ಹೊನ್ನಾವರ: ಸ್ವಾತಂತ್ರ್ಯಕ್ಕಾಗಿ ಸ್ವಂತ ಖುಷಿಯಿಂದ ಆಸ್ತಿ-ಪಾಸ್ತಿ, ಆಯುಷ್ಯ, ಆರೋಗ್ಯ ಕಳೆದು ಕೊಂಡು ಹೋರಾಡಿ ಇತಿಹಾಸ ಸೃಷ್ಟಿಸಿದ ಜಿಲ್ಲೆ ಜನ ಸ್ವಾತಂತ್ರ್ಯಾ ನಂತರ ಅಭಿವೃದ್ಧಿ ಯೋಜನೆಗಳು ಎಂದರೆ ನಿದ್ದೆಗೆಡುತ್ತಾರೆ, ಚಳಿಯಲ್ಲಿ ಬೆವರುತ್ತಾರೆ, ಬೆಚ್ಚಿ ಬೀಳುತ್ತಾರೆ ಯಾಕೆ ?
ನೆರೆ ಜಿಲ್ಲೆಯಂತೆ ಅಭಿವೃದ್ಧಿಯಾಗಬೇಕು, ಮಕ್ಕಳಿಗೆ ಉದ್ಯೋಗ ದೊರೆಯಬೇಕು, ಸೌಲಭ್ಯ ಹೆಚ್ಚಬೇಕು ಎಂಬ ಆಸೆ ಜಿಲ್ಲೆಯ ಜನಕ್ಕಿದೆ. ಆದರೆ ಅಭಿವೃದ್ಧಿ ಹೆಸರಿನಲ್ಲಿ ಬಂದ ಯೋಜನೆಗಳು ಜನರನ್ನು ಬೀದಿಪಾಲು ಮಾಡಿದವು. ಪರಿಹಾರ ಸರಿಯಾಗಿ ದೊರೆಯಲಿಲ್ಲ, ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿ 25ವರ್ಷ ಕಳೆದರೂ ನ್ಯಾಯ ಸಿಗಲಿಲ್ಲ. ಒಂದಲ್ಲ ಎರಡಲ್ಲ ಜಿಲ್ಲೆಗೆ ಬಂದ ಹತ್ತಾರು ಅಭಿವೃದ್ಧಿ ಯೋಜನೆಗಳಲ್ಲಿ ಅಪವಾದ ಎಂಬಂತೆ ಕೊಂಕಣ ರೇಲ್ವೆ ಹೊರತಾಗಿ ಉಳಿದೆಲ್ಲ ಯೋಜನೆಗಳು ಜಾರಿಯಾಗುವಾಗ ರಾಜಕಾರಣಿಗಳಿಂದ ನಿರ್ಲಕ್ಷ, ಅಧಿಕಾರಿಗಳಿಂದ ಶೋಷಣೆಗೊಳಗಾಗಿ ಜನ ಹೈರಾಣಾಗಿ ಹೋದರು. ಚತುಷ್ಪಥ ವಿಸ್ತರಣಾ ಯೋಜನೆಯಲ್ಲೂ ಅದೇ ನಡೆದಿದೆ.
ಸ್ವಾತಂತ್ರ್ಯ ಬಂದಾಗ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣವಾಯಿತು. ಸಾಗರದಿಂದ ಶಿರಸಿ ತನಕ ನಿರಾಶ್ರಿತರು ಬಂದು ನೆಲೆಸಿದ್ದಾರೆ. ಅವರಿಗೆ ಸೂಕ್ತ ಪರಿಹಾರ ಈವರೆಗೆ ದೊರೆತಿಲ್ಲ. ಅಣೆಕಟ್ಟಿನ ಹಿನ್ನೀರಿನಲ್ಲಿ ನೆಲೆಸಿದವರ ಸಮಸ್ಯೆ ಪ್ರತಿವರ್ಷ ಪತ್ರಿಕೆಗಳಲ್ಲಿ ಬರುತ್ತಿದೆ. ಕಾಳಿಯೋಜನೆ ನಿರಾಶ್ರಿತರ ಪುನರ್ವಸತಿ ಯೋಜನೆಯನ್ನು ರಾಮನಗರದಲ್ಲಿ ಜಾರಿಗೊಳಿಸಲಾಗಿತ್ತು. ಅದು ಮುಗಿದಿಲ್ಲ. ಸೀಬರ್ಡ್ ಯೋಜನೆ ಜಾರಿಗೆ ಬರುವಾಗ ರಾಹುಲ್ ಗಾಂಧಿ ಇವರು ಮಾಡಿದ ತ್ಯಾಗಕ್ಕೆ ಬೆಲೆಕಟ್ಟಲಾಗದು ಒಬ್ಬ ನಿರಾಶ್ರಿತರ ಕಣ್ಣೀರು ನೆಲದ ಮೇಲೆ ಬೀಳದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದರು. ಪುನರ್ವಸತಿ ದೊಡ್ಡ ರಾಮಾಯಣವೇ ಆಗಿಹೋಯಿತು. ಕೇಂದ್ರ ಮಾನವಹಕ್ಕುಗಳ ಆಯೋಗ ಜೀವ ಉಳಿಸಲು ನೆರವಾಯಿತು. ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿ ಕಾಲುಶತಮಾನ ಕಳೆದರೂ ನ್ಯಾಯ ಮರೀಚಿಕೆಯಾಗಿದೆ. ಹಿರೇಗುತ್ತಿ, ಮಾದನಗೇರಿ ರೈತರನ್ನು ಬೀದಿಗೆಸೆಯಲಾಯಿತು. ಭೂಮಾಲಕರು ಪರಿಹಾರ ಜೇಬಿಗಿಳಿಸಿದರು. ಭೂಮಿ ಈಗಲೂ ಬರಡಾಗಿದೆ. ಶರಾವತಿ ಟೇಲರೀಸ್‌ಗೆ ಪುನರ್ವಸತಿ ಸಮಸ್ಯೆ ಬರಲಿಲ್ಲ, ಪುನಃ ಅರಣ್ಯ ನಿರ್ಮಾಣವನ್ನು ಬೇರೆ ಜಿಲ್ಲೆಯಲ್ಲಿ ಮಾಡುತ್ತೇವೆ ಎಂದು ಹಣ ಖಾಲಿ ಮಾಡಿದರು. ಕೈಗಾ ಪುನರ್ವಸತಿ ಸಮಸ್ಯೆ ಬಗೆಹರಿದಿಲ್ಲ.
ಹಲವು ಕಡೆ ಬೈಪಾಸ್ ಕೇಳಿದರೂ ಕೊಡದೆ ವಿರೋಧವಿದ್ದ ಕುಮಟಾಕ್ಕೆ ಬೈಪಾಸ್ ಹೇರಲಾಗುತ್ತಿದೆ. ಮೂರು ವರ್ಷ ತೂಕಡಿಸಿದ ಕಂದಾಯ ಇಲಾಖೆ ಈಗ ಏಕಾಏಕಿ ಖಾಸಗಿ ಭೂಮಿ ಖುಲ್ಲಾಪಡಿಸುತ್ತಿದೆ. ಶಾಸಕ ದಿನಕರ ಶೆಟ್ಟಿ ಎದೆಗೊಟ್ಟು ನಿಲ್ಲದಿದ್ದರೆ ಹೊನ್ನಾವರ ಕುಮಟಾ ಮಧ್ಯೆ ನೂರಾರು ಕುಟುಂಬಗಳು ಪರಿಹಾರ, ಪುನರ್ವಸತಿ ಇಲ್ಲದೆ ಬೀದಿಪಾಲಾಗುತ್ತಿತ್ತು.
ತಮ್ಮದೇ ಸರ್ಕಾರದ ವಿರುದ್ಧ ಮಾದನಗೇರಿ, ಹಿರೇಗುತ್ತಿ ರೈತರ ಪರವಾಗಿ ಹೋರಾಡಿದ ಬಿ.ವಿ. ನಾಯ್ಕ ರಾಜಕೀಯ ಭವಿಷ್ಯ ಇತಿಶ್ರೀ ಆಯಿತು. ಕೈಗಾ, ಶರಾವತಿ ಟೇಲರೀಸ್ ವಿರುದ್ಧ ಹೋರಾಟ ನಡೆಸುತ್ತಾ ಕೈಸೋತ ಡಾ| ಕುಸುಮಾ ಆ ಕೆಲಸಕ್ಕೆ ಬೆಂಗಳೂರಿಗೆ ಹೊರಟಾಗಲೇ ಮಾರ್ಗ ಮಧ್ಯೆ ಅಪಘಾತಕ್ಕೀಡಾದರು. ಪ್ರೇಮಾನಂದ ಭಟ್ ಎಂಬ ಪ್ರಸಿದ್ಧ ಕೃಷಿಕ ದೇಶಕ್ಕೆ ಮಾದರಿಯಾದ ತೋಟ ನಿರ್ಮಿಸಿದ್ದರು. ಮೂರುಕಾಸು ಪರಿಹಾರ ನೀಡಿ ಅವರನ್ನು ಸೀಬರ್ಡ್ ಪ್ರದೇಶದಿಂದ ಹೊರತಳ್ಳಿದರು. ಹೇಗೋ ಇನ್ನೊಂದು ಕಡೆ ತೋಟ ಮಾಡಿದರು. ಅಲ್ಲಿಂದಲೂ ಎಬ್ಬಿಸಿದ್ದಾರೆ. ಇಂತಹ ಅಮಾನವೀಯ ಅದೆಷ್ಟೋ ಘಟನೆಗಳು ಪ್ರತಿಬಾರಿ ಪುನರ್ವಸತಿ ಕಾರ್ಯದಲ್ಲಿ ನಡೆದಿವೆ. ಕೊಂಕಣ ರೇಲ್ವೆ ವಶಪಡಿಸಿಕೊಂಡ ಭೂಮಿಯ ಎಡಬಲದ ಸಹಸ್ರಾರು ಎಕರೆ ಹಾಳುಬಿದ್ದಿದೆ. ಪೂರ್ವ ಪಶ್ಚಿಮವಾಗಿ ನೀರು ಹರಿದುಹೋಗಲು ಮಾಡಿದ ವ್ಯವಸ್ಥೆ ಕುಲಗೆಟ್ಟು ರಾಜಾಕಾಲುವೆಯಲ್ಲಿ ಮರಗಳು ಬೆಳೆದುನಿಂತ ಕಾರಣ ಸಣ್ಣ ಮಳೆಗೂ ನೆರೆ ಬರುತ್ತದೆ. ರೈತರು ಗದ್ದೆ ಮಾಡುವುದನ್ನು ಬಿಟ್ಟಿದ್ದಾರೆ.
ಜನ ಒಗ್ಗಟ್ಟಿನಿಂದ ಹೋರಾಡಿಲ್ಲ, 25-30ವರ್ಷಗಳಿಂದ ಕೇಂದ್ರ ರಾಜ್ಯದಲ್ಲಿ ಅಧಿಕಾರದಲ್ಲಿರುವ ರಾಜಕಾರಣಿಗಳಿಗೆ ಈ ಸಮಸ್ಯೆ ತಟ್ಟಲಿಲ್ಲ, ಅಧಿಕಾರಿಗಳಿಗೆ ಸುಗ್ಗಿಯಾಯಿತು. ಯೋಜನೆಯ ಲಾಭವೂ ಜನರಿಗೆ ಸಿಗಲಿಲ್ಲ. ಚತುಷ್ಪಥ ಕಾಮಗಾರಿಯಲ್ಲೂ ಇದೇ ಕಥೆ, ಇದೇ ವ್ಯಥೆ. ಆದ್ದರಿಂದಲೇ ಜನ ಯೋಜನೆ ಎಂದರೆ ನಡುಗುತ್ತಾರೆ, ಅಸಹಾಯರಾಗಿ ರಸ್ತೆಯಲ್ಲಿ ಕೂಗಾಡುತ್ತಾರೆ. ಇವರ ಅರಣ್ಯ ರೋದನ ಸಂಬಂಧಿ ಸಿದವರಿಗೆ ಕೇಳಿಸುವುದಿಲ್ಲ.
. ಜೀಯು, ಹೊನ್ನಾವರ