೂ.ದಂಡ ವಸೂಲಿ ಮಾಡಿ: ಸುಪ್ರಿಂ ಕೋಟ್ ಕೆರೆಗಳಿಗೆ ತ್ಯಾಜ್ಯ ನೀರು ಹರಿಸುತ್ತಿರುವುದಕ್ಕೆ ಬಿಬಿಎಂಪಿ 25 ಕೋಟಿ ರೂ. ದಂಡ ವಿಧಿಸಿದೆ. ಕೆರೆಗಳಿಗೆ ತ್ಯಾಜ್ಯ ನೀರನ್ನು ಹರಿಸುತ್ತಿರುವ ಜಲಮಂಡಳಿಯ ತಪ್ಪಿಗೆ ಬಿಬಿಎಂಪಿ ದಂಡ ಪಾವತಿ ಮಾಡಬೇಕಿದೆ. ಈಮೊತ್ತ ವನ್ನು ಜಲಮಂಡಳಿಯಿಂದ ವಸೂಲಿ ಮಾಡಿ ಎಂದು ಮಾಜಿ ಮೇಯರ್ ಮಂಜುನಾಥ್ ರೆಡ್ಡಿ ಆಗ್ರಹಿಸಿದರು.
ಟಿಪ್ಪು ಹೆಸರು ಕೈಬಿಟ್ಟಿದ್ದಕ್ಕೆ ಕಾಂಗ್ರೆಸ್ ಆಕ್ಷೇಪ: ಬೆಳ್ಳಳ್ಳಿ ವೃತ್ತಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವ ನಿರ್ಧಾರ ಕೈಬಿಟ್ಟಿರುವ ಆಡಳಿತ ಪಕ್ಷದ ಕ್ರಮಕ್ಕೆ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ವಿಷಯ ಪ್ರಸ್ತಾಪಿಸಿದ ಪಾಲಿಕೆ ಸದಸ್ಯ ಎಂ.ಶಿವರಾಜು, ಬೆಳ್ಳಳ್ಳಿ ವೃತ್ತಕ್ಕೆ ಟಿಪ್ಪು ಸುಲ್ತಾನ್ ಹೆಸರು ಇಡಲು ತೀರ್ಮಾನಿಸಲಾಗಿತ್ತು. ಈಗ ಏಕಪಕ್ಷೀಯವಾಗಿ ಅದನ್ನು ರದ್ದು ಮಾಡಲಾಗಿದೆ. ಯಾವುದೇ ವಿಚಾರವನ್ನು ರದ್ದು ಮಾಡಬೇಕಾದಲ್ಲಿ ಕೌನ್ಸಿಲ್‌ನಲ್ಲಿ ಚರ್ಚೆ ಮಾಡಬೇಕು. ಆದರೆ, ಈಗ ಏಕಾಏಕಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು. ಪ್ರತಿಪಕ್ಷ ನಾಯಕ ಅಬ್ದುಲ್ ವಾಜಿದ್ ದನಿಗೂಡಿಸಿ, ಬಿಜೆಪಿ ಆಡಳಿತ ಇದ್ದಾಗಲೇ ಈ ನಿರ್ಧಾರ ತೆಗೆದುಕೊಂಡಿದ್ದು, ಒಂದು ವೇಳೆ ರದ್ದು ಮಾಡಬೇಕಾಗಿದ್ದಲ್ಲಿ ನಿಯಮಾನುಸಾರ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ, ಮೂರನೇ ಎರಡರಷ್ಟು ಸದಸ್ಯರು ಸಹಿ ಮಾಡಿರಬೇಕು ಎಂದರು. ಪಾಲಿಕೆ ಸದಸ್ಯ ಪದ್ಮನಾಭ ರೆಡ್ಡಿ ಮಧ್ಯಪ್ರವೇಶಿಸಿ, ಈ ಬಗ್ಗೆ ನಿಯಮ 51 ಅಡಿ ಮಾಹಿತಿ ಕೇಳಿದ್ದೇನೆ. ಆದರೆ, ಆಯುಕ್ತರು ಕೌನ್ಸಿಲ್‌ಗೆ ತಂದಿಲ್ಲ. ಈ ಬಗ್ಗೆ ಅವರೇ ಸ್ಪಷ್ಟನೆ ನೀಡಲಿ ಎಂದರು. ಕೊನೆಗೆ ಈ ವಿಷಯವಾಗಿ ಕಾನೂನು ಪರಿಶೀಲಿಸಿ ನಿರ್ಧಾರ ತಿಳಿಸುವುದಾಗಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ತಿಳಿಸಿದ್ದರಿಂದ ಬೇರೆ ವಿಷಯಗಳನ್ನು ಚರ್ಚೆಗೆ ತೆಗೆದುಕೊಳ್ಳಲಾಯಿತು. ಬೆಸ್ಕಾಂ ಲೆಕ್ಕ ಹೊಂದಾಣಿಕೆ ಒಪ್ಪಂದಕ್ಕೆ ತಿಲಾಂಜಲಿ: ಬೆಸ್ಕಾಂನೊಂದಿಗೆ ಮಾಡಿಕೊಂಡಿರುವ ಲೆಕ್ಕ ಹೊಂದಾಣಿಕೆ (ಪಾಲಿಕೆ ಮತ್ತು ಬೆಸ್ಕಾಂ ನಿರ್ದಿಷ್ಟ ಕಾಮಗಾರಿಗಳಿಗೆ }ಪರಸ್ಪರ ಶುಲ್ಕ ಪಾವತಿ ಮಾಡದಿರುವ) ಒಪ್ಪಂದವನ್ನು ರದ್ದುಪಡಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡುವುದಾಗಿ ಮೇಯರ್ ಎಂ.ಗೌತಮ್‌ಕುಮಾರ್ ತಿಳಿಸಿದರು. ನಗರದ ಟೆಂಡರ್ ಶ್ಯೂರ್ ರಸ್ತೆ, ಸ್ಮಾರ್ಟ್ ಸಿಟಿ ರಸ್ತೆ ಹಾಗೂ ವೈಟ್‌ಟಾಪಿಂಗ್ ರಸ್ತೆಗಳಲ್ಲಿನ ಮೂಲ ಸೌಕರ್ಯ ವರ್ಗಾವಣೆ ಮಾಡುವ ನಿಟ್ಟಿನಲ್ಲಿ ಬೆಸ್ಕಾಂಗೆ ಪಾಲಿಕೆ 70 ಕೋಟಿ ರೂ. ಅನುದಾನ ನೀಡಿದೆ. ಆದರೆ, ಬೆಸ್ಕಾಂ ನಿರ್ದಿಷ್ಟ ಕಾಲಾವಧಿಯಲ್ಲಿ ಕೆಲಸ ಮಾಡುತ್ತಿಲ್ಲ.ಹೀಗಾಗಿ, ಪಾಲಿಕೆಯ ಕೆಲಸಗಳಿಗೂ ಹಿನ್ನಡೆಯಾಗುತ್ತಿದೆ. ಬೆಸ್ಕಾಂ ಮತ್ತು ಪಾಲಿಕೆ ಎರಡೂ ಕಾಮಗಾರಿಗಳ ಅನುಮತಿಗೆ ಪರಸ್ಪರ ಇಲಾಖೆಗಳಿಗೆ ನೀಡಬೇಕಾಗಿರುವ ಮೊತ್ತವನ್ನು ನೀಡಲಿ. ಇದರಿಂದ ಪಾಲಿಕೆಗೂ ಹಣ ಬರಲಿದೆ ಎಂದು ಹೇಳಿದರು. ಬೆಸ್ಕಾಂ ಈಗ 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ಎಚ್‌ಡಿ ಕೇಬಲ್‌ಗಳನ್ನು ಅಳವಡಿಸುತ್ತಿದ್ದು, ಇದಕ್ಕೆ ಪಾಲಿಕೆಗೆ ಶುಲ್ಕ ವಿಧಿಸಿದರೆ ಅಂದಾಜು 400 ಕೋಟಿ ರೂ. ಸಂಗ್ರಹವಾಗಲಿದೆ. ಲೆಕ್ಕ ಹೊಂದಾಣಿಕೆಯಿಂದ ಯಾವುದೇ ಲಾಭವಿಲ್ಲ. ಈ ಅವಕಾಶದಿಂದಲೇ ಬೆಸ್ಕಾಂ ಬೇಕಾಬಿಟ್ಟಿ ರಸ್ತೆ ಅಗೆಯುತ್ತಿದೆ. ನಿಯಮ ರೂಪಿಸಿ, ಎಲ್ಲೆಲ್ಲಿ ರಸ್ತೆ ಅಗೆಯುವುದಕ್ಕೆ ಬೆಸ್ಕಾಂಗೆ ಅವಕಾಶ ನೀಡಲಾಗಿದೆ ಎಂಬ ಮಾಹಿತಿ ನೀಡಿದರೆ ಪಾಲಿಕೆಯ ಸದಸ್ಯರಿಗೂ ಈ ಮಾಹಿತಿ ಸಿಗಲಿದೆ ಎಂದರು. ಶೆಡ್ ತೆರವಲ್ಲಿ ಪಾಲಿಕೆ ಪಾತ್ರವಿಲ್ಲ: ಮಾರತ್ತಹಳ್ಳಿಯಲ್ಲಿ ಕರಿಯಮ್ಮನ ಅಗ್ರಹಾರದ ಮಂತ್ರಿ ಎಸ್ಸಾ ಅರ್ಪಾಟ್‌ಮೆಂಟ್ ಸಮೀಪದಲ್ಲಿದ್ದ ತಾತ್ಕಾಲಿಕ ಶೆಡ್‌ಗಳಲ್ಲಿ ಬಾಂಗ್ಲದೇಶದ ಪ್ರಜೆಗಳು ಇದ್ದಾರೆ ಎಂದು ನಡೆದಿರುವ ತೆರುವ ಕಾರ್ಯಾಚರಣೆಯಲ್ಲಿ ಪಾಲಿಕೆಯ ಯಾವುದೇ ಪಾತ್ರವಿಲ್ಲ ಎಂದು ಬಿಬಿಎಂಪಿ ಆಯುಕ್ತ ಬಿ. ಎಚ್.ಅನಿಲ್‌ಕುಮಾರ್ ತಿಳಿಸಿದ್ದಾರೆ. ಈ ಸಂಬಂಧ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣಕ್ಕೆ ಕಾರಣಕರ್ತರಾಗಿದ್ದಾರೆ ಎನ್ನಲಾಗಿರುವ ಮೇಲೆ ತನಿಖೆ ಮಾಡುವುದಕ್ಕೆ ಜಂಟಿ ಆಯುಕ್ತರಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಗುರುವಾರ (ಇಂದು) ಹೈಕೋರ್ಟ್‌ನಲ್ಲಿ ಈ ವಿಷಯ ಚರ್ಚೆಗೆ ಬರಲಿದ್ದು, ಕೋರ್ಟ್ ನೀಡುವ ತೀರ್ಮಾನದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಎಲ್ಲದಕ್ಕೂ “ಹೌದು’ ಎನ್ನುವ ಅಧಿಕಾರಿಗಳನ್ನೇ ಬೆಸ್ಕಾಂ, ಜಲ ಮಂಡಳಿಯವರು ಸಭೆಗೆ ಕಳಿಸುತ್ತಾರೆ.
-ಮೇಯರ್ ಗೌತಮ್‌ಕುಮಾರ್ ಜಲ ಮಂಡಳಿ ಅಧಿಕಾರಿಗಳು ನಮ್ಮನ್ನು ಅಸ್ಪೃಶ್ಯರಂತೆ ನಡೆಸಿಕೊಳ್ಳುತ್ತಿದ್ದಾರೆ.
-ಮಂಜುನಾಥ ರೆಡ್ಡಿ ಬೆಸ್ಕಾಂನ ಸಿಬ್ಬಂದಿ ರಸ್ತೆ ಅಗೆಯಲು ರೌಡಿಗಳನ್ನು ಕರೆದುಕೊಂಡು ಬರುತ್ತಾರೆ.
-ಸಿ.ಆರ್.ಲಕ್ಷ್ಮೀನಾರಾಯಣ