Advertisement
ಬೆಂಗಳೂರಿನಲ್ಲಿದೆ ಕ್ರಿಸ್ಟಲ್ ಪ್ಯಾಲೇಸ್ ಮತ್ತು ಎಂ.ಸಿ ರಸ್ತೆ.ಈ ಮೇಲಿನ, ಸಾಲು ನೋಡಿದ ಕೂಡಲೇ, ಬೆಂಗಳೂರಿನಲ್ಲಿ ಕ್ರಿಸ್ಟಲ್ ಪ್ಯಾಲೆಸ್ಸೇ? ಸಾಧ್ಯವೇ ಇಲ್ಲ. ಬೆಂಗಳೂರಿನಲ್ಲಿರುವ ಇರುವ ಪ್ಯಾಲೇಸ್‌ಗಳೆಂದರೆ ಎರಡೇ. ಅದು ಮೈಸೂರು ರಾಜ ವಂಶಸ್ಥರಿಗೆ ಸೇರಿದ ಬಳ್ಳಾರಿ ರಸ್ತೆಯಲ್ಲಿರುವ ಅರಮನೆ ಮತ್ತು ಕೋಟೆ ವೆಂಕಟರಮಣಸ್ವಾಮಿ ದೇವಸ್ಥಾನದ ಹಿಂಬದಿ ಇರುವ ಟಿಪ್ಪು ಪ್ಯಾಲೇಸ್ ಅಂದಿರಾ? ಒಂದ್ನಿಮಿಷ ಕೇಳಿ. ಬೆಂಗಳೂರಿನಲ್ಲಿರುವ ಕ್ರಿಸ್ಟಲ್ ಪ್ಯಾಲೇಸ್ ಎಂದರೆ ಇಂಗ್ಲೆಂಡಿನ ಕ್ರಿಸ್ಟಲ್ ಪ್ಯಾಲೇಸ್ ಮಾದರಿಯದ್ದು ಎಂದರ್ಥ.
ಇಂಗ್ಲೆಂಡ್ ಮೂಲದ ಜಾನ್ ಕೆಮರಾನ್ 1874ರಲ್ಲಿ ಬೆಂಗಳೂರಿನ ಲಾಲ್‌ಬಾಗ್‌ಗೆ ಕ್ಯೂರೇಟರ್ ಆಗಿ ಬಂದು ನೂರಾರು ಸಸ್ಯ ಪ್ರಭೇದಗಳನ್ನು ಲಾಲ್‌ಭಾಗ್ ಸಸ್ಯಕಾಶಿಗೆ ಪರಿಚಯಿಸಿದರು. ಸಸ್ಯ ಶಾಸ್ತ್ರಜ್ಞರಾದ ಕೆಮರಾನ್ ಹೊಸ ಪ್ರಭೇದಗಳನ್ನು ಇಲ್ಲಿನ ಹವಾಮಾನಕ್ಕೆ ಅಳವಡಿಸಲು ಅಗತ್ಯವಾಗಿ ಬೇಕಾದ ಶಾಶ್ವತ ಗಾಜಿನ ಮನೆಯನ್ನು ನಿರ್ಮಿಸಲು ಕಾರ್ಯೋನ್ಮುಖರಾದರು. ವೇಲ್ಸ್‌ನ ರಾಜಕುಮಾರ ಆಲ್ಬರ್ಟ್ ವಿಕ್ಟರ್ ಮೈಸೂರು ಪ್ರಾಂತ್ಯಕ್ಕೆ ಬಂದಾಗ ಅಂದಿನ ಮಹಾರಾಜರಾದ ಶ್ರೀ ಚಾಮರಾಜ ಒಡೆಯರ್ ಒಂದು ಗೌರವಾರ್ಥ ಔತಣಕೂಟವನ್ನು ಲಾಲ್‌ಭಾಗಿನಲ್ಲಿ ಏರ್ಪಡಿಸಿದ್ದರು. ಆ ನೆನಪಿಗಾಗಿ ಜಾನ್ ಕೆಮರಾನ್ ಪರಿಕಲ್ಪನೆಯ ಗಾಜಿನ ಮನೆಗೆ 30-11-1889ರಂದು ಅಡಿಗಲ್ಲು ಹಾಕಲಾಯಿತು. ಈ ಅಡಿಗಲ್ಲನ್ನು ಈಗಲೂ ಗಾಜಿನ ಮನೆಯ ಪ್ರವೇಶದ್ವಾರದಲ್ಲಿ ನೋಡಬಹುದು. ಈ ಗಾಜಿನ ಮನೆಯ ನಿರ್ಮಾಣಕ್ಕೆ ಇಂಗ್ಲೆಂಡ್‌ನ ಪ್ರಮುಖ ಸಂಸ್ಥೆ “”ಮ್ಯಾಕ್ ಫ್ಲೋರೆನ್ಸ್’ ಕಂಪನಿಯಿಂದ ಸಲಕರಣೆಗಳು ಅಂದರೆ ಕಬ್ಬಿಣ, ಗಾಜಿನ ಬಿಡಿ ಭಾಗಗಳನ್ನು ಪಡೆಯಲಾಗಿದೆ. ಈ ಗಾಜಿನ ಮನೆಯ ವಿನ್ಯಾಸ ಇಂಗ್ಲೆಂಡ್‌ನ ಕ್ರಿಸ್ಟಲ್ ಪ್ಯಾಲೇಸ್ ಮಾದರಿಯದು. ಈ ಗಾಜಿನ ಅರಮನೆಗೆ ಈಗ 128 ವರ್ಷವಾಗಿದೆ.
Related Articles
ಇಂಗ್ಲೆಂಡ್‌ನ ಕ್ರಿಸ್ಟಲ್ ಪ್ಯಾಲೇಸನ್ನು ವಿಶ್ವದ ಪ್ರಪ್ರಥಮ ಅತಿದೊಡ್ಡ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲು 6144 ಚದುರ ಅಡಿ ವಿಸ್ತೀರ್ಣದಲ್ಲಿ 1851ರಲ್ಲಿ ಲಂಡನ್‌ನಲ್ಲಿ ನಿರ್ಮಿಸಲಾಯಿತು. ವಿಶೇಷವೆಂದರೆ ಈ ಪ್ಯಾಲೇಸಿನ ಜೋಡಣೆ ಭಾಗಗಳನ್ನು ಕಳಚಿ ಬೇರ್ಪಡಿಸಬಹುದು. ಈ ಪ್ರಕಾರವಾಗಿ ಕ್ರಿಸ್ಟಲ್ ಪ್ಯಾಲೇಸನ್ನು ಆಗಿನ ಫಲಪುಷ್ಪ ಪ್ರದರ್ಶನ ಮುಗಿದ ನಂತರ ಜೋಡಣೆಗಳನ್ನು ಬೇರ್ಪಡಿಸಿ ಲಂಡನ್‌ನ ಅತಿ ಎತ್ತರದ ಪ್ರದೇಶದಲ್ಲಿ ಮರು ಜೋಡಣೆ ಮಾಡಿ ಸ್ಥಾಪಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕ್ರೀಡಾಕೂಟಗಳೂ ನಡೆಯುತ್ತಿದ್ದವು. 1936ರಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಆಕರ್ಷಕ ವಿನ್ಯಾಸದ ಕ್ರಿಸ್ಟಲ್ ಪ್ಯಾಲೇಸ್ ಸಂಪೂರ್ಣವಾಗಿ ಭಸ್ಮವಾಯಿತು.
Advertisement
ಈಗ ಇಡೀ ವಿಶ್ವದಲ್ಲೇ ಕ್ರಿಸ್ಟಲ್ ಪ್ಯಾಲೇಸ್ ಮಾದರಿಯೆಂದರೆ ಅದು ಲಾಲ್‌ಭಾಗಿನ ಗಾಜಿನ ಮನೆ ಮಾತ್ರ.
ಎ.ವಿ. ರಸ್ತೆ1829ರಲ್ಲಿ ವೇಲ್ಸ್‌ನ ರಾಜಕುಮಾರ ಆಲ್ಬರ್ಟ್ ವಿಕ್ಟರ್ ಬೆಂಗಳೂರಿಗೆ ಆಗಮಿಸಿ ಗಾಜಿನ ಮನೆ ಶಂಕುಸ್ಥಾಪನೆ ಮಾಡಿದುದರ ಸ್ಮರಣಾರ್ಥವಾಗಿ ಬೆಂಗಳೂರಿನ ಕೇಂದ್ರ ಪ್ರದೇಶ ಅಂದರೆ ಚಾಮರಾಜಪೇಟೆಯ ಮೊದಲನೇ ಮುಖ್ಯ ರಸ್ತೆಗೆ “ಆಲ್ಬರ್ಟ್ ವಿಕ್ಟರ್’ ರಸ್ತೆ ಎಂದು ನಾಮಕರಣ ಮಾಡಲಾಗಿತ್ತು. ಪುನರ್ ನಾಮಕರಣಗೊಂಡ ಎ.ವಿ. ರಸ್ತೆ
ಜಾಗತೀಕರಣ, ಉದಾರೀಕರಣ ಮುಂತಾದ ಕಾರಣಗಳಿಂದಾಗಿ ಬೆಂಗಳೂರು ಇಡೀ ವಿಶ್ವದಲ್ಲೇ ವಿಶಿಷ್ಟ ಸ್ಥಾನ ಪಡೆದಿದೆ. ಉದಾರ ನೀತಿ ಮತ್ತು ಅಭಿವೃದ್ಧಿ ಮಂತ್ರದ ನೆಪದಲ್ಲಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೇ ನೆಲ ಭಾಷೆಯನ್ನು ಉಳಿಸಿಕೊಳ್ಳಲಾಗದ ಪರಿಸ್ಥಿತಿ. ದೇಶಕ್ಕಾಗಿ ದುಡಿದ ಕನ್ನಡಿಗರು ಮತ್ತು ಕನ್ನಡಕ್ಕಾಗಿ ಶ್ರಮಿಸಿದ ಧೀಮಂತರ ಹೆಸರುಗಳೂ ಸಹ ಕನ್ನಡ ಮನಸ್ಸುಗಳಿಂದ ಮರೆಯಾಗುತ್ತಿರುವ ಸನ್ನಿವೇಶದಲ್ಲಿ ಬಡಾವಣೆಗಳಿಗೆ, ಪ್ರಮುಖ ರಸ್ತೆಗಳಿಗೆ ಆ ಹಿರಿಯರ ಹೆಸರನ್ನಡುವ ಪ್ರಯತ್ನ ದಶಕಗಳಿಂದಲೂ ನಡೆಯುತ್ತಾ ಬಂದಿದೆ. ಅಂಥದರಲ್ಲಿ ಕೀರ್ತಿಶೇಷ ಕನ್ನಡ ಕುಲ ಪುರೋಹಿತರೆಂದು ಖ್ಯಾತನಾಮರಾದ ಆಲೂರು ವೆಂಕಟರಾಯರೂ ಒಬ್ಬರು. ಪ್ರಖ್ಯಾತ ಸಾಹಿತಿಗಳಾಗಿ, ಪತ್ರಕರ್ತರಾಗಿ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕದ ಇತಿಹಾಸ ಸಂಶೋಧಕ ಮಂಡಳಿಗಳಿಗೆ ಕಾರಣೀಭೂತರಾಗಿ, ಕರ್ನಾಟಕದ ಉತ್ಕರ್ಷಕ್ಕಾಗಿ ದುಡಿದ ಆಲೂರು ವೆಂಕಟರಾಯರ ಹೆಸರನ್ನು ಇದೇ ಆಲ್ಬರ್ಟ್ ವಿಕ್ಟರ್ ರಸ್ತೆಗೆ “ಆಲೂರು ವೆಂಕಟರಾವ್ ರಸ್ತೆ’ ಎಂದು ಪುನರ್ ನಾಮಕರಣ ಮಾಡಲಾಗಿದೆ. ವಿಪರ್ಯಾಸವೆಂದರೆ ಬೆಂಗಳೂರು ಮೆಡಿಕಲ್ ಕಾಲೇಜಿನಿಂದ ಕಲಾಸಿ ಪಾಳ್ಯಂ ರಸ್ತೆಯಲ್ಲಿನ ಆನೇಕ ಟೂರಿಸ್ಟ್ ಸಂಸ್ಥೆಗಳ ಫಲಕಗಳಲ್ಲಿ “ಆಲ್ಬಟ್‌ರ ವಿಕ್ಟರ್ ರಸ್ತೆ’ ಎಂದೇ ದಾಖಲಿಸಿರುವುದನ್ನು ನೋಡಬಹುದು.
– ಅಂಜನಾದ್ರಿ