Advertisement

FRUITS ತಂತ್ರಾಂಶದಲ್ಲಿ ನಮೂದಾಗಿಲ್ಲ ಜಮೀನು ವಿವರ: ಸಚಿವ ಅಸಮಾಧಾನ

09:16 PM Dec 18, 2023 | Team Udayavani |

ಬೆಂಗಳೂರು: ಬರ ಪರಿಹಾರ ನೀಡಲು ರಾಜ್ಯ ಸರಕಾರದ ಖಜಾನೆಯಲ್ಲಿ ಹಣವಿದೆ. ಅದರೆ, ರೈತರಿಗೆ ಸೂಕ್ತ ಸಮಯದಲ್ಲಿ ಪರಿಹಾರದ ಸಿಗದಿದ್ದರೆ ಅದಕ್ಕೆ ಜಿಲ್ಲಾಧಿಕಾರಿಗಳೇ ಹೊಣೆಯಾಗುತ್ತಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಎಚ್ಚರಿಸಿದರು.

Advertisement

ವೀಡಿಯೋ ಸಂವಾದದ ಮೂಲಕ ಜಿಲ್ಲಾಧಿಕಾರಿಗಳ ಸಭೆ ನಡೆಸಿ ಎಚ್ಚರಿಸಿದ ಅವರು, ರೈತರ ಜಮೀನಿನ ಸಂಪೂರ್ಣ ವಿಸ್ತೀರ್ಣವನ್ನು ಫ್ರೂಟ್ಸ್‌ ತಂತ್ರಾಂಶದಲ್ಲಿ ನಮೂದಿಸುವಂತೆ ಎರಡು ತಿಂಗಳುಗಳಿಂದ ಎಲ್ಲ ಜಿಲ್ಲಾಧಿಕಾರಿಗಳಿಗೆ ನಿರಂತರವಾಗಿ ಸೂಚಿಸಲಾಗುತ್ತಿದೆ. ಆದರೂ ತಂತ್ರಾಂಶದಲ್ಲಿ ರೈತರ ಜಮೀನಿನ ಮಾಹಿತಿ ಶೇ.70ನ್ನೂ ಮೀರಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ರೈತರಿಗೆ ಅನ್ಯಾಯವಾಗಲಿದೆ ಎಂದು ಅಸಮಾಧಾನ ಹೊರಹಾಕಿದರು.

ಇತರ ಜಿಲ್ಲೆಗಳಿಗೆ ಹೋಲಿಸಿದರೆ ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ಸಾಧನೆ ತೀರಾ ಕಳಪೆಯಾಗಿದೆ. ಬರ ಪರಿಹಾರ ಹಣವನ್ನು ನೀಡಲು ರಾಜ್ಯ ಸರಕಾರ ಸಿದ್ಧವಾಗಿದೆ. ಖಜಾನೆಯಲ್ಲಿ ಹಣವೂ ಇದೆ. ಆದರೆ ಪರಿಹಾರ ಫ್ರೂಟ್ಸ್‌ ದತ್ತಾಂಶವನ್ನು ಆಧರಿಸಿರುವ ಕಾರಣ ಜಿಲ್ಲಾಧಿಕಾರಿಗಳು ಮಾಡುವ ಸಣ್ಣ ತಪ್ಪೂ ರೈತರ ಮೇಲೆ ಪರಿಣಾಮ ಬೀರಲಿದೆ. ಶೀಘ್ರದಲ್ಲಿ ತಾಲೂಕು ಹೋಬಳಿ ಸಭೆ ನಡೆಸಿ ಎಲ್ಲ ಅಧಿಕಾರಿಗಳನ್ನು ಸ್ಥಳ ವೀಕ್ಷಣೆಗೆ ಕಳುಹಿಸಿ ಡಿ.22ರ ಒಳಗಾಗಿ ರೈತರ ಜಮೀನಿನ ಸಂಪೂರ್ಣ ಮಾಹಿತಿಯನ್ನು ನಮೂದಿಸಿ ಎಂದು ಸಮಯದ ಗಡುವು ನೀಡಿದರು.

ಇದೇ ಸಮಯದಲ್ಲಿ ನೀರಿನ ಸಮಸ್ಯೆಯನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಿದ್ದಕ್ಕಾಗಿ ಎಲ್ಲ ಜಿಲ್ಲಾಧಿಕಾರಿಗಳ ಬಗ್ಗೆಯೂ ಮೆಚ್ಚುಗೆ ಸೂಚಿಸಿದ ಸಚಿವರು, ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾದ ಜಿಲ್ಲೆ ಗಳಲ್ಲಿ ಅಧಿಕಾರಿಗಳು ಖಾಸಗಿ ಬೋರ್‌ವೆಲ್‌ಗ‌ಳನ್ನು ಗುರುತಿಸಿದ್ದಾರೆ. ಟ್ಯಾಂಕರ್‌ಗಳಿಗೆ ಟೆಂಡರ್‌ ಕೂಡ ಕರೆಯಲಾಗಿದೆ. ಇದು ಉತ್ತಮವಾದ ಕೆಲಸ ಎಂದರು.

ಬಗರ್‌ ಹುಕುಂ ಸಮಸ್ಯೆ ನಿವಾರಣೆಗೆ ಆ್ಯಪ್‌
ಬಗರ್‌ಹುಕುಂ ಹೆಸರಿನಲ್ಲಿ ಕೃಷಿಯೇತರ ಚಟುವಟಿಕೆಯಲ್ಲಿ ತೊಡಗಿರುವವರು, ಅಕ್ರಮ ಸಾಗುವಳಿದಾರರು ಭೂಮಿ ಪಡೆದುಕೊಳ್ಳುವ ಅಪಾಯವಿದ್ದು, ನಮೂನೆ 50, 53, 57ರಡಿ ಸಲ್ಲಿಕೆಯಾಗಿರುವ ಸಾವಿರಾರು ಅರ್ಜಿಗಳನ್ನು ಇತ್ಯರ್ಥಪಡಿಸಲು ಅನುಕೂಲ ಆಗುವಂತೆ ಅಭಿವೃದ್ಧಿಪಡಿಸಿರುವ ಅಪ್ಲಿಕೇಶನ್‌ಗೆ ಸಚಿವ ಕೃಷ್ಣ ಬೈರೇಗೌಡ ಚಾಲನೆ ನೀಡಿದರು. ಗ್ರಾಮ ಲೆಕ್ಕಿಗ ಸ್ಥಳಕ್ಕೆ ತೆರಳಿ ಈ ಆ್ಯಪ್‌ ಮೂಲಕ ಜಿಯೋ ಫೆನ್ಸ್ ಮಾಡಿ ಆ ಮಾಹಿತಿಯನ್ನು ಕಂದಾಯ ನಿರೀಕ್ಷಕ ಹಾಗೂ ಸರ್ವೇ ಇಲಾಖೆ ಲಾಗಿನ್‌ಗೆ ಕಳುಹಿಸುತ್ತಾರೆ. ಇದರ ಸಹಾಯದಿಂದ ತಹಶೀಲ್ದಾರರು ಸ್ಯಾಟಲೈಟ್‌ ಇಮೇಜ್‌ ಪಡೆದು ನಿಜಕ್ಕೂ ಅಲ್ಲಿ ಕೃಷಿ ನಡೆಸುತ್ತಿದ್ದಾರೆಯೇ ಎಂಬ ಮಾಹಿತಿ ಕಲೆ ಹಾಕುತ್ತಾರೆ. ಅಲ್ಲದೆ ಆ ಇಮೇಜ್‌ ಜತೆಗೆ ಎಲ್ಲ ಮಾಹಿತಿಯನ್ನು ಬಗರ್‌ ಹುಕುಂ ಕಮಿಟಿ ಮುಂದೆ ಸಲ್ಲಿಸಿ ಒಟಿಪಿ ಮೂಲಕ ಕೆವೈಸಿ ಮಾಡುವ ಮೂಲಕ ರುಜುವಾತು ಮಾಡುತ್ತಾರೆ. ಬಳಿಕ ಅರ್ಹ ಫ‌ಲಾನುಭವಿಗಳಿಗೆ ಪೇಮೆಂಟ್‌ ನೋಟಿಸ್‌ ನೀಡಿ ಹಣ ಪಾವತಿಯಾಗುತ್ತಿದ್ದಂತೆ ಅವರಿಗೆ ಹೊಸ ಸರ್ವೇ ನಂಬರ್‌ ಹಾಗೂ ಡಿಜಿಟಲ್‌ ಇ-ಸಾಗುವಳಿ ಚೀಟಿ ನೀಡಲಾಗುವುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next