ಯಾದಗಿರಿ: ಅಲೆಮಾರಿ, ಅರೆ ಅಲೆಮಾರಿ ಜನಾಂಗದ ಭೂರಹಿತ ಕೃಷಿ ಕಾರ್ಮಿಕ ಫಲಾನುಭವಿಗಳಿಗೆ ಭೂ ಖರೀದಿ ಯೋಜನೆಯಡಿ ಭೂಮಿ ನೀಡಲು ಸರಕಾರಿ ಭೂ ಖರೀದಿ ನಿಯಮಗಳ ಆಧಾರದಲ್ಲಿ ಖರೀದಿಸಲು ದರ ನಿಗದಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮದ ವತಿಯಿಂದ 2018-19ನೇ ಸಾಲಿನ ಅಲೆಮಾರಿ, ಅರೆ ಅಲೆಮಾರಿ ಜನಾಂಗದ ಭೂ ರಹಿತರಿಗೆ ಭೂ ಖರೀದಿ ಯೋಜನೆಯಡಿ ಭೂ ಖರೀದಿ ದರ ನಿಗದಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಟ್ಟು 46 ಉಪ ಜಾತಿಗಳು ಬರುವ ಅಲೆಮಾರಿ, ಅರೆ ಅಲೆಮಾರಿ ಜಾತಿಗಳ ಭೂ ರಹಿತ ಕೃಷಿ ಕಾರ್ಮಿಕರಿಗೆ ನೀರಾವರಿ ರಹಿತ ಭೂಮಿಯನ್ನು ಪ್ರತಿ ಫಲಾನುಭವಿಗೆ 2 ಎಕರೆ, ನೀರಾವರಿ ಸಹಿತ ಭೂಮಿಯನ್ನು ಪ್ರತಿ ಫಲಾನುಭವಿಗೆ 1 ಎಕರೆ ಶೇ.50ರಷ್ಟು ಸಬ್ಸಿಡಿ ಹಾಗೂ ಶೇ.50ರಷ್ಟು ಸಾಲ ಆಧಾರದ ಮೇಲೆ ನೀಡಲಾಗುವುದು ಎಂದು ಹೇಳಿದರು.
ಪ್ರತಿ ಎಕರೆಗೆ 15 ಲಕ್ಷ ರೂ. ಒಳಗೆ ಖರೀದಿಗೆ ಅವಕಾಶವಿದೆ. ಜಿಲ್ಲೆಯಲ್ಲಿ 12 ಜನ ಭೂ ಮಾಲೀಕರು ತಮ್ಮ ಭೂಮಿ ನೀಡಲು ಮುಂದೆ ಬಂದಿದ್ದಾರೆ. ಅವರಿಂದ ಒಟ್ಟು 67 ಎಕರೆ ಭೂಮಿ ಖರೀದಿಗೆ ದರ ನಿಗದಿಪಡಿಸಲಾಗಿದೆ. ಯೋಜನೆಯಡಿ 52 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಶಹಾಪುರ ತಾಲೂಕಿನ 50 ಹಾಗೂ ಸುರಪುರ ತಾಲೂಕಿನ ಇಬ್ಬರು ಫಲಾನುಭವಿಗಳಿದ್ದಾರೆ ಎಂದು ಮಾಹಿತಿ ನೀಡಿದರು.
ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಜಗದೇವಪ್ಪ ಪೂಜಾರಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿಠ್ಠಲ ಮುದೂ°ರ, ಕೃಷಿ ಇಲಾಖೆಯ ರಾಜಕುಮಾರ, ಜಿಲ್ಲಾ ಉಪ ನೋಂದಣಾಧಿಕಾರಿ ಸೇರಿದಂತೆ ಜಮೀನಿನ ಮಾಲೀಕರು ಹಾಗೂ ಫಲಾನುಭವಿಗಳು ಸಭೆಯಲ್ಲಿ ಹಾಜರಿದ್ದರು.