Advertisement

ಶಿವ ವೇಷಧಾರಿಯಾಗಿ ಮುಕ್ಕಣ್ಣನ ಪೂಜೆ ಮಾಡಿದ ಲಾಲೂ ಪುತ್ರ!

09:03 AM Jul 25, 2019 | Team Udayavani |

ಪಟ್ನಾ : ಬಿಹಾರದ ಮಾಜೀ ಮುಖ್ಯಮಂತ್ರಿ ಮತ್ತು ಆರ್.ಜೆ.ಡಿ. ಪಕ್ಷದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಗಳಿಗೆ ಸುದ್ದಿಯಲ್ಲಿದ್ದಾರೆ. ಲಾಲೂ ಪುತ್ರ ಹಿಂದೂ ದೇವರುಗಳ ರೀತಿಯಲ್ಲಿ ವೇಷಭೂಷಣವನ್ನು ತೊಟ್ಟುಕೊಂಡು ಮಂದಿರಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವ ಮೂಲಕ ಹಲವು ಬಾರಿ ಸುದ್ದಿಯಾಗಿದ್ದರು.

Advertisement

ಈ ಬಾರಿ ತೇಜ್ ಪ್ರತಾಪ್ ಅವರು ಶಿವನ ರೂಪದಲ್ಲಿ ಪಾಟ್ನಾದಲ್ಲಿರುವ ದೇವಸ್ಥಾನ ಒಂದಕ್ಕೆ ತೆರಳಿ ಪೂಜೆ ಸಲ್ಲಿಸಿರುವುದಾಗಿ ವರದಿಯಾಗಿದೆ. ಇದು ಸಾವನ್ ಮಾಸವಾಗಿದ್ದು ಈ ಸಮಯದಲ್ಲಿ ಉತ್ತರ ಭಾರತದಾದ್ಯಂತ ವಿಶೇಷವಾಗಿ ಶಿವನ ಆರಾಧನೆಯನ್ನು ನಡೆಸಲಾಗುತ್ತದೆ. ಮತ್ತು ಈ ಮಾಸದಲ್ಲಿ ಕನ್ವಾರಿಯಾಗಳು ಗಂಗಾ ನದಿಯಿಂದ ಪವಿತ್ರ ಜಲವನ್ನು ತಂದು ಅದನ್ನು ಶಿವಲಿಂಗಕ್ಕೆ ಅಭಿಷೇಕ ನಡೆಸುತ್ತಾರೆ.

ಬಿಹಾರದಲ್ಲಿ ಕನ್ವಾರಿಯಾಗಳು ಸುಲ್ತಾನ್ ಗಂಜ್ ನಿಂದ ಗಂಗಾ ಜಲವನ್ನು ಹಿಡಿದುಕೊಂಡು ಜಾರ್ಖಂಡ್ ನ ಧಿಯೋಘರ್ ಗೆ ಯಾತ್ರೆ ನಡೆಸುವ ಸಂಪ್ರದಾಯ ಚಾಲ್ತಿಯಲ್ಲಿದೆ. ಶಿವ ಭಕ್ತನಾಗಿರುವ ತೇಜ್ ಪ್ರತಾಪ್ ಅವರು ಈ ಬಾರಿ ಯಾತ್ರೆಗೆ ಹೊರಡುತ್ತಾರೆಯೇ ಎಂಬ ಸಂಶಯವೂ ಇದೀಗ ಎದ್ದಿದೆ.

ಬಿಳಿ ದೋತಿ, ಹುಲಿ ಚರ್ಮದ ವಿನ್ಯಾಸದ ಸೊಂಟ ಪಟ್ಟಿ, ಹಣೆ ಮತ್ತು ಕೈಗಳಿಗೆ ಮೆತ್ತಿದ ವಿಭೂತಿ ಮತ್ತು ಕೊರಳಲ್ಲಿ ರುದ್ರಾಕ್ಷಿ ಮಾಲೆ, ಈ ರೀತಿಯಾಗಿ ತನ್ನನ್ನು ತಾನು ಭಗವಾನ್ ಶಿವನಂತೆ ಅಲಂಕರಿಸಿಕೊಂಡು ತೇಜ್ ಪ್ರತಾಪ್ ಅವರು ದೇವಾಲಯಕ್ಕೆ ಬಂದಿದ್ದರು.

ಈ ಹಿಂದೆಯೂ ಸಹ ಹಲವಾರು ಬಾರಿ ತೇಜ್ ಪ್ರತಾಪ್ ಅವರು ಹಿಂದೂ ದೇವತೆಗಳ ವೇಷವನ್ನು ಧರಿಸಿಕೊಂಡಿದ್ದರು. 2018ರ ಆಗಸ್ಟ್ 4ರಂದು ತೇಜ್ ಪ್ರತಾಪ್ ಅವರು ಮಹಾದೇವನ ವೇಷದಲ್ಲಿ ಧ್ಯಾನ ಮಾಡುತ್ತಿರುವ ಫೊಟೋವನ್ನು ಟ್ವೀಟ್ ಮಾಡಿದ್ದರು. 2017ರಲ್ಲಿ ಹೊಸ ವರ್ಷದ ಸ್ವಾಗತಕ್ಕಾಗಿ ತೇಜ್ ಪ್ರತಾಪ್ ಅವರು ಕೃಷ್ಣನ ವೇಷವನ್ನು ಧರಿಸಿಕೊಂಡಿದ್ದು ಸುದ್ದಿಯಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next