Advertisement
ಇವರಲ್ಲಿ ಪ. ಜಾತಿಯ ಎಂಟು ಕುಟುಂಬಗಳ 32 ಮಂದಿ ಕೊಲ್ಲಮೊಗ್ರುವಿನಲ್ಲಿ ಪಂಚಾಯತ್ ವತಿಯಿಂದ ನಿರ್ಮಿಸಿದ ತಾತ್ಕಾಲಿಕ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಇನ್ನುಳಿದ 3 ಮನೆಯವರು ಸಂಬಂಧಿಕರ ಮನೆಗಳಲ್ಲಿದ್ದಾರೆ.
ಗುಡ್ಡ ಆಗಾಗ ಸ್ವಲ್ಪ ಸ್ವಲ್ಪವೇ ಕುಸಿಯುವ ಘಟನೆಗಳು ನಡೆಯುತ್ತಿವೆ. ಹೀಗಾಗಿ ಜನರಿಗೆ ತಮ್ಮ ಮನೆಗಳಲ್ಲಿ ಇರಲು ಧೈರ್ಯ ಬರುತ್ತಿಲ್ಲ. ಅವರೆಲ್ಲರೂ ಮನೆ, ಕೃಷಿ ಭೂಮಿ ಬಿಟ್ಟು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಸಂತ್ರಸ್ತರಿಗೆ ಬೇರೆಡೆ ನಿವೇಶನ ನೀಡಲು ಕೊಲ್ಲಮೊಗ್ರು ಗ್ರಾ.ಪಂ. ಸಿದ್ಧವಿತ್ತಾದರೂ ಕೃಷಿ ಭೂಮಿ ತೊರೆಯಲು ಯಾರೂ ಸಿದ್ಧರಿಲ್ಲ. ಹೀಗಾಗಿ ಪರಿಹಾರ ಕೇಂದ್ರ ತೆರೆದು ತಂಗಲು ವ್ಯವಸ್ಥೆ ಕಲ್ಪಿಸಿದೆ. ಇಲ್ಲಿ ಆಶ್ರಯ ಪಡೆದ ಕುಟುಂಬಗಳು ಸ್ವಲ್ಪ ಸಮಯ ಕಾದು ಮುಂದಿನ ತೀರ್ಮಾನಕ್ಕೆ ಬರಲಿವೆ. ಪರಿಹಾರ ಕೇಂದ್ರಕ್ಕೆ ಆವಶ್ಯಕ ಸವಲತ್ತುಗಳನ್ನು ಸರಕಾರದಿಂದ ಒದಗಿಸಲಾಗಿದೆ. ಸ್ಥಳೀಯ ಸಂಘ ಸಂಸ್ಥೆಗಳು, ದಾನಿಗಳು ನೆರವು ನೀಡಿದ್ದಾರೆ. ಸೇವಾ ಭಾರತಿ ವತಿಯಿಂದ ಅಗತ್ಯ ವಸ್ತುಗಳನ್ನು ಪೂರೈಸಲಾಗಿದೆ.
Related Articles
ಸ್ಥಳೀಯರಾದ ಮಹೇಶ್ ಕೆ. ಮತ್ತು ಅಶ್ವತ್ಥ್ ಯಾಲದಾಳು ಜತೆಗೂಡಿ ಗುಳಿಕ್ಕಾನ ಬೆಟ್ಟಕ್ಕೆ ತೆರಳಿದಾಗ ಅಚ್ಚರಿ ಹುಟ್ಟಿಸುವ ದೃಶ್ಯಗಳು ಕಂಡುಬಂದವು. ಬೆಟ್ಟದ ತುತ್ತತುದಿ ತಲುಪಿದಾಗ ಬೃಹತ್ ಗಾತ್ರದಲ್ಲಿ ಬಿರುಕು ಬಿಟ್ಟಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಬಿರುಕು 1 ಕಿ.ಮೀ. ಉದ್ದಕ್ಕೆ ವ್ಯಾಪಿಸಿದೆ.
Advertisement
ಮನೆಗಳಿಗೆ ಬೀಗ; ಸಾಕುಪ್ರಾಣಿ ಅನಾಥ!ಗುಳಿಕ್ಕಾನಕ್ಕೆ ಭೇಟಿ ನೀಡಿದಾಗ ಅಲ್ಲಿನ ಎಲ್ಲ ಮನೆಗಳಿಗೆ ಬೀಗ ಹಾಕಲಾಗಿತ್ತು. ಮನೆಗಳ ಮುಂದೆ ನಾಯಿ, ದನ ಹಾಗೂ ಕೋಳಿಗಳು ಅನ್ನಾಹಾರವಿಲ್ಲದೆ ಬಸವಳಿದಿರುವುದು ಕಂಡು ಬಂದಿದೆ. ಮನೆಯಂಗಳಕ್ಕೆ ಕಾಲಿಟ್ಟ ಕೂಡಲೇ ಅವು ಬಳಿ ಬಂದು ಆಹಾರಕ್ಕೆ ಹಾತೊರೆಯುತ್ತಿದ್ದ ದೃಶ್ಯ ಮನ ಕಲಕುವಂತಿತ್ತು. ತೆರವು ಕಾರ್ಯವಾಗಿಲ್ಲ
ಗುಡ್ಡದ ಮೇಲಿಂದ ನೆರೆ ಜತೆ ಕಲ್ಲು, ಮರ ಬಂದು ಮೂರು ಸೇತುವೆಗಳು ನೀರಿನಲ್ಲಿ ಕೊಚ್ಚಿ ಹೋಗಿ ಹಲವು ಭಾಗಕ್ಕೆ ಸಂಪರ್ಕ ಕಡಿತಗೊಂಡಿತ್ತು. ಮನೆಗಳ ಮೇಲೆ ಗುಡ್ಡ, ಬಂಡೆಕಲ್ಲು, ಮರ ಬಿದ್ದು ಹಾನಿಯಾಗಿತ್ತು. ಮನೆಗಳ ಮೇಲೆ ಬಿದ್ದ ಮಣ್ಣಿನ ತೆರವು ನಡೆಸಿಲ್ಲ. ನಿಲ್ಲದ ಮಳೆ, ಗುಡ್ಡ ಮತ್ತಷ್ಟು ಜರಿಯುವ ಭಯ ತೆರವು ಕಾರ್ಯಕ್ಕೆ ಅಡ್ಡಿಯಾಗಿದೆ. ವಿಜ್ಞಾನಿಗಳ ಬರುವಿಕೆಯ ನಿರೀಕ್ಷೆ
ಸಂತ್ರಸ್ತರಿಗೆ ತಾತ್ಕಾಲಿಕ ನಿರಾಶ್ರಿತ ಕೇಂದ್ರಗಳಲ್ಲಿ ತಂಗಲು ವ್ಯವಸ್ಥೆ ಇದೆ. ಗುಡ್ಡದ ತಪ್ಪಲಿನ ಜನವಸತಿ ಪ್ರದೇಶ ವಾಸಕ್ಕೆ ಯೋಗ್ಯವೇ ಎನ್ನುವ ಕುರಿತು ಭೂಗರ್ಭಶಾಸ್ತ್ರಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದ ಬಳಿಕ ತೀರ್ಮಾನಕ್ಕೆ ಬರಲಾಗುತ್ತದೆ ಎನ್ನಲಾಗಿದೆ. ತಜ್ಞರು ಶೀಘ್ರ ಬರುವ ನಿರೀಕ್ಷೆ ಇದೆ.
– ಕುಂಞಮ್ಮ , ಸುಳ್ಯ ತಹಶೀಲ್ದಾರ್ 50 ಎಕರೆ ವ್ಯಾಪ್ತಿಯ ಗುಡ್ಡ ಜರಿಯುವ ಆತಂಕ
ಐವತ್ತು ಎಕರೆ ವಿಸ್ತಾರ ವ್ಯಾಪ್ತಿಯಲ್ಲಿ ಗುಡ್ಡ ಜರಿಯಲು ಸಿದ್ಧವಾಗಿದೆಯೇ ಎಂಬ ಶಂಕೆ ಹುಟ್ಟಿಸುವಂತಿದೆ. ಭೇಟಿ ವೇಳೆಯೂ ಗುಡ್ಡ ಜರಿಯುತ್ತಲೇ ಇತ್ತು. ಈ ಬೃಹತ್ ಗುಡ್ಡದ ಬದಿಯಲ್ಲಿ ಸಂತ್ರಸ್ತ 11 ಕುಟುಂಬಗಳ ಮನೆ ಮಾತ್ರವಲ್ಲದೆ ಇನ್ನೂ ಹಲವಾರು ಮನೆ ಹಾಗೂ ಕೃಷಿ ಭೂಮಿಗೆ ಹಾನಿ ಸಂಭವಿಸುವ ಸಾಧ್ಯತೆ ಇದೆ. ಮಣ್ಣಿನ ಜತೆಗೆ ಬಂಡೆಗಳು, ಭಾರೀ ಗಾತ್ರದ ಮರ, ಗಿಡಗಳು ಉರುಳಿ ವ್ಯಾಪ್ತಿ ವಿಸ್ತರಿಸುವ ಸಾಧ್ಯತೆಯಿದೆ. *ಬಾಲಕೃಷ್ಣ ಭೀಮಗುಳಿ