ಢಾಕಾ:ಕೋವಿಡ್ 19 ವೈರಸ್ ತಡೆಗಟ್ಟಲು ಲಾಕ್ ಡೌನ್ ಜಾರಿಯಲ್ಲಿರುವ ಸಂದರ್ಭದಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಹೆಚ್ಚು ಕಿರುಕುಳ ನೀಡಲಾಗುತ್ತಿದೆ ಎಂದು ವಿಶ್ವ ಹಿಂದೂ ಒಕ್ಕೂಟ ಆರೋಪಿಸಿದೆ.
ಲಾಕ್ ಡೌನ್ ವೇಳೆ ಬಾಂಗ್ಲಾದಲ್ಲಿ ಹಿಂದೂಗಳ ಅಂಗಡಿಗಳನ್ನು ಲೂಟಿ ಮಾಡಲಾಗಿದೆ. ಉದ್ಯಮಿಗಳನ್ನು ಹತ್ಯೆಗೈದ ಅಮಾನವೀಯ ಕೃತ್ಯ ಹೆಚ್ಚಳವಾಗಿದೆ ಎಂದು ದೂರಿದೆ.
ಹಿಂದೂಗಳ ಭೂಮಿಯನ್ನು ವಶಪಡಿಸಿಕೊಳ್ಳುವುದು, ಹಿಂದೂಗಳ ದೇವಾಲಯ, ಮೂರ್ತಿ ಧ್ವಂಸಗೊಳಿಸಲಾಗುತ್ತಿದೆ. ಅಷ್ಟೇ ಅಲ್ಲ ಹಿಂದೂ ಮಹಿಳೆ, ಯುವತಿಯರನ್ನು ಅಪಹರಿಸಿ ಅತ್ಯಾಚಾರ ಎಸಗುತ್ತಿದ್ದಾರೆ ಎಂದು ಆರೋಪಿಸಿದೆ.
ಏಪ್ರಿಲ್ 12ರಂದು ಹಿಂದೂ ಮಾಲೀಕನ ಅಂಗಡಿಯನ್ನು ಲೂಟಿಗೈದಿದ್ದರು. ಇಬ್ಬರು ಹಿಂದೂ ಉದ್ಯಮಿಗಳನ್ನು ಕೊಲ್ಲಲಾಗಿತ್ತು. ಬಾಂಗ್ಲಾದ ಸ್ಥಳೀಯ ಕ್ರಿಮಿನಲ್ಸ್ ಗಳು 307 ಎಕರೆ ಹಿಂದೂಗಳ ಜಾಗವನ್ನು ಆಕ್ರಮಣ ಮಾಡಿಕೊಂಡಿದ್ದಾರೆ. ಎರಡು ದೇವಾಲಯಗಳನ್ನು ಧ್ವಂಸಗೊಳಿಸಿರುವ ಘಟನೆ ಲಾಕ್ ಡೌನ್ ಸಂದರ್ಭದಲ್ಲಿ ನಡೆದಿದೆ ಎಂದು ದೂರಿದೆ.
21 ಹಿಂದೂ ಕುಟುಂಬಗಳು ಜಾಗ ಖಾಲಿ ಮಾಡಿ ವಲಸೆ ಹೋಗಿದ್ದು, 14 ಹಿಂದೂ ಕುಟುಂಬಗಳನ್ನು ಬಲವಂತವಾಗಿ ದೇಶದಿಂದ ಓಡಿಸಲಾಗಿದೆ ಎಂದು ಹಿಂದೂ ಫೆಡರೇಷನ್ ಬಿಡುಗಡೆ ಮಾಡಿರುವ ಪ್ರಕರಣೆಯಲ್ಲಿ ತಿಳಿಸಿದೆ. ಆರು ಮಂದಿ ಹಿಂದು ಯುವತಿಯರು ಮತ್ತು ಮಹಿಳೆಯರನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದರು. ಅಲ್ಲದೇ ಹಿಂದೂ ಯುವತಿಯರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.