ಟಿ. ದಾಸರಹಳ್ಳಿ: ಬೆಂಗಳೂರು ಹಾಗೂ ಸುತ್ತಮುತ್ತ ಕಬಳಿಕೆಯಾಗಿರುವ ಸರ್ಕಾರಿ ಜಮೀನನ್ನು ವಶಕ್ಕೆ ಪಡೆದು ಬಡವರಿಗೆ ಸೂರು ಒದಗಿಸುವುದರ ಜತೆಗೆ ಸಾರ್ವಜನಿಕ ಉದ್ದೇಶಕ್ಕೆ ಬಳಸಲು ಚಿಂತಿಸಲಾಗಿದೆ ಎಂದು ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು. ವಸತಿ ಯೋಜನೆಯಡಿ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ದಾಸರಹಳ್ಳಿಯ ಗಾಣಿಗರಹಳ್ಳಿ ಯಲ್ಲಿ 932 ಬಹುಮಹಡಿ ಮನೆಗಳ ವಸತಿ ಸಮುಚ್ಚಯ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಬಡವರು ಗೌರವಯುತವಾಗಿ ಸ್ವಾಭಿಮಾನದಿಂದ ಜೀವನ ನಡೆಸಲು ಅನುಕೂಲವಾಗುವಂಥ ಸುಸಜ್ಜಿತ ಸೂರು ಒದಗಿಸುವ ನಿಟ್ಟಿನಲ್ಲಿ ವಸತಿ ಯೋಜನೆಗೆ ಚಾಲನೆ ನೀಡಲಾಗಿದೆ. ಇತ್ತೀಚೆಗಷ್ಟೇ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡಿರುವ ಬಡವರಿಗೆ ಒಂದೇ ದಿನದಲ್ಲಿ ಸುಮಾರು 10 ಸಾವಿರ ಹಕ್ಕುಪತ್ರ ಗಳನ್ನು ವಿತರಿಸುವ ಮೂಲಕ ನೆಮ್ಮದಿಯಿಂದ ಜೀವನ ನಡೆಸಲು ಅನುವು ಮಾಡಿಕೊಡಲಾಗಿದೆ ಎಂದರು.
ಕಂದಾಯ ಸಚಿವ ಅಶೋಕ ಮಾತನಾಡಿ, ಪ್ರಭಾವಿ ಗಳು ಒತ್ತುವರಿ ಮಾಡಿದ್ದ ಸುಮಾರು 2500 ಎಕರೆ ಸರ್ಕಾರಿ ಜಮೀನನ್ನು ತೆರವುಗೊಳಿಸಲಾಗಿದೆ. ವಸತಿ, ಶಾಲೆ, ಆಸ್ಪತ್ರೆ ಸ್ಮಶಾನ ಇತ್ಯಾದಿ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಡಲಾಗಿದೆ ಎಂದರು. ವಸತಿ ಸಚಿವ ಸೋಮಣ್ಣ ಮಾತನಾಡಿ, ವರ್ಸಾಂತ್ಯ ದೊಳಗೆ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಠ 5 ಸಾವಿರ ಮನೆಗಳನ್ನು ಬಡವರಿಗೆ ನಿರ್ಮಿಸುವ ಭರವಸೆ ನೀಡಿದರು.
ಶಾಸಕ ಆರ್.ಮಂಜುನಾಥ್ ಮಾತನಾಡಿ, ಚಿಕ್ಕಬಾ ಣಾವರ ಹಾಗೂ ಸೋಮಶೆಟ್ಟಿಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 46 ಸಾವಿರ ಜನಸಂಖ್ಯೆ ಇದ್ದು ಮೂಲಸೌಕರ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಅಭಿವೃದ್ಧಿ ದೃಷ್ಟಿಯಿಂದ ಈ ಎರಡು ಗ್ರಾಪಂ ಗಳನ್ನು ಪುರಸಭೆಯನ್ನಾಗಿ ಮೇಲ್ದರ್ಜಗೈರಿಸಬೇಕೆಂದು ಒತ್ತಾಯಿಸಿದರು.
ಕೇಂದ್ರ ಸಚಿವ ಸದಾನಂದಗೌಡ ಮಾತನಾಡಿದರು. ರಾಜೀವ್ ಗಾಂಧಿ ವಸತಿ ನಿಗಮ ನಿ. ಎಂ.ಡಿ ಡಾ.ರಾಮ ಪ್ರಸಾಥ್ ಮನೋಹರ್, ಕಾರ್ಯದರ್ಶಿ ಮನೋಜ್ ಕುಮಾರ್, ಬೆಂ.ನಗರ ಜಿ.ಪಂ ಅಧ್ಯಕ್ಷ ಜಿ.ಮರಿಸ್ವಾಮಿ, ಸೋಮಶೆಟ್ಟಿಹಳ್ಳಿ ಗ್ರಾಪಂ ಅಧ್ಯಕ್ಷೆ ಶೃತಿ ಇದ್ದರು.