ಮುಂಡಗೋಡ : ಈ ಊರಲ್ಲಿ ವಿಶಿಷ್ಟ ಆಚರಣೆ ನಡೆಯುತ್ತದೆ. ಹಲವು ವರ್ಷಗಳಿಂದ ನಿಂತುಹೋಗಿದ್ದ ಸಾಂಪ್ರದಾಯಿಕ ಆಚರಣೆಯೊಂದು ಮರಳಿ ಆಚರಣೆಗೆ ಬಂದಿದೆ. ಗ್ರಾಮಸ್ಥರ ಒಗ್ಗಟ್ಟಿನೊಂದಿಗೆ ತಮ್ಮ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಆಚರಣೆಗೆ, ತಾಲೂಕಿನ ಅರಿಶಿಣಗೇರಿ ಗ್ರಾಮದ ಲಂಬಾಣಿ ಸಮುದಾಯದವರು ಮುಂದಾಗಿದ್ದಾರೆ. ಅವರ ಆಚರಣೆ ನಿಜಕ್ಕೂ ವಿಶಿಷ್ಟವೆನಿಸುತ್ತದೆ.
ತಾಲೂಕಿನ ಅರಿಶಿಣಗೇರಿ ಗ್ರಾಮದಲ್ಲಿ ಹೋಳಿ ಹುಣ್ಣಿಮೆಯ ದಿನವಾದ ಶುಕ್ರವಾರ ಬೆಳಿಗ್ಗೆ, ಲಂಬಾಣಿ ಸಮುದಾಯದವರ ಸಾಂಪ್ರದಾಯಿಕ ಕಲೆ ಅನಾವರಣಗೊಂಡಿತ್ತು. ಗ್ರಾಮದ ಪ್ರವೇಶದ್ವಾರದ ಬಯಲು ಜಾಗದಲ್ಲಿ ವಿಶೇಷ ಪೂಜೆಯೊಂದಿಗೆ ಕಟ್ಟಿಗೆಯ ಗುಡಿಸಲು ಆಕಾರಕ್ಕೆ ಅಗ್ನಿ ಸ್ಪರ್ಶ ಮಾಡಿ, ನಿಂತುಹೋಗಿದ್ದ ಹಬ್ಬದ ಆರಂಭಕ್ಕೆ ಚಾಲನೆ ನೀಡಿದರು. ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲ ವಯೋಮಾನದವರು ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಕಳೆದ 15-20 ವರ್ಷಗಳ ಹಿಂದೆ ಗ್ರಾಮದಲ್ಲಿ ಆಚರಿಸಿಕೊಂಡು ಬರುತ್ತಿದ್ದ ಆಚರ ಣೆಯೊಂದು ನಿಂತಿತ್ತು. ಆದರೆ, ಸಮಾಜದ ಸಾಂಪ್ರದಾಯಿಕ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಲು, ಯುವಕರು ಸೇರಿದಂತೆ ಹಿರಿಯರು ನಿರ್ಧರಿಸಿದ್ದರು. ಅದರಂತೆ ಈ ವರ್ಷದಿಂದ ಮತ್ತೆ ಹೋಳಿ ಆಚರಣೆಯ ಸಂಪ್ರದಾಯವನ್ನು ಆರಂಭಿಸಲು ನಿರ್ಧರಿಸಲಾಯಿತು. ಹೋಳಿ ಹುಣ್ಣಿಮೆ ಆರಂಭಕ್ಕೂ ಮೊದಲು ಹದಿನೈದು ದಿನಗಳ ಮೊದಲೇ, ಗ್ರಾಮದಲ್ಲಿ ನಿತ್ಯವೂ ನೃತ್ಯದೊಂದಿಗೆ ನಗಾರಿ ಪೂಜೆ ನಡೆಯುತ್ತದೆ. ಸುತ್ತಲಿನ ಗ್ರಾಮದ ಹಿರಿಯಲು ಬಂದಿರುತ್ತಾರೆ. ಅವರಿಗೆ ಗೌರವದೊಂದಿಗೆ ಆಮಂತ್ರಣ ನೀಡಲಾಗುತ್ತದೆ.
ಇದನ್ನೂ ಓದಿ : ವ್ಯಾಟ್ಸಪ್ ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’; ಲಿಂಕ್ ಒತ್ತಿದರೆ ನಿಮ್ಮ ಬ್ಯಾಂಕ್ ಹಣಕ್ಕೆ ಕನ್ನ!
ರವಿ ಲಮಾಣಿ ಅರಶಿಣಗೇರಿ ಗ್ರಾಮದ ಮುಖಂಡರು: ಮಕ್ಕಳು, ಮಹಿಳೆಯರು ಎನ್ನುವ ಬೇಧವಿಲ್ಲ. ಎಲ್ಲರೂ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಹೋಳಿ ಹುಣ್ಣಿಮೆಯ ದಿನದಂದು ಬೆಳಗಿನ ಜಾವವೇ, ಗ್ರಾಮದ ಮುಂಭಾಗದಲ್ಲಿಯೇ ಕಟ್ಟಿಗೆಯ ರಾಶಿ ಹಾಕಿ, ಹಾಲು, ತುಪ್ಪ ಹಾಕಿ ಅದಕ್ಕೆ ಅಗ್ನಿ ಸ್ಪರ್ಶ ಮಾಡಲಾಗುತ್ತದೆ. ಅಗ್ನಿ ಸ್ಪರ್ಶಕ್ಕೂ ಮುಂಚೆ, ಧಾರ್ಮಿಕ ವಿಧಿ ವಿಧಾನದಂತೆ ಪೂಜಾ ಕಾರ್ಯ ಕೈಗೊಳ್ಳಲಾಗುತ್ತದೆ. ಬೆಂಕಿ ಆರುವರೆಗೂ ಅಲ್ಲಿಯೇ ಇದ್ದು, ನಂತರ ಅದರ ಬೂದಿಯನ್ನು ಹಣೆಗೆ ಹಚ್ಚಿಕೊಂಡು ಒಳ್ಳಯದನ್ನು ಮಾಡು ದೇವರೆ ಎಂದು ಬೇಡಿಕೊಳ್ಳುತ್ತೇವೆ. ಸಂಜೆಯಾದ ನಂತರ ಮತ್ತೆ ಅದೇ ಜಾಗಕ್ಕೆ ತೆರಳಿ, ಬೂದಿಯನ್ನು ದುಂಡಗೆ ಮಾಡಿ, ಪೂಜೆ ಮಾಡಲಾಗುತ್ತದೆ. ಇದು ಲಂಬಾಣಿ ಸಮುದಾಯದವರ ಹೋಳಿ ಹಬ್ಬದ ಆಚರಣೆಯಾಗಿದೆ ಎಂದು ಹೇಳಿದರು.