Advertisement
ಕರ್ನಾಟಕ ಸರ್ಕಾರವು ಗೋವಾದಲ್ಲಿ ಕನ್ನಡಿಗರ ಬಹು ವರ್ಷಗಳ ಬೇಡಿಕೆಯಾದ ಕನ್ನಡ ಭವನ ನಿರ್ಮಾಣಕ್ಕೆ ಪ್ರಸಕ್ತ 2022-23 ರ ಕರ್ನಾಟಕ ಬಜೆಟ್ ನಲ್ಲಿ ನಿಧಿ ಕಾಯ್ದಿರಿಸಲಾಗಿದ್ದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲಿದೆ. ಈ ನಿಟ್ಟಿನಲ್ಲಿ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಹೆಚ್ಚಿನ ಪ್ರಯತ್ನ ನಡೆಸಿದೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ್ ರವರು ಗೋವಾ ಜಿಡಿಎ ಅಧ್ಯಕ್ಷ ಹಾಗೂ ವಾಸ್ಕೊ ಕ್ಷೇತ್ರದ ಶಾಸಕ ದಾಜಿ ಸಾಲಕರ್ ರವರನ್ನು ಭೇಟಿ ಮಾಡಿ ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಸೂಕ್ತ ಜಾಗವನ್ನು ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರು ಗೋವಾ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಕರ್ನಾಟಕ ಮುಖ್ಯಮಂತ್ರಿಗಳು ಗೋವಾ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಕನ್ನಡ ಭವನಕ್ಕೆ ಜಾಗ ಕಲ್ಪಿಸಿ ಕೊಡುವಂತೆ ಮನವಿ ಮಾಡಿದ್ದು, ಶೀಘ್ರದಲ್ಲಿಯೇ ಗೋವಾದಲ್ಲಿ ಕನ್ನಡ ಭವನ ನಿರ್ಮಾಣದ ಕನಸು ನನಸಾಗುವ ಭರವಸೆ ಗೋವಾ ಕನ್ನಡಿಗರಲ್ಲಿ ಮೂಡುವಂತಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಮತ್ತು ಕನ್ನಡ ಭವನ ನಿರ್ಮಾಣಕ್ಕೆ ಹೆಚ್ಚಿನ ಪ್ರಯತ್ನ ನಡೆಸುತ್ತಿರುವ, ಬಿಜೆಪಿ ಗೋವಾ ಪ್ರಭಾರಿ ಸಿ.ಟಿ ರವಿಯವರಿಗೂ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ ಸೋಮಶೇಖರ್ ಅವರಿಗೂ ಗೋವಾ ಕನ್ನಡಿಗರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರವರು ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಸೂಕ್ತ ಜಾಗ ಕಲ್ಪಿಸಿಕೊಡಲಿದ್ದಾರೆ ಎಂಬ ಭರವಸೆಯೂ ನಮಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಸಿದ್ಧಣ್ಣ ಮೇಟಿ ಪ್ರತಿಕ್ರಿಯೆ ನೀಡಿದ್ದಾರೆ.
Related Articles
ಗೋವಾದಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕು ಎಂಬುದು ಗೋವಾ ಕನ್ನಡಿಗರ ಬಹು ವರ್ಷಗಳ ಬೇಡಿಕೆಯಾಗಿದೆ. ಗೋವಾ ಅಭಿವೃದ್ಧಿಗಾಗಿ ಶೃಮಿಸುತ್ತಿರುವ ಗೋವಾ ಕನ್ನಡಿಗರಿಗಾಗಿ ಗೋವಾ ಸರ್ಕಾರವು ಕನ್ನಡ ಭವನ ನಿರ್ಮಾಣಕ್ಕೆ ಸೂಕ್ತ ಜಾಗ ಕಲ್ಪಿಸಿಕೊಡಬೇಕು. ಕನ್ನಡ ಭವನ ನಿರ್ಮಾಣಕ್ಕೆ ಮುಂದಾಗಿರುವ ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರಿಗೂ ಮತ್ತು ಈ ನಿಟ್ಟಿನಲ್ಲಿ ಸತತ ಪ್ರಯತ್ನ ನಡೆಸುತ್ತಿರುವ ಬಿಜೆಪಿ ಗೋವಾ ಪ್ರಭಾರಿ ಸಿ.ಟಿ ರವಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ ಸೋಮಶೇಖರ್ ರವರಿಗೂ ಸಮಸ್ತ ಗೋವಾ ಕನ್ನಡಿಗರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದು ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ್ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.
Advertisement