ಬೆಂಗಳೂರು: ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನ್ಯಾ.ಕೆಂಪಣ್ಣ ಆಯೋಗ ಕ್ಲೀನ್ ಚಿಟ್ ನೀಡಿರುವುದಾಗಿ ಮಾಧ್ಯಮದ ವರದಿ ತಿಳಿಸಿವೆ.
ಕೆಲವು ಉನ್ನತ ಮೂಲಗಳು ತಿಳಿಸಿರುವುದಾಗಿ ವರದಿ ಮಾಡಿರುವ ಖಾಸಗಿ ಟಿವಿ ಚಾನೆಲ್ ಗಳು, ಅರ್ಕಾವತಿ ಬಡಾವಣೆಯನ್ನು ಕಾನೂನಿನ ಚೌಕಟ್ಟಿನಲ್ಲೇ ಡಿನೋಟಿಫಿಕೇಶನ್ ಮಾಡಿರುವುದು ಆಯೋಗದ ತನಿಖೆ ವೇಳೆ ಪತ್ತೆಹಚ್ಚಲಾಗಿದೆ. ಹಾಗಾಗಿ ಸಿಎಂ ಸಿದ್ದರಾಮಯ್ಯಗೆ ಆಯೋಗ ಕ್ಲೀನ್ ಚಿಟ್ ನೀಡಿರುವುದಾಗಿ ವಿವರಿಸಿದೆ.
ಏನಿದು ಪ್ರಕರಣ:
ಎಸ್ಎಂ ಕೃಷ್ಣ ಸರ್ಕಾರ 2003ರಲ್ಲಿ ರೂಪಿಸಿದ್ದ ಅರ್ಕಾವತಿ ಬಡಾವಣೆ ಯೋಜನೆಗೆ ಬಿಡಿಎ ಜಮೀನು ಸ್ವಾಧೀನ ಪ್ರಕ್ರಿಯೆ ಆರಂಭಿಸಿದಾಗಿನಿಂದಲೂ ವಿವಾದ ಹುಟ್ಟಿಕೊಂಡಿತ್ತು. ಸಿದ್ದರಾಮಯ್ಯ ಸರ್ಕಾರ ಬಿಡಿಎ ಶಿಫಾರಸಿನ ಅನ್ವಯ ಅರ್ಕಾವತಿ ಬಡಾವಣೆ ಯೋಜನೆಯನನು ಪುನರ್ ರೂಪಿಸಿ 541 ಎಕರೆ ಭೂಮಿಯನ್ನು ಅಧಿಸೂಚನೆ ವ್ಯಾಪ್ತಿಯಿಂದ ಕೈಬಿಟ್ಟಿತ್ತು.
ಕೋರ್ಟ್ ಆದೇಶದಂತೆ ಈ ಕ್ರಮ ಕೈಗೊಂಡಿರುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಆದರೆ ನಿಯಮಗಳನ್ನು ಗಾಳಿಗೆ ತೂರಿ ಅಧಿಸೂಚನೆ ವ್ಯಾಪ್ತಿಯಿಂದ ಕೈಬಿಟ್ಟಿರುವುದಾಗಿ ವಿರೋಧ ಪಕ್ಷಗಳು ಆರೋಪಿಸಿದ್ದವು.