ಬೆಂಗಳೂರು: ಅರ್ಕಾವತಿ ಬಡಾವಣೆ ರಚನೆಗೆ ಜಮೀನು ಬಿಟ್ಟುಕೊಟ್ಟವರಿಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಅದೇ ಅಳತೆಯ, ಅದೇ ದರದಲ್ಲಿ ನಿವೇಶನ ನೀಡಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಡಿಎ ಸದಸ್ಯರಾದ ಶಾಸಕ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಗೃಹ ಕಚೇರಿ “ಕೃಷ್ಣಾ’ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಬಿಡಿಎಗೆ ಸಂಬಂಧಪಟ್ಟ ವಿಚಾರಗಳ ಕುರಿತ ಸಭೆ ಬಳಿಕ ಪ್ರತಿಕ್ರಿಯಿಸಿದ ಅವರು, ಕೆಂಪೇಗೌಡ ಬಡಾವಣೆಗೆ ವಿದ್ಯುತ್, ನೀರು ಹಾಗೂ ಒಳಚರಂಡಿ ಸೇರಿದಂತೆ ಸೌಲಭ್ಯ ಕಲ್ಪಿಸುವ ವಿಚಾರವಾಗಿ ಇದೇ 23ರಂದು ನಡೆಯುವ ಬಿಡಿಎ ಮಂಡಳಿ ಸಭೆಯಲ್ಲಿ ಪ್ರಸ್ತಾಪವಾಗಲಿದೆ ಎಂದು ಹೇಳಿದರು.
ಕೆಂಪೇಗೌಡ ಬಡಾವಣೆಗೆ ಸುಗಮ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಮೈಸೂರು ರಸ್ತೆಯ ರಾಜರಾಜೇಶ್ವರಿ ಆಸ್ಪತ್ರೆ ಕಡೆಯಿಂದ ಮಾಗಡಿ ರಸ್ತೆಯ ಸೀಗೇಹಳ್ಳಿವರೆಗೆ ಸುಮಾರು 10.5 ಕಿ.ಮೀ. ಉದ್ದದ 100 ಅಡಿ ಅಗಲದ ರಸ್ತೆ ನಿರ್ಮಾಣಕ್ಕೂ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ. ಈ ರಸ್ತೆ ನಿರ್ಮಾಣಕ್ಕೆ 321 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ. ಒಂದು ಎಕರೆಗೆ ಸುಮಾರು ಮೂರು ಕೋಟಿ ರೂ.ವರೆಗೆ ಪರಿಹಾರ ಸಿಗಲಿದೆ. ಕಡಿಮೆ ಗುಂಟೆಯ ಭೂಮಿ ಬಿಟ್ಟುಕೊಟ್ಟವರಿಗೆ ಹಣ ರೂಪದಲ್ಲಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
50:50ರ ಅನುಪಾತ ನಿಯಮಕ್ಕೆ ತಿದ್ದುಪಡಿ: ಬಡಾವಣೆ ನಿರ್ಮಾಣಕ್ಕಾಗಿ ಭೂಮಿಬಿಟ್ಟುಕೊಟ್ಟವರಿಗೆ ಅಭಿವೃದ್ಧಿಪಡಿಸಿದ ಶೇ.60ರಷ್ಟು ನಿವೇಶನ ಹಂಚಿಕೆ ಮಾಡಿದರೆ ಉಳಿದ ಶೇ.40ರಷ್ಟು ನಿವೇಶನಗಳನ್ನು ಬಿಡಿಎ ಅರ್ಜಿದಾರರಿಗೆ ಹಂಚಿಕೆ ಮಾಡಲಾಗುತ್ತದೆ. ಆದರೆ ಈ ರಸ್ತೆ ನಿರ್ಮಾಣಕ್ಕೆ ಭೂಮಿ ಬಿಟ್ಟುಕೊಟ್ಟವರಿಗೆ ಸೂಕ್ತ ಪರಿಹಾರ ನೀಡುವ ಸಲುವಾಗಿ ಈ ನಿರ್ದಿಷ್ಟ ಯೋಜನೆಗಷ್ಟೇ ಅನ್ವಯವಾಗುವಂತೆ ನಿವೇಶನ ಹಂಚಿಕೆ ಪ್ರಮಾಣವನ್ನು 50:50ರ ಅನುಪಾತದಲ್ಲಿ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ಇದಕ್ಕೆ ಮುಖ್ಯಮಂತ್ರಿಗಳು ಒಪ್ಪಿದ್ದಾರೆ. ಹಾಗಾಗಿ ಇದೇ 23ರಂದು ನಡೆಯುವ ಮಂಡಳಿ ಸಭೆಯಲ್ಲಿ ನಿಯಮಕ್ಕೆ ಸೂಕ್ತ ತಿದ್ದುಪಡಿ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮೈಸೂರುವರೆಗೆ ಅಷ್ಟಪಥ: ಮಾಗಡಿ ರಸ್ತೆಯ “ನೈಸ್’ ರಸ್ತೆ ಬಳಿಯಿಂದ ಮಾಗಡಿ ಮಾರ್ಗವಾಗಿ ಕುಣಿಗಲ್‌ವರೆಗೆ ನಾಲ್ಕು ಪಥದ ರಸ್ತೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರದ ಯೋಜನೆಯಡಿ ಕುಂಬಳಗೋಡಿನಿಂದ ಮೈಸೂರು ವರೆಗೆ ಅಷ್ಟಪಥದ ಹೆದ್ದಾರಿ ನಿರ್ಮಾಣಕ್ಕೆ ಸರ್ಕಾರ ನಿರ್ಧರಿಸಿದೆ. ಒಟ್ಟಾರೆ ಈ ಭಾಗಕ್ಕೆ ಸೂಕ್ತ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ವಿಕಲಚೇತನೆಯ ಅಳಲು ಆಲಿಸಿದ ಸಿಎಂ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ ನಿವಾಸ “ಕಾವೇರಿ’ಯಿಂದ ಗೃಹ ಕಚೇರಿಗೆ ಶುಕ್ರವಾರ ಬೆಳಗ್ಗೆ ತೆರಳುವಾಗ ಜನರ ಅಹವಾಲು ಸ್ವೀಕರಿಸಿದರು. ಈ ವೇಳೆ ದೂರದಲ್ಲಿದ್ದ ವಿಕಲ ಚೇತನ ಮಹಿಳೆಯ ಕಂಡ ಸಿಎಂ ಅವರ ಬಳಿ ತೆರಳಿದರು. ಅಗ್ರಹಾರ ದಾಸರಳ್ಳಿಯ ಕಮಲಮ್ಮ, “ಈವರೆಗೆ ವೆಂಕಟರಮಣ ದೇವಸ್ಥಾನ ಆವರಣ ದಲ್ಲಿ ನೆಲೆಸಿದ್ದೆ. ನವೀಕರಣ ಹಿನ್ನೆಲೆಯಲ್ಲಿ ನೆಲೆ ಇಲ್ಲದಂತಾಗಿದೆ. ತಮಗೆ ಎಸ್ಸೆಸ್ಸೆಲ್ಸಿ ಪೂರ್ಣ ಗೊಂಡಿದ್ದು ಯಾವುದಾದರೂ ಉದ್ಯೋಗ ನೀಡಿದರೆ ಜೀವನ ನಡೆಸಲು ಅನುಕೂಲವಾ ಗಲಿದೆ’ ಎಂದು ಮನವಿ ಮಾಡಿದರು.