ಇಳಕಲ್ಲ: ಬಂಜಾರ ಸಮಾಜದ ತಾಂಡಾಗಳು ಈಗಲೂ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದೆ. ಅಂತಹ ತಾಂಡಾಗಳ ಶಾಲೆಗಳನ್ನು ದತ್ತು ಪಡೆದು ಶೈಕ್ಷಣಿಕವಾಗಿ ಪ್ರಗತಿಪಥದತ್ತ ಸಾಗುವಂತೆ ಮಾಡುವೆ ಎಂದು ಎಸ್.ಆರ್.ಎನ್.ಇ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ನವಲಿಹಿರೇಮಠ ಹೇಳಿದರು.
ಇಲ್ಲಿಯ ವಿಜಯಮಹಾಂತೇಶ ಅನುಭವ ಮಂಟಪದಲ್ಲಿ ಸಂತ ಸೇವಾಲಾಲ್ ಗೂರಬಾಯಿ ಸಾಂಸ್ಕೃತಿಕ ಸಾಹಿತ್ಯ ಹಾಗೂ ಶಿಕ್ಷಣ ಜಾಗೃತಿ ವೇದಿಕೆಯಿಂದ ಹಮ್ಮಿಕೊಳ್ಳಲಾದ ಬಂಜಾರ ಸಮಾಜದ ಗೂರೂರ ಕೋವಲೆರ ಢಾಳ ಸೀಜನ್ -1 ಜೀ ಕನ್ನಡ ಮಾದರಿಯ ಕರ್ನಾಟಕ ಗ್ರ್ಯಾಂಡ್ ಫಿನಾಲೆ ಸಂಗೀತ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ನನಗೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಹುನಗುಂದ ಮತಕ್ಷೇತ್ರದ ಪ್ರತಿಯೊಂದು ತಾಂಡಾಗಳಿಗೆ ಭೇಟಿ ನೀಡಿದಾಗ ತಾಂಡಾದ ಮಕ್ಕಳು ಶಿಕ್ಷಣಕ್ಕಾಗಿ ಕಿ.ಮೀ.ಗಳಷ್ಟು ನಡೆದುಕೊಂಡು ಅಲೆಯುವಂತ ದುಸ್ಥಿತಿ ನೋಡಿ ನಮ್ಮ ಎಸ್‌ಆರ್‌ಎನ್ ಫೌಂಡೇಶನ್ ವತಿಯಿಂದ ತಾಂಡಾ ಅಭಿವೃದ್ಧಿ ನಿಗಮಕ್ಕೆ ನೀಡುತ್ತೇನೆ. ಹುನಗುಂದ ಮತಕ್ಷೇತ್ರದಲ್ಲಿನ ಎಲ್ಲ ತಾಂಡಾಗಳ ಸರಕಾರಿ ಶಾಲೆಗಳನ್ನು ದತ್ತು ಪಡೆದು ಹೈಟೆಕ್ ಶಾಲೆಗಳನ್ನಾಗಿ ಮಾಡಿ ತೋರಿಸುತ್ತೇನೆ ಎಂದು ಹೇಳಿದರು.
ಕುಡಚಿ ಶಾಸಕ ಪಿ. ರಾಜೀವ ಮಾತನಾಡಿ, ಒಂದು ಜನಾಂಗದ ಅವನತಿ ಕೇವಲ ಅವರ ಸಂಸ್ಕೃತಿ ಮುಗಿಸದರೇ ಸಾಕು, ಇಡೀ ಜನಾಂಗವೇ ನಾಶವಾಗುತ್ತದೆ. ಅದಕ್ಕಾಗಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದು ಹೇಳಿದರು. ಸಂಗೀತ ಕಾರ್ಯಕ್ರಮದಲ್ಲಿ 10 ಜನ ಸ್ಪರ್ಧಾಳುಗಳು ಆಯ್ಕೆಯಾಗಿದ್ದು, ಕೇವಲ ಲಂಬಾಣಿ ಭಾಷೆಯಲ್ಲಿಯೇ ಹಾಡು ಹಾಡುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕೊರವಿ ತಾಂಡಾದ ಸಂತೋಷ ರಾಠೊಡ ಅವರಿಗೆ 50 ಸಾವಿರ ನಗದು ಬಹುಮಾನ, ರನ್ನರ್ ಆಫ್ ಆಗಿರುವ ಪಾಪನಾಶಿ ತಾಂಡಾದ ಸಾವಿತ್ರಿ ಲಮಾಣಿ 25 ಸಾವಿರ ನಗದು ಬಹುಮಾನ ನೀಡಲಾಯಿತು. ಬಾಗಲಕೋಟೆ ವೈದ್ಯ ಡಾ| ಬಾಬುರಾಜೇಂದ್ರ ನಾಯಕ, ಬಂಜಾರ ಜಾಗೃತಿ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಶ್ರೀಕಾಂತ ಜಾಧವ, ರವೀಂದ್ರ ಜಾಧವ, ದಾನಿಗಳಾದ ನಗರದ ದೀಪಕ ರಾಠೊಡ, ರಾಜು ಬೋರಾ, ಪರಶುರಾಮ ಪಮ್ಮಾರ ಹಾಗೂ ಅನೇಕರು ಇದ್ದರು.