– ಅಜೇಯ್‌ರಾವ್ ಹೀಗೆ ಹೇಳಿ ಹಾಗೊಂದು ಸ್ಮೈಲ್ ಕೊಟ್ಟರು. ಅವರು ಹೇಳಿಕೊಂಡಿದ್ದು ತಮ್ಮ ಸಿನಿ ಮ್ಯಾಚ್ ಫಲಿತಾಂಶದ ಬಗ್ಗೆ. ಸಿನಿಮಾ ಎಂಬ ಮ್ಯಾಚ್‌ನಲ್ಲಿ ಅವರೊಬ್ಬ ಬ್ಯಾಟ್ಸ್‌ಮನ್ ಅಂದುಕೊಂಡರೆ ತಪ್ಪಿಲ್ಲ. ಹೌದು, ಅಜೇಯ್‌ರಾವ್ ಅವರ ಬಹುತೇಕ ಗೆಳೆಯರು, “ಅಜೇಯ್ ಸಿನಿಮಾ ಫೇಲ್ ಆದರೂ, ಅಜೇಯ್ ಫೇಲ್ ಆಗಲ್ಲ. ಅವರೊಂಥರಾ ಕ್ರಿಕೆಟ್ ರಂಗದ ವಾಲ್ ಇದ್ದಂಗೆ. ಆ ಕಡೆ ಸಿಕ್ಸರ್ ಬಾರಿಸಲ್ಲ. ಈ ಕಡೆ ಬೌಂಡರಿಯೂ ಬಾರಿಸದೆ ಔಟ್ ಆಗದ ಬ್ಯಾಟ್ಸ್‌ಮನ್’ ಅಂತ ಆಗಾಗ ಹೇಳುತ್ತಿರುತ್ತಾರಂತೆ. ಗೆಳೆಯರ ಮಾತಿಗೆ ಧ್ವನಿಯಾಗುವ ಅಜೇಯ್, “ಸ್ಕೋರ್ ಮಾಡುವ ಆಸೆಯಂತೂ ಇದೆ. ಒಂದಲ್ಲ ಒಂದು ದಿನ ಮತ್ತೆ ಸೆಂಚುರಿ ಬಾರಿಸುವ ಆಶಾಭಾವನೆಯಲ್ಲೇ ಬ್ಯಾಟ್ ಹಿಡಿದು ನಿಂತಿದ್ದೇನೆ. ಒಮ್ಮೊಮ್ಮೆ ಸೋಲು ಸಾಮಾನ್ಯ. ಆದರೆ ಗೆಲುವಿಗೆ ನಿರಂತರ ಪ್ರಯತ್ನ ಇದ್ದೇ ಇರುತ್ತೆ’ ಎಂದು ತಮ್ಮ ವೃತ್ತಿಬದುಕಿನ ಸೋಲು-ಗೆಲುವಿನ ಕುರಿತು ಹೇಳುತ್ತಾರೆ.
Advertisement
ಸಿನಿಮಾರಂಗ ಮಾತ್ರವಲ್ಲ, ಇತರೆ ಕ್ಷೇತ್ರಗಳಲ್ಲಿ ಯಾರು ಸೋತಿಲ್ಲ ಹೇಳಿ? ಅಜೇಯ್ ಕೂಡ ಗೆದ್ದು ಸೋತಿದ್ದಾರೆ. ಪ್ರತಿ ಚಿತ್ರದಲ್ಲೂ ಗೆಲ್ಲಬೇಕೆಂಬ ನಂಬಿಕೆಯಲ್ಲೇ ಕೆಲಸ ಮಾಡುತ್ತಾರೆ. ಆದರೆ, ನಸೀಬು ಅನ್ನೋದು ಅಷ್ಟೇ ಮುಖ್ಯ. ಈಗ ಅಂಥದ್ದೊಂದು ಬಲವಾದ ಅದೃಷ್ಟ ನಂಬಿ ಹೊರಟಿರುವ ಅಜೇಯ್ ಮೊಗದಲ್ಲಿ ಮಂದಹಾಸವಿದೆ. ಕಾರಣ, ಕೈಯಲ್ಲಿ ಎರಡು ಚಿತ್ರಗಳಿವೆ. ಆ ಎರಡೂ ಸಿನಿಮಾಗಳು ಅಜೇಯ್ ಸಿನಿಕೆರಿಯರ್‌ನಲ್ಲಿ ಹೊಸಬಗೆಯ ಚಿತ್ರಗಳು ಎಂಬುದು ವಿಶೇಷ. ಆ ಕುರಿತು ಅಜೇಯ್ ಹೇಳುವುದಿಷ್ಟು. “ಪ್ರತಿ ಸ್ಕ್ರಿಪ್ಟ್ ಮೇಲೂ ನಂಬಿಕೆ ಸಹಜ. ಎಲ್ಲದರಲ್ಲೂ ಪ್ರಾಮಾಣಿಕ ಪ್ರಯತ್ನ ಇದ್ದೇ ಇರುತ್ತೆ. ಈಗ ಇದೇ ಮೊದಲ ಬಾರಿಗೆ ನಾನು ಥ್ರಿಲ್ಲರ್ ಕಥಾಹಂದರ ಹೊಂದಿರುವ “ಕೃಷ್ಣ ಟಾಕೀಸ್’ ಚಿತ್ರ ಮಾಡುತ್ತಿದ್ದೇನೆ. ಶೇ.80 ರಷ್ಟು ಮುಗಿದಿದೆ. ಇದಾದ ಬಳಿಕ, ಕಿಸ್ಟಲ್ ಪಾರ್ಕ್ ಬ್ಯಾನರ್‌ನಲ್ಲಿ ಚಂದ್ರಶೇಖರ್ ನಿರ್ಮಾಣದ ಪಕ್ಕಾ ಕಾಮಿಡಿ ಸಿನಿಮಾದಲ್ಲಿ ಮಾಡುತ್ತಿದ್ದೇನೆ. ಅದರಲ್ಲೂ ಹಳ್ಳಿ ಸೊಗಡಿನ, ಮಂಡ್ಯ ಭಾಷೆಯೇ ತುಂಬಿರುವ ಚಿತ್ರವದು. ಈ ಎರಡು ಚಿತ್ರಗಳು ನನಗೆ ಹೊಸ ಜಾನರ್’ ಎಂದು ವಿವರ ಕೊಡುತ್ತಾರೆ.
ಎಲ್ಲಾ ಸರಿ, ಅಜೇಯ್‌ರಾವ್ ಅವರ ಇತ್ತೀಚಿನ ಕೆಲ ಚಿತ್ರಗಳನ್ನು ಗಮನಿಸಿದರೆ, ಎಲ್ಲವೂ “ಕೃಷ್ಣ’ ಸೀಕ್ವಲ್ ಶೀರ್ಷಿಕೆಯನ್ನೇ ಹೊತ್ತು ಬಂದಿವೆ. “ಕಷ್ಟನ್ ಲವ್‌ಸ್ಟೋರಿ’, “ಕೃಷ್ಣನ್ ಮ್ಯಾರಜೇಜ್ ಸ್ಟೋರಿ’, “ಕೃಷ್ಣ ಲೀಲ’, “ಕೃಷ್ಣ ಸನ್ ಆಫ್ ಸಿಎಂ’ ಈಗ “ಕೃಷ್ಣ ಟಾಕೀಸ್’. ಈ ಬಗ್ಗೆ ಅಜೇಯ್ ಹೇಳಿದ್ದಿಷ್ಟು. “ನನ್ನ ಹಿಂದಿನ ಎಲ್ಲಾ ಚಿತ್ರ ನೋಡಿದರೆ, ಆನ್‌ಸ್ಕ್ರೀನ್ ನಲ್ಲಿ ಕೃಷ್ಣ ಎಂಬ ಹೆಸರಿರುತ್ತೆ ಅಥವಾ ಅಜೇಯ್ ಅಂತ ಹೆಸರಿರುತ್ತೆ. ಆದರೆ, “ಕೃಷ್ಣ ಟಾಕೀಸ್’ ಚಿತ್ರದಲ್ಲಿ ನನ್ನ ಹೆಸರು ಕೃಷ್ಣ ಅಲ್ಲ. ಅಲ್ಲಿ ಅಜೇಯ್ ಹೆಸರಿನ ಪಾತ್ರ ಮಾಡಿದ್ದೇನೆ. ಔಟ್ ಅಂಡ್ ಔಟ್ ಥ್ರಿಲ್ಲರ್ ಚಿತ್ರ ಆಗಿರುವುದರಿಂದ, ಅಲ್ಲಿ ನಾನು ಪತ್ರಕರ್ತನ ಪಾತ್ರ ಮಾಡುತ್ತಿದ್ದೇನೆ. ಆ ಹೀರೋಗೂ, ಒಂದು ಟಾಕೀಸ್ ನಡುವೆ ಇರುವ ಸಂಬಂಧದ ಕಥೆಯೇ ಇದು. ಇದೇ ಮೊದಲ ಸಲ ನಾನು ಜರ್ನಲಿಸ್ಟ್ ಪಾತ್ರ ಮಾಡುತ್ತಿದ್ದೇನೆ ಎಂದು ವಿವರಿಸುತ್ತಾರೆ ಅಜೇಯ್. ಬೇಸರ ಮತ್ತು ಖುಷಿ
ಅಜೇಯ್ ಅವರಿಗೊಂದು ಬೇಸರವಿದೆ. ಅದಕ್ಕೆ ಕಾರಣ, “ತಾಯಿಗೆ ತಕ್ಕ ಮಗ’ ಚಿತ್ರ ನಿರೀಕ್ಷೆ ಮಟ್ಟ ತಲುಪಲಿಲ್ಲ ಅನ್ನೋದು. ಮೊದಲ ಬೇಸರ, ತಾಯಿ ಸೆಂಟಿಮೆಂಟ್, ಬಾಂಧವ್ಯ ಕುರಿತಾದ ಚಿತ್ರಕ್ಕೆ ಸೆನ್ಸಾರ್ “ಎ’ ಸರ್ಟಿಫಿಕೆಟ್ ಕೊಟ್ಟಿದ್ದು. ಎರಡನೆಯದು ಆ ಸರ್ಟಿಫಿಕೆಟ್‌ನಿಂದಾಗಿ ಮಲ್ಟಿಪ್ಲೆಕ್ಸ್‌ಗೆ ಹಾಗೂ ನನ್ನ ಆಡಿಯನ್ಸ್ ಥಿಯೇಟರ್‌ಗೆ ಬರಲು ಸ್ಪೀಡ್ ಬ್ರೇಕರ್ ಆಗಿದ್ದು. ಮೂರನೆಯದು, ಹಲವರು ಕಾಲ್ ಮಾಡಿ,ಯಾಕೆ ಚಿತ್ರಮಂದಿರದಲ್ಲಿ ಸಿನಿಮಾ ಓಡಲಿಲ್ಲ ಅಂದಿದ್ದು. ನಿರ್ಮಾಪಕರಿಗೆ ಲಾಸ್ ಆಯ್ತು. ಅದು ಬೇಸರದ ವಿಷಯ. ಆದರೆ, ಕಳಪೆ ಸಿನಿಮಾ ಮಾಡಿಲ್ಲ ಎಂಬ ಸಂತಸವಿದೆ. ಒಮ್ಮೊಮ್ಮೆ ಹೀಗೆಲ್ಲಾ ಆಗುತ್ತಿರುತ್ತೆ. ಅದನ್ನೆಲ್ಲಾ ಯೋಚಿಸಿಕೊಂಡು ಕೂತರೆ, ಮುಂದೆ ಹೋಗೋಕ್ಕಾಗಲ್ಲ. ಅವಕಾಶ ಬರುತ್ತಿರುತ್ತವೆ. ಫೀಲ್ಡ್‌ನಲ್ಲಿ ಗಟ್ಟಿಯಾಗಿ ನಿಂತು, ಬ್ಯಾಟಿಂಗ್ ಮಾಡಬೇಕು. ಆ ಪ್ರಯತ್ನ ಆಗುತ್ತಿದೆ’ ಎಂಬುದು ಅಜೇಯ್ ಮಾತು.
Related Articles
ಅಜೇಯ್‌ರಾವ್ ಈಗ ಬದಲಾಗಿದ್ದಾರಾ? ಈ ಪ್ರಶ್ನೆಗೆ ಉತ್ತರಿಸುವ ಅವರು, “ಅಜೇಯ್ ಯಾವತ್ತೂ ಬದಲಾಗಲ್ಲ. ಆದರೆ, ಸಿನಿಮಾ ಆಯ್ಕೆಯಲ್ಲಿ ಬದಲಾಗಿದ್ದಾರೆ. ಈ ಬಾರಿ ಒಪ್ಪಿಕೊಂಡಿರುವ ಎರಡು ಸಿನಿಮಾಗಳು ಹೊಸ ಮಾದರಿಯಲ್ಲಿರಲಿವೆ. ಲವ್ವರ್ ಬಾಯ್ ಆಗಿ ಸಕ್ಸಸ್ ಕಂಡಿದ್ದೇನೆ. ಆ್ಯಕ್ಷನ್ ಹೀರೋ ಆಗಿಯೂ ಸೈ ಎನಿಸಿಕೊಂಡಿದ್ದೇನೆ. ಈಗ ಸಂಪೂರ್ಣ ಕಾಮಿಡಿ ಚಿತ್ರ ಒಪ್ಪಿದ್ದೇನೆ. ಚಂದ್ರಶೇಖರ್ ಬ್ಯಾನರ್‌ನ ಚಿತ್ರ ನನಗೆ ಹೊಸ ರೂಪ ಕೊಡುತ್ತೆ ಎಂಬ ಭರವಸೆ ಇದೆ. ಹಾಗಾಗಿ ನನ್ನ ಆಯ್ಕೆಯ ವರಸೆ ಬದಲಿಸಿಕೊಂಡಿದ್ದೇನೆ. “ತಾಯಿಗೆ ತಕ್ಕ ಮಗ’ ಸಕ್ಸಸ್ ಆಗಿದ್ದರೆ, ಕಮರ್ಷಿಯಲ್ ಹಿಟ್ ಎನಿಸಿದ್ದರೆ ಅದೇ ರೀತಿಯ ಸ್ಕ್ರಿಪ್ಟ್ ಬರುತ್ತಿದ್ದವು. ಕೆಲ ಕಥೆ ಬಂದರೂ, ರೆಗ್ಯುಲರ್ ಫಾರ್ಮೆಟ್‌ನಿಂದ ಹೊರತಾಗಿರಲಿಲ್ಲ. ನನಗೇನೂ ಅವಸರವಿಲ್ಲ. “ಚಂದ್ರಯಾನ- 2′ ಲಾಂಚ್ ಆದ ರೀತಿ ನಾನೂ ಸಹ ಲೇಟ್ ಆದರೂ ಸರಿ, ನೀಟಾಗಿ ತನ್ನ ಗುರಿ ತಲುಪಿ ಲ್ಯಾಂಡ್ ಆಗ್ತಿàನಿ ಎಂಬ ಭರವಸೆ ಇದೆ. ಎಷ್ಟೋ ಜನರು ಅಜೇಯ್‌ಗೆ ಕಥೆ ಒಪ್ಪಿಸೋದು ಕಷ್ಟ ಅಂತಾರೆ. ಯಾಕೆ ಹಾಗೆ ಹೇಳ್ತಾರೋ ಗೊತ್ತಿಲ್ಲ. ಕಳೆದ ಕೆಲ ವರ್ಷಗಳ ಹಿಂದೆ ನನಗೆ ಅಂತಹ ಯೋಚನೆ ಇರಲಿಲ್ಲ. ಮೆಚ್ಯುರಿಟಿ ಕಮ್ಮಿ ಇತ್ತು ಅಂದುಕೊಳ್ಳಿ. ಈಗ ಆ ಬಗ್ಗೆ ಆಳವಾಗಿ ಯೋಚಿಸುತ್ತೇನೆ. ಕಥೆ ಹೇಳುವ ನಿರ್ದೇಶಕ ಎಲ್ಲವನ್ನೂ ತಿಳಿದುಕೊಂಡಿದ್ದಾನಾ, ನಿರ್ಮಾಪಕ ಅದಕ್ಕೆ ಬೇಕಾದೆಲ್ಲವನ್ನೂ ಒದಗಿಸುತ್ತಾನಾ ಎಂಬುದನ್ನು ತಿಳಿಯುತ್ತೇನೆ. ಆಮೇಲೆ ಚಿತ್ರ ಮಾಡಬೇಕಾ, ಬೇಡವಾ ಅನ್ನೋದು ನಿರ್ಧಾರವಾಗುತ್ತೆ. ಕೆಲವೊಮ್ಮೆ ಕಮರ್ಷಿಯಲ್ ಮೂಲಕವೇ ಪ್ರತಿಭೆಯನ್ನು ನಿರ್ಧರಿಸಬೇಕಾಗುತ್ತೆ. ತುಂಬಾ ಪ್ಯಾಶನ್ ಇರುವ ನಿರ್ದೇಶಕ ಇದ್ದರೂ, ಅಷ್ಟೇ ಅದ್ಭುತವಾಗಿ ನಟಿಸುವ ನಟನಿದ್ದರೂ, ನಿರ್ಮಾಪಕ ಅದನ್ನು ಇನ್ನೊಂದು ಲೆವೆಲ್‌ಗೆ ಕೊಂಡೊಯ್ಯುವಂತಿರಬೇಕು. ಆಗಲೇ ಸಿನಿಮಾ ಎನಿಸಿಕೊಳ್ಳೋದು. ಹಾಗಾಗಿ ನಾನು ಕಥೆ ಕೇಳಿದ ಕೂಡಲೇ, ಎಕ್ಸೆ„ಟ್ ಆಗಿ ಕಮಿಟ್ ಆಗಲ್ಲ. ಅದು ಪ್ರಾಕ್ಟಿಕಲ್ ಆಗಿ ವರ್ಕೌಟ್ ಆಗುತ್ತೋ ಇಲ್ಲವೋ ಎಂಬುದನ್ನು ಗಮನಿಸುತ್ತೇನೆ’ ಎನ್ನುತ್ತಾರೆ.
Advertisement
ಸಮಾನತೆ ಇದ್ದರೆ ಇಂಡಸ್ಟ್ರಿ ಬ್ಯೂಟಿಫುಲ್ಎಲ್ಲಾ ನಟರಿಗೂ ಇದ್ದಂತೆ ಅಜೇಯ್ ಅವರಿಗೂ ನಿರ್ದೇಶನ ಮೇಲೆ ಆಸೆ ಇದೆಯಾ? ಇದಕ್ಕೆ “ಖಂಡಿತ ಇದೆ. ಯಾವಾಗ ಅನ್ನೋದು ಗೊತ್ತಿಲ್ಲ. ಪ್ರತಿ ಸಲವೂ ಈ ಪ್ರಶ್ನೆ ಬಂದಾಗ, ಮುಂದಿನ ವರ್ಷ ಅಂತ ಹೇಳ್ತಾನೆ ಇರಿ¤àನಿ. ಎರಡು ಕಥೆ ತಲೆಯಲ್ಲಿದೆ. ಸದ್ಯಕ್ಕೊಂದು ಸಕ್ಸಸ್ ಸಿನಿಮಾ ಕೊಡಬೇಕು. ನಂತರ ನಿರ್ದೇಶನದತ್ತ ಗಮನ. ಅದು ನನ್ನ ಹೋಮ್ ಬ್ಯಾನರ್‌ನಲ್ಲೇ ಆಗಿರುತ್ತೆ. ಇನ್ನು, ಮುಂದಿನ ವರ್ಷ ನನ್ನ ಹೋಮ್ ಬ್ಯಾನರ್‌ನಲ್ಲೊಂದು ಚಿತ್ರ ಗ್ಯಾರಂಟಿ. ಹೊಸಬರಿಗೆ ಅವಕಾಶ ಕೊಡಬೇಕು. ನಟನೆ, ನಿರ್ಮಾಣ ನನ್ನದೇ ಇರುತ್ತೆ ಎಂದು ಹೇಳುವ ಅಜೇಯ್, ಮಲ್ಟಿಸ್ಟಾರ್ ಸಿನಿಮಾಗಳು ಬಂದರೆ ಚಿತ್ರರಂಗದ ಇನ್ನಷ್ಟು ಬೆಳವಣಿಗೆ ಒಳ್ಳೆಯದು. ಫಸ್ಟ್ ಹೀರೋ, ಸೆಕೆಂಡ್ ಹೀರೋ ಎಂಬ ಕಾನ್ಸೆಪ್ಟ್ ಹೋಗಬೇಕು. ಒಟ್ಟಿಗೆ ನಟಿಸುವ ಸಂಸ್ಕೃತಿ ಹೆಚ್ಚಬೇಕು. ಇಲ್ಲಿ ಎಲ್ಲವೂ ಸಮಾನವಾಗಿ ಅಭಿವೃದ್ಧಿಯಾಗಬೇಕು. ಎಲ್ಲರೂ ಒಂದೇ ಎನ್ನುವ ಭಾವಬಂದರೆ, ಚಿತ್ರರಂಗ ಬ್ಯೂಟಿಫುಲ್ ಆಗಿರುತ್ತೆ. ನಿರ್ಮಾಪಕ, ನಿರ್ದೇಶಕರಿಗೆ ಆ ಐಡಿಯಾ ಬರಬೇಕಷ್ಟೇ’ ಎಂದು ಮಾತು ಮುಗಿಸುತ್ತಾರೆ ಅಜೇಯ್. – ವಿಜಯ್ ಭರಮಸಾಗರ