ರಾಮನಗರ: ನಗರದ ಅರ್ಚಕರಹಳ್ಳಿಯಲ್ಲಿ ಉದ್ದೇಶಿತ ರಾಜೀವ್ ಗಾಂಧಿ ಆರೋಗ್ಯ ವಿವಿ ಕಟ್ಟಡ ನಿರ್ಮಾಣಕ್ಕೆ ಭೂಸ್ವಾಧೀನ ವಿಚಾರದಲ್ಲಿ ಹೈಕೋರ್ಟ್ ಮೆಟ್ಟಿಲೇರಿರುವ ರೈತರ ಮನವೊಲಿಸುವ ಸಿಎಂ ಎಚ್.ಡಿ. ಕುಮಾರಸ್ವಾಮಿ ಸೇರಿ ಸಚಿವರಾದ ಡಿ.ಕೆ.ಶಿವಕುಮಾರ್, ಎಚ್.ಡಿ.ರೇವಣ್ಣ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳ ಪ್ರಯತ್ನ ಸಫಲವಾಗಲಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಭೂಮಾಲೀಕರು ತಿಳಿಸಿದ್ದಾರೆ.
ರೈತರೊಂದಿಗೆ ಸಂಧಾನ ನಡೆಸಿ ಮನವೊಲಿಸುವಲ್ಲಿ ವಿಫಲರಾದರು. ಇನ್ನೆರೆಡು ದಿನದಲ್ಲಿ ಬೆಂಗಳೂರಿನಲ್ಲಿ ಮತ್ತೂಂದು ಸುತ್ತಿನ ಸಭೆ ಆಯೋಜಿಸುವುದಾಗಿ ತಿಳಿಸಿದ್ದಾರೆ.ಈ ಬಾರಿ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದು ಭೂಮಾಲೀಕರು ತಿಳಿಸಿದ್ದಾರೆ.
ನಾಲ್ಕು ಪಟ್ಟು ಪರಿಹಾರಕ್ಕೆ ಬೇಡಿಕೆ: ನಗರಕ್ಕೆ ಆಗಮಿಸಿದ್ದ ಸಿಎಂ ಕುಮಾರಸ್ವಾಮಿ ಮತ್ತು ಸಚಿವರು ನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದಲ್ಲಿ ಸೋಮವಾರ ಭೂಮಾಲೀಕ ರೈತರೊಡನೆ ಚರ್ಚೆ ನಡೆಸಿದರು.
ಸಚಿವ ಡಿ.ಕೆ.ಶಿವಕುಮಾರ್ ಪ್ರತಿ ಕುಟುಂಬಕ್ಕೂ ಸರ್ಕಾರಿ ಕೆಲಸದ ಭರವಸೆ ನೀಡಿದರು. ಆದರೆ ಭೂಮಾಲೀಕರ್ಯಾರೂ ಇದಕ್ಕೆ ಸ್ಪಂದಿಸಲಿಲ್ಲ. ಸಿಎಂ ಕುಮಾರಸ್ವಾಮಿ ಮಾತನಾಡಿ, ಇದು ಸಾರ್ವಜನಿಕರಿಗಾಗಿ ಮಾಡುತ್ತಿರುವ ಕಾಮಗಾರಿ. ಸ್ಪಂದಿಸಿ, ಮೊದಲು
ಭೂಮಿ ಬಿಟ್ಟು ಕೊಡಿ ಎಂದರು. ಇದಕ್ಕೂ ಭೂಮಾಲೀಕರು ಸ್ಪಂದಿಸದಿದ್ದಾಗ, ಕೊಂಚ ಆಕ್ರೋಶಗೊಂಡ ಸಚಿವ ಎಚ್.ಡಿ.ರೇವಣ್ಣ ,ಸರ್ಕಾರದ ಪರಿಹಾರವನ್ನು ಒಪ್ಪಿಕೊಂಡು ಕೊಡಿ ,ಇಲ್ಲವಾದರೆ ಭೂಮಿ ಪಡೆಯುವುದು ಹೇಗೆ ಎಂದು ಸರ್ಕಾರಕ್ಕೆ ಗೊತ್ತಿದೆ ಎಂದು ಖಾರವಾಗಿ ಹೇಳಿದರು.
ಆದರೆ ಭೂಮಾಲೀಕರು ಪಟ್ಟು ಸಡಿಲಿಸಲಿಲ್ಲ ಎಂದು ಹೇಳಲಾಗಿದೆ. ಇನ್ನೊಂದೆರೆಡು ದಿನ ಬಿಟ್ಟು ಮತ್ತೆ ಸಭೆ ಆಯೋಜಿಸುವುದಾಗಿ ಸಿಎಂ ಹೇಳಿದ ನಂತರ ಸಭೆ ಮುಕ್ತಾಯವಾಗಿದೆ.