Advertisement

ಸ್ವಾವಲಂಬಿ ನಿಮ್ಮ ಜಮೀನಿನ ನಕ್ಷೆ ನೀವೇ ಮಾಡಿಕೊಳ್ಳಿ!

09:01 AM Sep 05, 2022 | Team Udayavani |

ಮಂಗಳೂರು : ನಾಗರಿಕರು ತಮ್ಮ ಜಮೀನಿನ ನಕ್ಷೆಗಳನ್ನು ಸ್ವತಃಮಾಡಿಕೊಳ್ಳುವ ನಿಟ್ಟಿನಲ್ಲಿ ವಿನೂತನ ಸ್ವಾವಲಂಬಿ ವ್ಯವಸ್ಥೆಯನ್ನು ರಾಜ್ಯ ಸರಕಾರದ ಭೂಮಾಪನ ಕಂದಾಯ ವ್ಯವಸ್ಥೆ ಹಾಗೂ ಭೂದಾಖಲೆಗಳ ಇಲಾಖೆ ಜಾರಿಗೆ ತಂದಿದೆ. ಈ ವಿನೂತನ ವ್ಯವಸ್ಥೆ (ಆಪ್ಲಿಕೇಶನ್‌) ದೇಶದಲ್ಲೇ ಪ್ರಥಮವಾಗಿದೆ.

Advertisement

ನಾಗರಿಕರು ತಮ್ಮ ಜಮೀನಿನ ಒಂದು ಭಾಗವನ್ನು ಮಾರಾಟ ಮಾಡುವ ಸಂದರ್ಭದಲ್ಲಿ ನೋಂದಣಿಗೆ ಒಳಪಡಿಸುವ ಸಲುವಾಗಿ 11ಇ ನಕ್ಷೆ, ತಮ್ಮ ಜಮೀನಿನಲ್ಲಿ ಪೋಡಿ (ಭಾಗವನ್ನು) ಮಾಡಿಕೊಳ್ಳುವ ಬಗ್ಗೆ ನಕ್ಷೆ, ಕೃಷಿ ಜಮೀನಿನ ಒಂದು ಭಾಗವನ್ನು ಕೃಷಿಯೇತರ ಉದ್ದೇಶಕ್ಕಾಗಿ ಭೂಪರಿವರ್ತನೆ ಮಾಡಿಸಿಕೊಳ್ಳುವ ಬಗ್ಗೆ ನಕ್ಷೆ, ತಾವು ಹೊಂದಿರುವ ಕೃಷಿ ಜಮೀನಿನಲ್ಲಿ ತಮ್ಮ ಹಕ್ಕಿನ ವೈಯುಕ್ತಿಕ ಭಾಗಾಂಶವನ್ನು ತೋರಿಸುವ ಸಂಬಂಧ ನಕ್ಷೆಯನ್ನು ಖುದ್ದು ಮಾಡಬಹುದಾಗಿದೆ. ಈವರೆಗೆ ಈ ಕೆಲಸಗಳನ್ನು ಭೂಮಾಪನ ಕಂದಾಯ ವ್ಯವಸ್ಥೆ ಹಾಗೂ ಭೂದಾಖಲೆಗಳ ಇಲಾಖೆ ಭೂಮಾಪಕರ ಮೂಲಕ ಮಾಡಿಸುತ್ತಿತ್ತು.

ಸ್ವಾವಲಂಬಿಯಲ್ಲಿ ಒಂದು ಜಮೀನಿನ ಎಲ್ಲ ಪಹಣಿದಾರರು (ಆರ್‌ಟಿಸಿ) ಎಲ್ಲ ಒಟ್ಟಾಗಿ ಸೇರಿಕೊಂಡು ಭೂಮಾಪನ ಇಲಾಖೆಯಿಂದ ಪರವಾನಿಗೆ ಹೊಂದಿರುವ, ಇಲ್ಲವೆ ಖಾಸಗಿ ಭೂಮಾಪಕರು, ಭೂಮಾಪನ ಬಗ್ಗೆ ಅನುಭವ ಇರುವವರಿಂದ ಅವರ ಜಾಗ ಅಳತೆ ಮಾಡಿಕೊಳ್ಳಲು ಅವಕಾಶವಿದೆ. ಭೂಮಾಪನ ಮಾಡುವ ಆ ಜಮೀನಿನ ಎಲ್ಲ ಪಹಣಿದಾರರ ಹಾಜರಾತಿ ಕಡ್ಡಾಯವಿರುತ್ತದೆ. ಅವರೇ ಭೂಮಾಪನ ಮಾಡಿ ನಕ್ಷೆಯನ್ನು ಸಲ್ಲಿಸಲು ಅವಕಾಶವಿರುತ್ತದೆ.

ಅನುಸರಿಸಬೇಕಾದ ವಿಧಾನ
ರಾಜ್ಯ ಸರಕಾರದ rdservices.karnataka.gov.in ವೆಬ್‌ಸೈಟ್‌ಗೆ ಹೋಗಿ ಸ್ವಾವಲಂಬಿ ಲಿಂಕ್‌ಗೆ ಕ್ಲಿಕ್‌ ಮಾಡಿಕೊಳ್ಳಬೇಕು. ಬಳಿಕ ಮೊಬೈಲ್‌ ನಂಬರ್‌ ಹಾಕಿ ಲಾಗಿನ್‌ ಆಗಬೇಕು. ಆಗ ಒನ್‌ಟೈಮ್‌ ಒಟಿಪಿ ಬರುತ್ತದೆ ಅದನ್ನು ಹಾಕಿ ಅಧಿಕೃತಗೊಳಿಸಿದ ಬಳಿಕ ಅರ್ಜಿದಾರರ ವಿವರಗಳ ಮೇಲೆ ಕ್ಲಿಕ್‌ ಮಾಡಿ ಅವಶ್ಯವಿರುವ ನಕ್ಷೆಯನ್ನು ನಮೂದಿಸಿ ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಿ ಅಪ್‌ಲೋಡ್‌ ಮಾಡಬೇಕು. ಇದನ್ನು ಇಲಾಖೆ ಪರಿಶೀಲಿಸುತ್ತದೆ. ಆಧಾರ್‌ನಲ್ಲಿರುವ ಹೆಸರು ಹಾಗೂ ಆರ್‌ಟಿಸಿಯಲ್ಲಿರುವ ಹೆಸರು ಹೊಂದಾಣಿಕೆ ಆಗಬೇಕು. ಅರ್ಜಿ ಸಲ್ಲಿಸಿದ 48 ತಾಸುಗಳೊಳಗೆ ಅವರಿಗೆ ಸಂಬಂದಿಸಿದ ಎಫ್‌ಎಂಬಿ ನಕ್ಷೆಯನ್ನು ಸ್ಕೇಲ್‌ಗೆ ಜೋಡಿಸಿ ವೆಬ್‌ಸೈಟ್‌ ಮೂಲಕ ಇಲಾಖೆ ಮರಳಿ ಅಪ್‌ಲೋಡ್‌ ಮಾಡುತ್ತದೆ. ಅದನ್ನು ಅರ್ಜಿದಾರರು ತಮ್ಮ ಮೊಬೈಲ್‌ ನಂಬರ್‌ ಹಾಕಿ ವೆಬ್‌ಸೈಟ್‌ಗೆ ಲಾಗಿನ್‌ ಆಗಿ ಡೌನ್‌ಲೋಡ್‌ ಮಾಡಿಕೊಂಡು ಅವರ ಜಮೀನಿನೊಳಗಡೆ ಅಗತ್ಯಕ್ಕೆ ತಕ್ಕಂತೆ ನಕ್ಷೆಗಳನ್ನು ಮಾಡಿಕೊಂಡು ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಬೇಕು. ಇದಾದ‌ ಬಳಿಕ ಅವರು ಅಪ್‌ಲೋಡ್‌ ಮಾಡಿರುವ ನಕ್ಷೆಯನ್ನು ಪ್ರದೇಶ ವಿಸ್ತೀರ್ಣಕ್ಕೆ ಅನುಗುಣವಾಗಿ ಇದೆಯೇ ಎಂದು ಇಲಾಖೆ ಪರಿಶೀಲಿಸಿ ಪಹಣಿ ವಿಸ್ತೀರ್ಣಕ್ಕೆ ಅನುಗುಣವಾಗಿ ಮಾಡಿಕೊಂಡಿದ್ದರೆ ಯಾವುದೇ ಅಭ್ಯಂತರಗಳನ್ನು ಹಾಕದೆ ಅವರು ಸಲ್ಲಿಸಿರುವ ಅರ್ಜಿಗಳಿಗೆ ಅನುಗುಣವಾಗಿ ಭೂದಾಖಲೆಯಲ್ಲಿ ನಿರ್ವಹಣೆಯನ್ನು ಮಾಡಿಕೊಂಡು ನಕ್ಷೆಗಳನ್ನು ವಿತರಿಸಲಾಗುತ್ತದೆ.

ಇದನ್ನೂ ಓದಿ : ಬಾಲಿವುಡ್‌ ಹ್ಯಾಂಡ್ಸಮ್‌ ಹಂಕ್‌ ಹೃತಿಕ್‌ ರೋಷನ್ ಹಾಟ್‌ ಲುಕ್ಸ್

Advertisement

ಅನುಕೂಲಗಳು
ಈವರೆಗೆ ನಾಗರಿಕರು ತಮ್ಮ ಜಮೀನುಗಳ ನಕ್ಷೆಗಾಗಿ ಅರ್ಜಿ ಸಲ್ಲಿಸಿದರೆ ಸರಕಾರಿ ಅಥವಾ ಪರವಾನಿಗೆ ಪಡೆದ ಸರ್ವೇಯರ್‌ಗಳು ನಕ್ಷೆಯನ್ನು ಸಿದ್ಧಮಾಡಿ ನೀಡುತ್ತಿದ್ದ‌ರು. ಸೀಮಿತ ಸಂಖ್ಯೆಯಲ್ಲಿ ಸರ್ವೇಯರ್‌ಗಳಿರುವುದರಿಂದ ಇದಕ್ಕೆ ತಿಂಗಳುಗಟ್ಟಲೆ ಕಾಲಾವಕಾಶ ತೆಗೆದುಕೊಳ್ಳುತ್ತಿದೆ. ಸ್ವಾವಲಂಬಿ ಯೋಜನೆಯಲ್ಲಿ ಇಲಾಖಾ ಸರ್ವೇಯರ್‌ಗಳಿಗೆ ಕಾಯದೆ ತಮಗೆ ಬೇಕಾದ ಸರ್ವೇಯರ್‌ಗಳನ್ನು ಗೊತ್ತು ಮಾಡಿಕೊಂಡು ವಿಳಂಬವಿಲ್ಲದೆ ನಕ್ಷೆ ಮಾಡಿಸಬಹುದುದಾಗಿದೆ. ನಾಗರಿಕರು ತ್ವರಿತವಾಗಿ ಎಲ್ಲ ಪ್ರಕ್ರಿಯೆಗಳನ್ನು ಮಾಡಿದರೆ 3ರಿಂದ 6 ದಿನಗಳೊಳಗೆ ನಕ್ಷೆ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿದ 48 ತಾಸುಗಳೊಳಗೆ ಇಲಾಖಾ ಎಫ್‌ಎಂಬಿಯನ್ನು ಅಪ್‌ಲೋಡ್‌ ಮಾಡುತ್ತದೆ.ಎಲ್ಲ ರೈತರು, ನಾಗರಿಕರು ತಮ್ಮ ಜಮೀನಿನ ನಕ್ಷೆಯನ್ನು ತಾವೆ ಮಾಡಿಕೊಳ್ಳಲು ಮುಕ್ತ ಅವಕಾಶ ಇದಾಗಿದೆ. ಭೂಮಾಪನ ಕಚೇರಿಗೆ ಅಲೆದಾಡುವ ಪ್ರಸಂಗವಿಲ್ಲ.

– ಕೇಶವ ಕುಂದರ್

 

Advertisement

Udayavani is now on Telegram. Click here to join our channel and stay updated with the latest news.

Next