ಹುಬ್ಬಳ್ಳಿ: ಕೋಣೆಗಳ ದುರಸ್ತಿ ಕಾಮಗಾರಿಯಲ್ಲಿ ಆಗುತ್ತಿರುವ ಉದಾಸೀನತೆಯಿಂದಾಗಿ ಇಲ್ಲಿನ ಲ್ಯಾಮಿಂಗ್ಟನ್ ಶಾಲೆಯ ನೂರಾರು ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಕೋಣೆಗಳಿಲ್ಲದೆ ಪರದಾಡುವಂತಾಗಿದೆ. ರಜೆ ಅವಧಿಯಲ್ಲಿ ದುರಸ್ತಿ ಕಾರ್ಯ ಕಾಲಮಿತಿಯೊಳಗೆ ನಡೆಯದಿರುವುದೇ ಸಮಸ್ಯೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಮಹಾನಗರ ಪಾಲಿಕೆ ಒಡೆತನದ ಶಾಲೆಯಲ್ಲಿ ಸುಮಾರು 15 ಕೋಣೆಗಳ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದ್ದು, ಗುತ್ತಿಗೆದಾರರು ಕಾಮಗಾರಿಯನ್ನು ಸಕಾಲಿಕವಾಗಿ ಕೈಗೊಳ್ಳದೆ ಇರುವುದರಿಂದಾಗಿ ಶಾಲೆ ಆರಂಭವಾಗಿ ವಾರ ಕಳೆಯುತ್ತಿದ್ದರೂ ಇನ್ನು ದುರಸ್ತಿ ಕಾಮಗಾರಿ ಪೂರ್ಣಗೊಂಡಿಲ್ಲ.
ವಿದ್ಯಾರ್ಥಿಗಳು ಪ್ರವೇಶ ಪಡೆದು ಶಾಲೆಗೆ ಆರಂಭಿಸುತ್ತಿದ್ದರೂ ಕೋಣೆಗಳ ಕೊರತೆಯಿಂದ ಶಿಕ್ಷಕರು ಪಾಠ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗುತ್ತಿದ್ದು, ಇದು ಪಾಲಕರ ಅಸಮಾಧಾನಕ್ಕೂ ಕಾರಣವಾಗುತ್ತಿದೆ. ರಜೆ ಅವಧಿಯ ಎರಡು ತಿಂಗಳಲ್ಲಿ ದುರಸ್ತಿ ಕಾರ್ಯ ಪೂರ್ಣಗೊಳಿಸಬೇಕಾಗಿತ್ತಾದರೂ, ಈ ಬಗ್ಗೆ ಕಾಮಗಾರಿ ಗುತ್ತಿಗೆ ಪಡೆದವರಿಗೆ ಹಲವು ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ ಎನ್ನಲಾಗಿದೆ.
ಶಾಲಾ ಕೋಣೆಗಳ ದುರಸ್ತಿ ವಿಚಾರದಲ್ಲಿ ಮುತುವರ್ಜಿ ವಹಿಸಿ ಶಾಲೆ ಆರಂಭಗೊಳ್ಳುವ ಪೂರ್ವದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಜವಾಬ್ದಾರಿ ತೋರಬೇಕಾಗಿದ್ದ ಮಹಾನಗರ ಪಾಲಿಕೆ ಹಿರಿಯ ಅಧಿಕಾರಿಗಳೇ ಕೋಣೆಗಳ ದುರಸ್ತಿ ವಿಳಂಬಕ್ಕೆ ತ್ವರಿತ ಪರಿಹಾರ ಹಾಗೂ ಗುತ್ತಿಗೆದಾರನ ಮೇಲೆ ತೀವ್ರ ಒತ್ತಡದ ಬದಲು ವಿದ್ಯಾರ್ಥಿಗಳಿಗೆ ತೊಂದರೆ ಆಗುವುದಾದರೆ ಒಂದು ವಾರ ರಜೆ ನೀಡಿಬಿಡೋಣ ಬಿಡಿ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ.
ಸೋಮವಾರ ಗುತ್ತಿಗೆದಾರರನ್ನು ಕರೆಸಿ ಪಾಲಿಕೆ ಅಧಿಕಾರಿಗಳು ಹಾಗೂ ಶಾಲೆ ಉಸ್ತುವಾರಿ ಸಮಿತಿಯವರು ಚರ್ಚಿಸಿದ್ದು, ಆದಷ್ಟು ಶೀಘ್ರ ಕಾಮಗಾರಿ ಪೂರ್ಣದ ಭರವಸೆ ನೀಡಿದ್ದಾರೆ ಎನ್ನಲಾಗಿದ್ದು, ಇನ್ನಾದರೂ ದುರಸ್ತಿ ಕಾರ್ಯ ತೀವ್ರಗೊಂಡು ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅವಕಾಶ ದೊರೆಯುವುದೇ ಕಾದು ನೋಡಬೇಕು.
ಶಾಲೆಯ ಸಮಸ್ಯೆ ಕುರಿತಾಗಿ ಮಾಹಿತಿ ಪಡೆಯಲು ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ ಅವರನ್ನು ಸಂಪರ್ಕಿಸಲು ಮುಂದಾದಾಗ ಕಾರ್ಯಕ್ರಮವೊಂದರಲ್ಲಿದ್ದಾಗಿ ತಿಳಿಸಿದ ಅವರು, ಅನಂತರ ಮೊಬೈಲ್ ಕರೆ ಸ್ವೀಕರಿಸಲಿಲ್ಲ