ದಾವಣಗೆರೆ: ತಾಂಡಾ, ಹಾಡಿ, ಕಾಲೋನಿ, ಹಟ್ಟಿ, ದೊಡ್ಡಿ, ಪಾಳ್ಯ,ಕ್ಯಾಂಪ್‌ನಂತಹ ದಾಖಲೆರಹಿತ ಗ್ರಾಮಗಳ ವಾಸಿಗಳಿಗೆ ಭೂ ಒಡೆತನ ಕೊಡಮಾಡುವಂತಹ ಕರ್ನಾಟಕ ಭೂ ಸುಧಾರಣೆಗಳ(ತಿದ್ದುಪಡಿ) ಮಸೂದೆ ಆದಷ್ಟು ಬೇಗ ಕಾನೂನು ರೂಪ ಪಡೆದು, ಕಾರ್ಯರೂಪಕ್ಕೆ ಬರುವಂತಾಗಬೇಕು ಎಂದು ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ. ಶಿವಮೂರ್ತಿ ಆಶಯ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅತ್ಯಂತ ಮಹತ್ವ, ಕ್ರಾಂತಿಕಾರಿ ಕರ್ನಾಟಕ ಭೂ ಸುಧಾರಣೆಗಳ(ತಿದ್ದುಪಡಿ) ಮಸೂದೆ ಅಂಗೀಕರಿಸುವ ಮೂಲಕ ರಾಜ್ಯದ 58 ಸಾವಿರ ತಾಂಡಾ, ಹಾಡಿ, ಕಾಲೋನಿ, ಹಟ್ಟಿ, ದೊಡ್ಡಿ, ಪಾಳ್ಯ,ಕ್ಯಾಂಪ್‌ನಂತಹ ದಾಖಲೆರಹಿತ ಗ್ರಾಮಗಳ ವಾಸಿಗಳಿಗೆ ಭೂ ಒಡೆತನ ಹೊಂದಲಿದ್ದಾರೆ.
ಈ ತಿದ್ದುಪಡಿ ಮಸೂದೆ ಆದಷ್ಟು ಬೇಗನೇ ಅನುಷ್ಠಾನಗೊಳಿಸುವ ಮೂಲಕ ಹಲವಾರು ದಶಕಗಳ ಬೇಡಿಕೆ ಈಡೇರಿಸುವಂತಾಗಬೇಕು ಎಂಬುದು ತಮ್ಮ ಅಭಿಲಾಷೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ದಾಖಲೆರಹಿತ ಗ್ರಾಮ ತಾಂಡಾ, ಹಾಡಿ, ಕಾಲೋನಿ, ಹಟ್ಟಿ, ದೊಡ್ಡಿ, ಪಾಳ್ಯ,ಕ್ಯಾಂಪ್ ನಂತಹ ದಾಖಲೆರಹಿತ ಗ್ರಾಮಗಳ ವಾಸಿಗಳಿಗೆ ಮನೆ, ಭೂ ಒಡೆತನದ ಹಕ್ಕೇ ಇರಲಿಲ್ಲ.
ಕಂದಾಯಗ್ರಾಮಗಳ ಮಾನ್ಯತೆ ಇಲ್ಲದ ಕಾರಣಕ್ಕೆ ಯಾವುದೇ ಮೂಲಭೂತ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತಿರಲಿಲ್ಲ. ಕರ್ನಾಟಕ ಭೂ ಸುಧಾರಣೆಗಳ(ತಿದ್ದುಪಡಿ) ಮಸೂದೆ ಮೂಲಕ ಕಂದಾಯಗ್ರಾಮ ಮಾನ್ಯತೆ ದೊರೆಯುವ ಜೊತೆಗೆ ಅಯಾಯ ಗ್ರಾಮಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸುರವರು ಜಾರಿಗೆ ತಂದಂತಹ ಊಳುವವನೆ ಒಡೆಯ… ಕಾಯ್ದೆ ನಂತರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಾಸಿಸುವನೇ ಒಡೆಯ.. ಎಂಬ ಮಸೂದೆ ಅಂಗೀಕರಿಸಿದೆ. ಇಂತಹ ಕ್ರಾಂತಿಕಾರಿ ಮಸೂದೆ ಮಂಡಿಸಿ, ಅಂಗೀಕಾರವಾಗಲು ಎಲ್ಲಾ ಹಂತದಲ್ಲಿ ಶ್ರಮಿಸಿದ ಮತ್ತು ಸಹಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆ.ಬಿ. ಕೋಳಿವಾಡ, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಕಾನೂನು ಸಚಿವ ಟಿ.ಜಿ. ಜಯಚಂದ್ರ… ಒಳಗೊಂಡಂತೆ ಎಲ್ಲಾ ಶಾಸಕರಿಗೆ ತಾವು ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಬೆಳಗಾವಿ ಅಧಿವೇಶನದಲ್ಲಿ ನಾನೇ ಖಾಸಗಿ ಮಸೂದೆ ಮಂಡಿಸಿದ್ದಾಗ ಖಾಸಗಿ ಮಸೂದೆ ವಾಪಾಸ್ಸು ಪಡೆದಲ್ಲಿ ಸರ್ಕಾರದಿಂಲೇ ಮಸೂದೆ ಮಂಡಿಸುವುದಾಗಿ ಭರವಸೆ ನೀಡಿದ್ದಂತೆ ಈಗ ಮಸೂದೆಯನ್ನು ಅಂಗೀಕರಿಸಲಾಗಿದೆ. ಈ ಮಸೂದೆ ಅಂಗೀಕಾರಕ್ಕೆ ಕಾರಣವಾಗಿರುವ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ, ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್‌ಗಾಂಧಿ ಮತ್ತು ಪ್ರಿಯಾಂಕಗಾಂಧಿ ಅವರಿಗೆ ಮಧ್ಯ ಕರ್ನಾಟಕದ ಪ್ರಮುಖ ಸ್ಥಳದಲ್ಲಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ತಾಂಡಾ, ಹಾಡಿ, ಕಾಲೋನಿ, ಹಟ್ಟಿ, ದೊಡ್ಡಿ, ಪಾಳ್ಯ,ಕ್ಯಾಂಪ್‌ಗ್ಳ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಹಿಂದುಳಿದಿವೆ. ಸರ್ಕಾರಿ ಶಾಲೆಗಳಿಲ್ಲ, ಇದ್ದರೂ ಸರಿಯಾಗಿ ಶಿಕ್ಷಕರು ಇರುವುದಿಲ್ಲ. ಆರ್ಥಿಕವಾಗಿ ಹೇಳಿಕೊಳ್ಳುವ ವಾತಾವರಣ ಇಲ್ಲ. ಹಾಗಾಗಿ ದಾಖಲೆರಹಿತ ಗ್ರಾಮಗಳಿಗೆ ಕಂದಾಯ ಗ್ರಾಮಗಳ ಮಾನ್ಯತೆ ನೀಡುವ ಮುನ್ನ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಧ್ಯಯನಕ್ಕೆ ಶೀಘ್ರವೇ ಸಮಿತಿ ರಚಿಸಬೇಕು ಎಂದು ತಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುವುದಾಗಿ ತಿಳಿಸಿದರು.