Advertisement
ಕುಲ್ಗಾಮ್ ಜಿಲ್ಲೆಯ ಅಶಿಮುಜಿ ಪ್ರಾಂತ್ಯದವರಾದ ವಾನಿ, 90ರ ದಶಕದಲ್ಲಿ ಕಾಶ್ಮೀರದ ಇಖ್ವಾನಿಸ್ ಎಂಬ ನುಸುಳುಕೋರ ಉಗ್ರರ ಪಡೆಯಲ್ಲಿ ಸಕ್ರಿಯ ವಾಗಿದ್ದರು. ಆದರೆ ಅನಂತರ ಮನಃಪರಿವರ್ತನೆ ಯಾಗಿ 2004ರಲ್ಲಿ ಭಾರತೀಯ ಸೇನೆ ಸೇರಿದ್ದರು. 2018ರ ನ. 25ರಂದು ಶೋಪಿಯಾನ್ ಜಿಲ್ಲೆಯ ಬಟಗುಂಡ್ ಹಳ್ಳಿಯ ಮನೆಯಲ್ಲಿ ಅಡಗಿದ್ದ ಉಗ್ರರ ತಂಡದೊಂದಿಗೆ ಹೋರಾಡುವಾಗ ಹುತಾತ್ಮರಾಗಿದ್ದರು. ಗುಂಡಿನ ದಾಳಿಯಲ್ಲಿ ಜರ್ಝರಿತರಾಗಿದ್ದರೂ ಇಬ್ಬರು ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಅವರು ಯಶಸ್ವಿಯಾಗಿದ್ದರು.
ವಾನಿ ಕಣಿವೆ ರಾಜ್ಯದಲ್ಲಿ ನಡೆದ 17 ಪ್ರಮುಖ ಎನ್‌ಕೌಂಟರ್‌ಗಳಲ್ಲಿ ಭಾಗಿಯಾಗಿದ್ದರು. ದೇಶಕ್ಕೆ ಅವರು ನೀಡಿದ ಸೇವೆಯನ್ನು ಪರಿಗಣಿಸಿ ಎರಡು ಬಾರಿ ಸೇನಾ ಪದಕವನ್ನೂ ನೀಡಿ ಗೌರವಿಸಲಾಗಿತ್ತು. ಕಾಶ್ಮೀರಿ ಯೋಧರು, ಪೊಲೀಸರು ಹಾಗೂ ಅವರ ಕುಟುಂಬ ಸದಸ್ಯರನ್ನು ಉಗ್ರರು ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದಂಥ ಘಟನೆಗಳ ಹೊರತಾಗಿಯೂ ವಾನಿ ಅವರು ಧೃತಿಗೆಡದೆ ಸೇನಾ ಕಾರ್ಯಾಚರಣೆಯಲ್ಲಿ ಭಾಗಿಯಾಗುತ್ತಿದ್ದರು. ಪ್ರತಿಕೂಲ ಪರಿಸ್ಥಿತಿಗಳಲ್ಲೂ ಧೈರ್ಯಗೆಡದೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರು ಎಂದು ರಾಷ್ಟ್ರಪತಿ ಭವನದ ಪ್ರಕಟನೆಯಲ್ಲಿ ಉಲ್ಲೇಖೀಸಲಾಗಿದೆ. ಕೊನೆಯ ದಿನ…
ಅಂದು ಶೋಪಿಯಾನ್‌ನ ಬಂಟಗುಂಡ್ ಗ್ರಾಮದಲ್ಲಿ 6 ಉಗ್ರರು ಅವಿತಿದ್ದ ಮಾಹಿತಿಯ ಆಧಾರದಲ್ಲಿ ಸೇನೆ ಕಾರ್ಯಾಚರಣೆಗಿಳಿದಿತ್ತು. ಈ ವೇಳೆ ಲಷ್ಕರ್ ಉಗ್ರರಿಗೆ ಎಸ್ಕೇಪ್ ಆಗಲು ಯಾವುದೇ ದಾರಿ ಸಿಗಬಾರದೆಂದು ಎಲ್ಲ ಮಾರ್ಗಗಳನ್ನೂ ಬ್ಲಾಕ್ ಮಾಡುವಲ್ಲಿ ವಾನಿ ಮತ್ತು ಅವರ ತಂಡ ಮಹತ್ವದ ಪಾತ್ರ ವಹಿಸಿತ್ತು. ಈ ಸಮಯದಲ್ಲಿ ಉಗ್ರರು ಒಂದೇ ಸಮನೆ ಗ್ರೆನೇಡ್ ಎಸೆಯುತ್ತಾ, ಗುಂಡಿನ ಮಳೆಗೆರೆಯತೊಡಗಿದರು. ಆದರೂ ಅವರಿಗೆ ತಕ್ಕ ಪ್ರತ್ಯುತ್ತರ ನೀಡಿದ ಯೋಧರು, ಒಬ್ಬ ಉಗ್ರನನ್ನು ಸದೆಬಡಿಯುವಲ್ಲಿ ಯಶಸ್ವಿಯಾದರು. ತದನಂತರ ಮತ್ತೂಬ್ಬ ಉಗ್ರ ಅವಿತಿದ್ದ ಮನೆಯೊಳಗೆ ವಾನಿ ಪ್ರವೇಶಿಸಿ, ಉಗ್ರನೊಂದಿಗೆ ಹೋರಾಡಿದರು. ಅಷ್ಟರಲ್ಲಾಗಲೇ ಅವರ ದೇಹದೊಳಕ್ಕೆ ಸಾಕಷ್ಟು ಗುಂಡುಗಳು ಹೊಕ್ಕಿದ್ದವು. ಆದರೆ ಆ ಮನೆಯೊಳಗಿದ್ದ ಉಗ್ರನನ್ನು ಕೊಂದ ಬಳಿಕ ಕುಸಿದು ಬಿದ್ದ ವಾನಿ ಅನಂತರ ಮೇಲೇಳಲೇ ಇಲ್ಲ. ಈ ಕಾರ್ಯಾಚರಣೆಯಲ್ಲಿ ಎಲ್ಲ 6 ಲಷ್ಕರ್ ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಸೇನೆ ಯಶಸ್ವಿಯಾಗಿತ್ತು.