Advertisement

ಜಮೀನು ವಿವಾದ: ದಯಾಮರಣಕ್ಕಾಗಿ ನೊಂದ ಕುಟುಂಬ ಜಿಲ್ಲಾಧಿಕಾರಿಗೆ ಮನವಿ

04:13 PM Aug 09, 2019 | Suhan S |

ರಾಮನಗರ: ಪಿತ್ರಾರ್ಜಿತವಾಗಿ ಬಂದಿರುವ ಆಸ್ತಿ ಮೇಲೆ ಅಕ್ರಮವಾಗಿ ಸಾಲ ಪಡೆದಿರುವುದು ಅಲ್ಲದೆ, ಕುಟುಂಬದ ತೇಜೋವಧೆಯಾಗುತ್ತಿದೆ ಎಂದು ಆರೋಪಿಸಿ ಜಿಲ್ಲೆಯ ಮಾಗಡಿ ತಾಲೂಕಿನ ಉಡುವೆಗೆರೆ ಗ್ರಾಮದ ಬಸವಯ್ಯ, ಪತ್ನ ಗೌರಮ್ಮ, ಪುತ್ರ ಗುರುಬಸಪ್ಪ ಹಾಗೂ ಸೊಸೆ ಭಾಗ್ಯಮ್ಮ ದಯಾಮರಣ ಕೋರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.

Advertisement

ಉಡುವೆಗೆರೆ ಗ್ರಾಮದ ಬಸವಯ್ಯ ಪ್ರಕಾರ ಪಿತ್ರಾರ್ಜಿತವಾಗಿ ಬಂದಿರುವ 5 ಎಕರೆ ಭೂಮಿಯನ್ನು ತಮ್ಮ ಸಹೋದರ ಹೊನ್ನ ನರಸಿಂಹಯ್ಯ ಮತ್ತು ಅವರ ಮಕ್ಕಳು ಪರಮೇಶ ಎಂಬ ವ್ಯಕ್ತಿಯ ಮೂಲಕ ಕುಣಿಗಲ್ನ ವಿಸ್ತಾರ್‌ ಫೈನಾನ್ಸಿಯಲ್ ಪ್ರೈವೇಟ್ ಲಿಮಿಟೆಡ್‌ನ‌ಲ್ಲಿ 22.50 ಲಕ್ಷ ರೂ. ಸಾಲ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವಿಚಾರದಲ್ಲಿ ನ್ಯಾಯಾಲಯದ ಮೊರೆ ಹೋದರೂ ನ್ಯಾಯ ಸಿಗುತ್ತಿಲ್ಲ ಎಂದಿದ್ದಾರೆ.

ಮಾಗಡಿ ಪೊಲೀಸ್‌ ಠಾಣೆಗೆ ದೂರು: ಮಾಗಡಿ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಲಾಗಿದೆ. ಪಂಚಾಯ್ತಿಯವರು ಸಹ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿ, ಆಸ್ತಿ ವಿಭಾಗ ಪತ್ರ ಮಾಡಿಸಿದ್ದರು. ತಮ್ಮ ಭೂಮಿಯ ಮೇಲೆ ಇನ್ನೊಬ್ಬರು ಸಾಲ ಪಡೆದಿರುವ ಹಿನ್ನೆಲೆಯಲ್ಲಿ ಮಾಗಡಿ ಪೊಲೀಸರು ತಮ್ಮ ದೂರು ದಾಖಲಿಸಿಕೊಂಡಿದ್ದರು. ಜಿಲ್ಲಾ ನ್ಯಾಯಾಲಯದಲ್ಲಿ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ತದ ನಂತರ ತಮ್ಮ ಮತ್ತು ತಮ್ಮ ಕುಟುಂಬದ ಮೇಲೆ ಮಾನಸಿಕ ಹಿಂಸೆ, ದೌರ್ಜನ್ಯ ನಿಂತಿಲ್ಲ. ತಮಗೆ ಸೇರಿದ ಜಮೀನಿನಲ್ಲಿ ಅವರು ಉಳುಮೆ ಮಾಡಿದ್ದರು, ಇದನ್ನು ಪ್ರಶ್ನಿಸಿದ ತಮಗೆ ಜೀವ ಬೆದರಿಕೆ ಹಾಕಿದ್ದಾರೆ.

ಇಷ್ಟೇ ಅಲ್ಲದೆ, ತಮ್ಮ ಮಗ ಗುರುಬಸಪ್ಪ ಅವರ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸಿ, ತಮ್ಮ ಮರ್ಯಾದೆ ತೆಗೆಯುತ್ತಿದ್ದಾರೆ. ಹೀಗಾಗಿ ತಮಗೆ ಬದುಕಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ತಮಗೆ ದಯಾಮರಣ ನೀಡುವಂತೆ ಮನವಿಯಲ್ಲಿ ಕೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next