ಪಟ್ನಾ : ಹಿರಿಯ ರಾಜಕಾರಣಿ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಸಮಾರಂಭವೊಂದರ ವೇದಿಕೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಮೀಸಲಿದ್ದ ಕುರ್ಚಿಯಲ್ಲಿ ಆಸೀನರಾಗಿ ಬಳಿಕ ತಮ್ಮ ತಪ್ಪಿನ ಅರಿವಾಗಿ ಆ ಕುರ್ಚಿಯಿಂದೆದ್ದು ಪಕ್ಕದ ಆಸೀನದಲ್ಲಿ ಕುಳಿತ ಘಟನೆ ರೋಚಕ ಘಟನೆಯೊಂದು ನಡೆದಿದ್ದು ಅದು ವ್ಯಾಪಕ ಚರ್ಚೆಗೆ ಗುರಿಯಾಗಿದೆ.
ಲಾಲು ಹಾಗೂ ಅವರ ಅಭಿಮಾನಿಗೆ ತೀವ್ರ ಇರಿಸು ಮುರಿಸು ಉಂಟು ಮಾಡಿರುವ ಈ ಘಟನೆಯಿಂದ, “ಲಾಲು ಎಂದಿಗೂ ಮುಖ್ಯಮಂತ್ರಿ ಸ್ಥಾನದಿಂದ ದೂರ ಉಳಿಯಲಾರರು’ ಎಂಬ ಅಂಶ ಖಾತರಿಯಾಯಿತೆಂದು ತಿಳಿಯಲಾಗಿದೆ.
ಪಟ್ನಾದಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಕ ಸಮಾರಂಭದಲ್ಲಿ ಈಚೆಗೆ ಸಂಘಟಕರು ಲಾಲು ಪ್ರಸಾದ್ ಯಾದವ್ ಅವರನ್ನು ಆಹ್ವಾನಿಸಿದ್ದರು. ಅಂತೆಯೇ ಸಮಾರಂಭಕ್ಕೆ ಬಂದ ಯಾದವ್ ವೇದಿಕೆಯನ್ನು ಏರಿ ನಿತೀಶ್ ಕುಮಾರ್ ಅವರ ಆಸನದಲ್ಲಿ ಕುಳಿತರು.
ಒಡನೆಯೇ ಸಂಘಟಕರು ಅತ್ಯಂತ ವಿನಯದಿಂದ ನಿತೀಶ್ ಕುಮಾರ್ ಅವರಿಗಾಗಿರುವ ಆಸನವನ್ನು ತೆರವು ಗೊಳಿಸ ಪಕ್ಕದ ಆಸನದಲ್ಲಿ ಕೂರುವಂತೆ ಲಾಲು ಅವರನ್ನು ಕೇಳಿಕೊಂಡರು. ಆದರೆ ಏನೊಂದೂ ಮುನಿಸು ತೋರದ ಲಾಲು, ಕೂಡಲೇ ಪಕ್ಕದ ಆಸನದಲ್ಲಿ ಕುಳಿತರು.
ಕೆಲ ದಿನಗಳ ಹಿಂದಷ್ಟೇ ನಡೆದ ಸಿಕ್ಖ ಗುರು ಗೋವಿಂದ ಸಿಂಗರ 350ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಕದಲ್ಲೇ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಆಸನ ಕಲ್ಪಿಸಲಾಗಿದ್ದು ತನಗೆ ಆ ಸಾಲಿನಲ್ಲಿ ಆಸನ ಕಲ್ಪಿಸಲಾಗಿರಲಿಲ್ಲ ಎಂಬ ಕಾರಣಕ್ಕೆ ಲಾಲು ಪ್ರಸಾದ್ ಯಾದವ್ ಭಾರೀ ಗುಲ್ಲು ನಡೆಸಿದ್ದರು.
ಆದರೆ ಅನಂತರದಲ್ಲಿ ಸ್ಪಷ್ಟೀಕರಣ ನೀಡಲಾಗಿ ಲಾಲುಗೆ ಯಾವುದೇ ರೀತಿಯಲ್ಲಿ ನೋವುಂಟುಮಾಡುವ ಉದ್ದೇಶವಿರಲಿಲ್ಲ ಎಂದು ಹೇಳಲಾಗಿತ್ತು. ಅಲ್ಲಿಗೆ ಲಾಲು ಮುನಿಸು ಶಾಂತವಾಗಿತ್ತು.