ನವದೆಹಲಿ: ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಮಂಗಳವಾರ ಜಾರಿ ನಿರ್ದೇಶನಾಲಯದ (ಇಡಿ) ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಅವರ ಪುತ್ರ 33 ವರ್ಷದ ತೇಜಸ್ವಿ ಯಾದವ್ ಅವರು ಕಾರ್ಕೇಡ್‌ನಲ್ಲಿ ಸೆಂಟ್ರಲ್ ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಭೇಟಿ ನೀಡಿದರು.
ಕಳೆದ ತಿಂಗಳು ಈ ಪ್ರಕರಣದಲ್ಲಿ ಸಿಬಿಐ ಅವರನ್ನು ವಿಚಾರಣೆ ನಡೆಸಿತ್ತು. ಸಿಬಿಐ ಎಫ್‌ಐಆರ್ ಆಧರಿಸಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)ಯ ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಇಡಿ ಪ್ರತ್ಯೇಕ ಪ್ರಕರಣವನ್ನು ದಾಖಲಿಸಿದೆ ಮತ್ತು ತೇಜಸ್ವಿ ಯಾದವ್ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಮಾರ್ಚ್ 25 ರಂದು ತೇಜಸ್ವಿ ಯಾದವ್ ಅವರ ಸಂಸದ ಸಹೋದರಿ ಮಿಸಾ ಭಾರ್ತಿ ಅವರನ್ನೂ ಸಹ ಇಡಿ ಈ ಪ್ರಕರಣದಲ್ಲಿ ವಿಚಾರಣೆ ಪ್ರಶ್ನಿಸಿತ್ತು.
ಇದನ್ನೂ ಓದಿ:Karnataka Polls: ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಕೆಎಸ್ ಈಶ್ವರಪ್ಪ
ಲಾಲು ಪ್ರಸಾದ್ ಮತ್ತು ಅವರ ಪತ್ನಿ, ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರನ್ನು ಸಿಬಿಐ ವಿಚಾರಣೆ ನಡೆಸಿದೆ.
ಎರಡೂ ಕೇಂದ್ರೀಯ ಸಂಸ್ಥೆಗಳು ಇತ್ತೀಚೆಗೆ ಈ ಪ್ರಕರಣದಲ್ಲಿ ಕ್ರಮ ಕೈಗೊಂಡವು ಮತ್ತು ಆರ್‌ಜೆಡಿ ಮುಖ್ಯಸ್ಥರ ಕುಟುಂಬದ ವಿರುದ್ಧ ಇಡಿ ದಾಳಿ ನಡೆಸಿತು.