ಹೊಸದಿಲ್ಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಮಾಜಿ ರೈಲ್ವೇ ಸಚಿವ ಲಾಲು ಪ್ರಸಾದ್ ಯಾದವ್ ಕುಟುಂಬ 600 ಕೋಟಿ ರೂ. ಮೌಲ್ಯದ ಅಕ್ರಮ ನಡೆಸಿದೆ ಎಂದು ಜಾರಿ ನಿರ್ದೇಶ ನಾಲಯ(ಇ.ಡಿ.) ಆರೋಪಿಸಿದೆ. ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಅವರ ಪುತ್ರರು, ಪುತ್ರಿಯರ ಸಹಿತ ಕುಟುಂಬಸ್ಥರ ಮನೆಗಳ ಮೇಲೆ ಇ.ಡಿ. ಶುಕ್ರವಾರ ದಾಳಿ ನಡೆಸಿತ್ತು. ಈ ವೇಳೆ ದಾಖಲೆ ಇಲ್ಲದ 1 ಕೋಟಿ ರೂ. ನಗದು, ವಿದೇಶಿ ಕರೆನ್ಸಿ, 540 ಗ್ರಾಂ ಚಿನ್ನದ ಗಟ್ಟಿ ಹಾಗೂ 1.5 ಕೆ.ಜಿ.ಗೂ ಅಧಿಕ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಆರೋಪಿಸಿದೆ.
ಇದೇ ವೇಳೆ ವಿವಿಧ ಆಸ್ತಿ ದಾಖಲೆಗಳು, ಬೇನಾಮಿ ಆಸ್ತಿ ದಾಖಲೆಗಳು, ದೊಡ್ಡ ಪ್ರಮಾಣದ ಜಮೀನಿನ ದಾಖಲೆಗಳು, ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಲಾಲು ಪುತ್ರಿ ರಾಗಿಣಿ ನಿವಾಸದ ಮೇಲೆ ಇ.ಡಿ. ಶುರು ಮಾಡಿದ್ದ ದಾಳಿ ಶನಿವಾರ ಮುಕ್ತಾಯವಾಗಿದೆ.
ಕೇವಲ 4 ಲಕ್ಷಕ್ಕೆ ಖರೀದಿ: ಮತ್ತೂಂದು ಬೆಳವಣಿಗೆಯಲ್ಲಿ, ಬಿಹಾರ ಡಿಸಿಎಂ ತೇಜಸ್ವಿ ಯಾದವ್ ಒಡೆತನದ ಎಬಿ ಎಕ್ಸ್‌ಪೋರ್ಟ್ಸ್ ಪ್ರೈ.ಲಿ. ಹೆಸರಿನಲ್ಲಿ ದಿಲ್ಲಿಯ ನ್ಯೂ ಫ್ರೆಂಡ್ಸ್ ಕಾಲನಿಯಲ್ಲಿ ಕೇವಲ 4 ಲಕ್ಷ ರೂ.ಗಳಿಗೆ ನಾಲ್ಕು ಹಂತಸ್ತಿನ ಬಂಗಲೆ ಖರೀದಿಸಲಾಗಿದೆ. ಆದರೆ ಇದರ ಮಾರುಕಟ್ಟೆ ಮೌಲ್ಯ 150 ಕೋಟಿ ರೂ. ಇದೆ ಎಂದು ಇ.ಡಿ. ತಿಳಿಸಿದೆ.
ಲಾಲು ಪ್ರಸಾದ್ ಯಾದವ್ ಅವರು ರೈಲ್ವೇ ಸಚಿವರಾಗಿದ್ದ ಸಂದರ್ಭದಲ್ಲಿ ಇಲಾಖೆ ಯಲ್ಲಿ ಉದ್ಯೋಗ ನೇಮಕಾತಿ ಲಂಚದ ರೂಪದಲ್ಲಿ ಭೂಮಿ ಪಡೆದ ಆರೋಪ ಇದೆ. ಅದನ್ನು ಗಿಫ್ಟ್ ಡೀಡ್ ಅಥವಾ ಖರೀದಿ ನೆಪದಲ್ಲಿ ಲಾಲು ಕುಟುಂಬಕ್ಕೆ ಆಸ್ತಿ ವರ್ಗಾವಣೆ ಮಾಡಲಾಗಿದೆ.
ಸಬೂಬು ಹೇಳಿದ ತೇಜಸ್ವಿ: ಹಗರಣಕ್ಕೆ ಸಂಬಂಧಿಸಿದಂತೆ ತೇಜಸ್ವಿ ಯಾದವ್ ವಿಚಾರಣೆಗಾಗಿ ಈ ಹಿಂದೆ ಮಾ.4ರಂದು ಸಿಬಿಐ ಸಮನ್ಸ್ ನೀಡಿತ್ತು. ಆದರೆ ಅವರು ಹಾಜ ರಾಗಿ ರಲಿಲ್ಲ. ಪುನಃ ಶನಿವಾರ ಹಾಜ ರಾಗು ವಂತೆ ಅವರಿಗೆ ಸಮನ್ಸ್ ನೀಡ ಲಾಗಿತ್ತು. ಆದರೆ ಪತ್ನಿ ಗರ್ಭಿಣಿಯಾಗಿದ್ದು, ಆಸ್ಪತ್ರೆಯಲ್ಲಿ ಇರುವುದರಿಂದ ಶನಿವಾರ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ತೇಜಸ್ವಿ ಸಬೂಬು ಹೇಳಿದ್ದಾರೆ.