Advertisement
ರಾಷ್ಟ್ರೀಯ ಗ್ರಾಮೀಣ ಜೀವನೋ ಪಾಯ ಮಿಶನ್ (ಎನ್‌ಆರ್‌ಎಲ್‌ಎಂ) ವತಿಯಿಂದ ನೇಮಿಸಲಾದ “ಕೃಷಿ ಸಖಿಯರು’ ಉಡುಪಿ ಜಿಲ್ಲೆಯಲ್ಲಿ ಹಡಿಲು ಗದ್ದೆಗಳನ್ನು ಗುರುತಿಸಿ, ಪುನಶ್ಚೇತನ ನಡೆಸಲಿದ್ದಾರೆ. ಎನ್‌ಆರ್‌ಎಲ್‌ಎಂ, ಕೃಷಿ ಇಲಾಖೆ, ಗ್ರಾ.ಪಂ. ಮಟ್ಟದ ಸಂಜೀವಿನಿ ಒಕ್ಕೂಟದ ಸಹಭಾಗಿತ್ವದಲ್ಲಿ ಈ ಕಾರ್ಯ ನಡೆಯುತ್ತಿದೆ.
ಉಡುಪಿ ಜಿಲ್ಲೆಯಲ್ಲಿ 155
ಕೃಷಿಸಖಿಯರಿದ್ದು, ಈ ಪೈಕಿ ಸುಮಾರು 90 ಮಂದಿಗೆ ಅವರವರ ಗ್ರಾಮ ಗಳಲ್ಲಿ ಹಡಿಲು ಭೂಮಿ ಪುನಶ್ಚೇತನದ ಗುರಿಯನ್ನು ನೀಡಲಾಗಿದೆ. ಈವರೆಗೆ ಜಿಲ್ಲೆಯಲ್ಲಿ ಸುಮಾರು 500 ಎಕರೆ ಹಡಿಲು ಭೂಮಿ ನಾಟಿ ಮಾಡುವ ಗುರಿ ಹೊಂದಲಾಗಿದೆ. ಇದಿನ್ನೂ ಆರಂಭಿಕ ಹಂತದಲ್ಲಿದ್ದು, ಮುಂದೆ ಇನ್ನಷ್ಟು ಪ್ರದೇಶದಲ್ಲಿ ಪುನಶ್ಚೇತನ ಆಗಬಹುದು. ಕೃಷಿ ಸಖಿಯರ ಮುಂದಾಳತ್ವದಲ್ಲಿ ಆಯಾಯ ಗ್ರಾ.ಪಂ. ಮಟ್ಟದ ಸಂಜೀವಿನಿ ಒಕ್ಕೂಟದ ಸದಸ್ಯರು ಕೂಡ ಇದರಲ್ಲಿ ಕೈಜೋಡಿಸಲಿದ್ದಾರೆ.
Related Articles
Advertisement
ಯಾರಿವರು?ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಶನ್ (ಎನ್‌ಆರ್‌ಎಲ್‌ಎಂ) ವತಿ ಯಿಂದ ಪ್ರತೀ ಗ್ರಾ.ಪಂ.ಗೆಒಬ್ಬರಂತೆ ಕೃಷಿ ಸಖೀಯರನ್ನು ನೇಮಕ ಮಾಡಲಾಗಿದೆ. ಇವರು ಸರಕಾರ ಹಾಗೂ ಜನರ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾ.ಪಂ. ಮಟ್ಟದಲ್ಲಿ ಸಂಜೀವಿನಿ ಒಕ್ಕೂಟದ ಅಧೀನದಲ್ಲಿ ಸೇವೆ ಸಲ್ಲಿಸುತ್ತಾರೆ. ಕೃಷಿ ಇಲಾಖೆಯ ಕೃಷಿ ಪಾಠಶಾಲೆ, ಯಂತ್ರೋಪಕರಣಗಳು, ಬೀಜಗಳು, ಕೀಟನಾಶಕಗಳ ಸಹಿತ ವಿವಿಧ ಸೌಲಭ್ಯಗಳು, ಪ್ರಧಾನಮಂತ್ರಿ ಕಿಸಾನ್, ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಗಳ ಉಪಯೋಗಗಳನ್ನು ಕೃಷಿಕರು ಸಮರ್ಥವಾಗಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಗ್ರಾ.ಪಂ. ಮಟ್ಟದಲ್ಲಿ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ಜಿ.ಪಂ. ಸಹಿತ ಒಟ್ಟು ನಾಲ್ಕು ಹಂತಗಳಲ್ಲಿ ಇವರಿಗೆ ತರಬೇತಿ ನೀಡಲಾಗಿದೆ. ಶಿವಪುರ ಮಾದರಿ
ಹೆಬ್ರಿ ತಾಲೂಕಿನ ಶಿವಪುರ ಗ್ರಾಮದ ಶ್ರೀ ದುರ್ಗಾ ಸಂಜೀವಿನಿ ಒಕ್ಕೂಟದ ಐವರು ಸದಸ್ಯೆಯರು ಹಡಿಲು ಭೂಮಿಯನ್ನು ನಾಟಿ ಮಾಡುವ ಕಾರ್ಯ ಕೈಗೊಂಡಿದ್ದು, ಆರಂಭದಲ್ಲಿ 10 ಎಕರೆ, ಆ ಬಳಿಕ 25 ಎಕರೆ ಹಡಿಲು ಭೂಮಿ ಪುನಶ್ಚೇತನ ಮಾಡಿದ್ದಾರೆ. ಇದನ್ನೇ ಮಾದರಿಯಾಗಿಸಿಕೊಂಡು ಜಿಲ್ಲೆಯಾದ್ಯಂತ ವಿಸ್ತರಿಸಲು ಜಿ.ಪಂ. ಸಿಇಒ ಪ್ರಸನ್ನ ಎಚ್. ಅವರು ಮುಂದಾಗಿದ್ದಾರೆ. ಕೃಷಿ ಸಖಿಯರ ಪ್ರಮುಖ ಕೆಲಸ ರೈತರಿಗೆ ಮಾಹಿತಿ ನೀಡುವುದು. ಆದರೆ ಇದಕ್ಕೆ ಮುನ್ನ ಅವರು ಕೃಷಿ ಸಂಬಂಧಿ ಕೆಲಸ ಮಾಡಿದರೆ, ಅವರು ಕೊಡುವ ಮಾಹಿತಿಗೆ ಮೌಲ್ಯ ಬರುತ್ತದೆ. ಅದಕ್ಕಾಗಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಇಂಥದ್ದೊಂದು ವಿಶಿಷ್ಟ ಪ್ರಯತ್ನವನ್ನು ಆರಂಭಿಸಿದ್ದೇವೆ. ಹಡಿಲು ಭೂಮಿಯನ್ನು ಹಸನಾಗಿಸುವುದು ಇಂದಿನ ಅಗತ್ಯವೂ ಹೌದು. ಈಗ ಪ್ರಾಯೋಗಿಕ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತರಿಸುವ ಪ್ರಯತ್ನ ನಡೆಸಲಾಗುವುದು.
– ಪ್ರಸನ್ನ ಎಚ್., ಉಡುಪಿ ಜಿ.ಪಂ. ಸಿಇಒ -ಪ್ರಶಾಂತ್ ಪಾದೆ