Advertisement

ಪುತ್ತೂರು: ಜಾಗದ ವಿವಾದ,ಹಲ್ಲೆ: ಮೂವರು ಆಸ್ಪತ್ರೆಗೆ  

06:19 PM Dec 01, 2022 | Team Udayavani |

ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಕಲ್ಲಡ್ಕದಲ್ಲಿ ಜಾಗದ ವಿವಾದಕ್ಕೆ ಸಂಬಂಧಿಸಿ ಎರಡು ತಂಡಗಳ ನಡುವೆ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಈ ಸಂಬಂಧ ಮೂವರು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

Advertisement

ಕೆಮ್ಮಿಂಜೆ ಗ್ರಾಮದ ಕೊಂಬಾರೆಟ್ಟು ನಿವಾಸಿ ಶಕುಂತಲಾ ರೈ, ಬೆಳ್ಳಿಪ್ಪಾಡಿ ಗ್ರಾಮದ ಕಲ್ಲಡ್ಕ ನಿವಾಸಿಗಳಾದ ಶಿವಮ್ಮ ಹಾಗೂ ಚೆನ್ನಮ್ಮ ಪುತ್ತೂರಿನ ಪ್ರತ್ಯೇಕ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.

ಪಿತ್ರಾರ್ಜಿತ ಆಸ್ತಿ: ಶಕುಂತಲಾ ರೈ:

ನನ್ನ ತಾಯಿಯಿಂದ ಪಿತ್ರಾರ್ಜಿತವಾಗಿ ಬಂದ ಸುಮಾರು 50.80 ಎಕ್ರೆ ಜಾಗದಲ್ಲಿ 50 ವರ್ಷಗಳಿಂದ ನಾನು, ಸಹೋದರಿಯರಾದ ಶ್ವೇತಾ ಪ್ರಕಾಶ್‌ ರೈ, ನವೀನಾ ರೈ, ಜಯಲತಾ ರೈ ಅವರು ಸಾಗುವಳಿ ಮಾಡುತ್ತಿದ್ದೆವು.  ಸದ್ರಿ ಜಾಗದಲ್ಲಿ ಸಂಜೀವ ಗೌಡ ಯಾನೆ ರಾಮಣ್ಣ ಗೌಡ, ಸುಭಾಶ್‌, ಹರೀಶ್‌, ಪದ್ಮನಾಭ ಗೌಡ ಅವರೊಂದಿಗೆ ತಕರಾರು ಇತ್ತು. ಈ ಕುರಿತು ಪುತ್ತೂರು ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ನ.9ರಂದು ನಮ್ಮ ಪರವಾಗಿ ತೀರ್ಪು ಆಗಿದೆ. ನ.29ರಂದು ಮಧ್ಯಾಹ್ನ ಜೆಸಿಬಿಯಲ್ಲಿ ಜಾಗವನ್ನು ಸಮತಟ್ಟು ಮಾಡುತ್ತಿದ್ದಾಗ ಹರೀಶ್‌, ಪದ್ಮನಾಭ ಗೌಡ, ಸಂಜೀವ ಗೌಡ ಯಾನೆ ರಾಮಣ್ಣ ಗೌಡ, ಪೆರ್ನುಗೌಡ, ಸುಭಾಶ್‌ ಮತ್ತು ಇತರರು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಶಕುಂತಲಾ ರೈ ಆರೋಪಿಸಿದ್ದಾರೆ.

ಡಿಕ್ಲರೇಶನ್‌ ಜಾಗ: ಶಿವಮ್ಮ, ಚೆನ್ನಮ್ಮ

Advertisement

ಹಲವು ವರ್ಷಗಳ ಹಿಂದೆಯೇ ಡಿಕ್ಲರೇಶನ್‌ ಮೂಲಕ ನಮ್ಮ ಹಿರಿಯರಿಗೆ ಸಿಕ್ಕಿದ ಜಾಗದಲ್ಲಿ ನಾವು ಕೃಷಿ ಮಾಡುತ್ತಿದ್ದೆವು. ಅದರಲ್ಲಿ ಅಡಿಕೆ ಗಿಡ ನೆಡಲಾಗಿದೆ. ಈ ಜಾಗದಲ್ಲಿ ಶಂಕರ ಗೌಡ, ಅಂಗಾರ ಗೌಡ, ಪಕೀರ ಗೌಡ, ಬಿರ್ಮಣ್ಣ ಗೌಡ, ಪದ್ಮನಾಭ ಗೌಡ, ಕೊರಗಪ್ಪ ಗೌಡ ಅವರಿಗೂ ಪಾಲು ಇದೆ. ಇತ್ತೀಚೆಗೆ ನಾವು ಮನೆಗೆ ಬೀಗ ಹಾಕಿ ಕ್ಷೇತ್ರ ದರ್ಶನಕ್ಕೆ ಹೋಗಿದ್ದೆವು. ಮರಳಿ ಬಂದು ನೋಡಿದಾಗ ನಮ್ಮ ಮನೆಯನ್ನು ನೆಲಸಮ ಮಾಡಲಾಗಿತ್ತು. ತೋಟಕ್ಕೆ ಹೋಗಿ ನೋಡಿದಾಗ ಅಲ್ಲಿ ಶ್ವೇತಾ ಪ್ರಕಾಶ್‌ ರೈ, ಶಕುಂತಲಾ ರೈ, ನವೀನಾ, ಜಯಲತಾ ಸಹಿತ 20ಕ್ಕೂ ಅಧಿಕ ಮಂದಿ ನಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು  ಶಿವಮ್ಮ ಮತ್ತು ಚೆನ್ನಮ್ಮ ಆರೋಪಿಸಿದ್ದಾರೆ.

ಶಾಸಕರ ವಿರುದ್ಧ ಆರೋಪ:

ಎಸಿ ಕೋರ್ಟ್‌ನಲ್ಲಿ ನಮ್ಮ ಪರವಾಗಿ ತೀರ್ಪು ಬಂದಿದ್ದು, ಅದನ್ನು ತಪ್ಪಿಸಲು  ಶಾಸಕರಾದ ಸಂಜೀವ ಮಠಂದೂರು ಹಲವಾರು ರೀತಿಯಲ್ಲಿ ಒತ್ತಡ ಹಾಕಿದ್ದಾರೆ. ಸಹಾಯಕ ಕಮಿಷನರ್‌ ಅವರು ನಮ್ಮ ದಾಖಲೆ ಪತ್ರ ನೋಡಿ ನಮಗೆ ನ್ಯಾಯ ಕೊಡಿಸಿದ್ದಾರೆ. ನ್ಯಾಯ ಕೊಟ್ಟ ಮರುದಿನವೇ ನ್ಯಾಯ ಮಂಡಳಿ ಸಮಿತಿ ಸದಸ್ಯರನ್ನು ತೆಗೆದು ಹಾಕಿ. ಬೇರೊಬ್ಬರನ್ನು ನೇಮಿಸಲಾಗಿದೆ.  ಈ ರೀತಿ ಜನಸಾಮಾನ್ಯರಿಗೆ ಶಾಸಕರು ಅನ್ಯಾಯ ಮಾಡುತ್ತಿದ್ದಾರೆ ಎಂದು ಶಕುಂತಲಾ ರೈ  ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next