Advertisement

ಹೋಗುವೆನು ನಾ ಲಾಲ್‌ಬಾಗ್‌ಗೆ!

04:53 PM Aug 12, 2017 | |

ಅಲ್ಲಿ ಇವೆ ಕಾಜಾಣ, ಕೋಗಿಲೆ, ತೇನೆ, ಗಿಳಿ, ಕಾಮಳ್ಳಿಯುಕಂಪೆಸೆವ ಸೀತಾಳಿ, ಕೇದಗೆ, 
ಬಕುಳ, ಮಲ್ಲಿಗೆ ಬಳ್ಳಿಯು…ಮೈಸೂರಿನಲ್ಲಿದ್ದಾಗ ಹಠಕ್ಕೆ ಬೀಳುವ ಕುವೆಂಪು ಮನಸ್ಸು “ಹೋಗುವೆನು ನಾ ಮಲೆನಾಡಿಗೆ…’ ಎಂದು ಹಾಡುತ್ತದೆ. ಮಲೆನಾಡನ್ನು ಹಾಗೆಲ್ಲ ಕಣ್ಮುಂದೆ ತಂದುಕೊಳ್ಳುವಾಗ ಇದೇ ಕುಸುಮಗಳೇ ಅವರ ಕಣ್ಮುಂದೆ ಅರಳಿ ಸ್ವಾಗತಿಸುತ್ತವೆ. ಕುವೆಂಪು ಹಾಡಿದ ಅಂಥದ್ದೇ ಮಲೆನಾಡಿನ ಸೃಷ್ಟಿ ಲಾಲ್‌ಬಾಗ್‌ನಲ್ಲಿ ಆಗಿದೆ. ಕೆಂಪೆಸೆವ ಸೀತಾಳಿ, ಕೇದಗೆ, ಬಕುಳ, ಮಲ್ಲಿಗೆ ಬಳ್ಳಿಗಳೆಲ್ಲ ಇಲ್ಲೂ ಸ್ವಾಗತಕ್ಕೆ ನಿಂತಿವೆ. ಕುವೆಂಪುವೇ ಪುಷ್ಪದಲ್ಲಿ ಅರಳಿ, “ಬನ್ನಿ ಲಾಲ್‌ಬಾಗ್‌ಗೆ…’ ಎಂದು ಬೆಂಗ್ಳೂರಿಗರನ್ನು ಸ್ವಾಗತಿಸುತ್ತಿದ್ದಾರೆ!

Advertisement

ಈ ಹಿರಿಯ ಕವಿಗೆ ಕೇವಲ ದೇಸೀ ಹೂವುಗಳ ಮೇಲಷ್ಟೇ ಒಲವಲ್ಲ. ಡಾಲಿಯಾ, ಜರ್ಬರಾದಂಥ ವಿದೇಶಿ ಹೂವುಗಳ ಮೇಲೂ ಅನುರಾಗ ಮೂಡಿತ್ತು. “ಜರ್ಬರಾ’ ಬಗ್ಗೆಯೇ ಒಂದು ಕವಿತೆ ಬರೆಯುವ ಕುವೆಂಪು, “ಜಗದ ಒಲವನ್ನೆಲ್ಲ ಬಾಚಿ, ಜ್ವಲಿಸುವಳೀ ಜರ್ಬರಾ…’ ಎಂದು ವರ್ಣಿಸಿದ್ದು, ಕಾವ್ಯಪ್ರಿಯರ ಕರಣಗಳಿಗೆ ಇನ್ನೂ ಅದು ದುಂಬಿಯ ಗಾನ. ಉದಯರವಿಯ ಮನೆ ನಿರ್ಮಾಣ ಆಗುವ ವೇಳೆ, ಆವರಣದಲ್ಲಿ ಅರಳಿದ್ದ ಸುರಹೊನ್ನೆಯ ಹೂವಿಗೆ ಕುವೆಂಪು ಮನಸೋತಿದ್ದರು. ಕುವೆಂಪು ಬಿಡುವಿನ ವೇಳೆಯಲ್ಲಿ ಹೂವಿನ ತೋಟದಲ್ಲಿ ಕುಳಿತು, ರಸಸಮಾಧಿಯನ್ನೇರುತ್ತಿದ್ದರಂತೆ.
ಅಂದಹಾಗೆ, ಬೆಂಗಳೂರಿನ ಲಾಲ್‌ಬಾಗ್‌ಗೂ, ಕುವೆಂಪು ಅನೇಕ ಸಲ ಬಂದು, ಇಲ್ಲಿನ ಹೂವುಗಳನ್ನು ಸಂವಾದಿಸಿ ಹೋಗಿದ್ದರು ಎನ್ನುತ್ತಾರೆ ಸಸ್ಯಕಾಶಿಯ ತೋಟಗಾರಿಕಾ ಇಲಾಖೆಯ ಮಾಜಿ ಅಧಿಕಾರಿಗಳು. ಮೈಸೂರಿನ ಸಿಎಫ್ಟಿಆರ್‌ಐ ಆವರಣದಲ್ಲಿ ಮ್ಯಾಗ್ನೊàಲಿಯಾ ಗ್ರಾಂಡಿಫ್ಲೋರಾ ಮರದ ಹೂಗಳನ್ನು ನೋಡಿ, ತಮ್ಮ ಮನೆಯ ಆವರಣದಲ್ಲೂ ಅಂಥದ್ದೇ ಹೂ ಇರಬೇಕೆಂದು ಬಯಸಿದ ಕುವೆಂಪು ಆಗ ಸಂಪರ್ಕಿಸಿದ್ದು ಕೂಡ ಲಾಲ್‌ಬಾಗ್‌ನ ತೋಟಗಾರಿಕಾ ಇಲಾಖೆಯ ನಿರ್ದೇಶಕರನ್ನೇ. ಅಂದು ಇಲ್ಲಿ ನಿರ್ದೇಶಕರಾಗಿದ್ದ ಮರಿಗೌಡ ಎಂಬುವರಿಗೆ ಹೇಳಿ, ತಮ್ಮ ತೋಟದಲ್ಲೂ ಮ್ಯಾಗ್ನೊàಲಿಯಾ ಗ್ರಾಂಡಿಫ್ಲೋರಾವನ್ನು ಬೆಳೆಸಿದ್ದರು. ಅದರಲ್ಲಿ ಹೂವು ಅರಳಿದ ಕೂಡಲೇ, “ಓ ನೋಡು ಬಾರಾ… ಗಿಡದ ಕೈ ಮುಗಿಹ ಮೊಗ್ಗಾಗಿ ಮೈದೋರುತ್ತಿದೆ, ಮ್ಯಾಗ್ನೊàಲಿಯಾ ಗ್ರಾಂಡಿಫ್ಲೋರಾ…’ ಎಂಬ ಕವನ ಬರೆದಿದ್ದರು. ಲಾಲ್‌ಬಾಗ್‌ನಲ್ಲಿ ಹೂವಿನಿಂದ ಸೃಷ್ಟಿಯಾದ ಕುವೆಂಪು ಅವರನ್ನು ಕಂಡು ಇವೆಲ್ಲ ಈಗ ನೆನಪಾಯಿತು. ರಾಷ್ಟ್ರಕವಿ ಕುವೆಂಪು ಅವರಿಗೆ ಜ್ಞಾನಪೀಠ ಲಭಿಸಿ 50 ವಸಂತ ತುಂಬಿದ ಹಿನ್ನೆಲೆಯಲ್ಲಿ, ರಸಋಷಿ ಮತ್ತೆ ನಮ್ಮನ್ನು ಕಾಡುತ್ತಿದ್ದಾರೆ. ಕುವೆಂಪು ಕಂಪು ಹೂವಿನಲ್ಲೂ ಕುಳಿತು ಘಮ್ಮೆನ್ನುತ್ತಿದೆಯೆಂದರೆ, ಅದು ಕನ್ನಡದ
ಕಂಪೇ ಇದ್ದೀತು. ಜಗದಗಲ ಪರಿಮಳವಾಗಿ ಎಲ್ಲರನ್ನೂ ಸೆಳೆದೀತು.

25 ದಿನಗಳಲ್ಲಿ ಕವಿಶೈಲ!

ರಾಷ್ಟ್ರಕವಿ ಕುವೆಂಪು ಅವರ ಸಮಾಧಿ ಸ್ಮಾರಕ ಬೆಂಗಳೂರಿನಲ್ಲಿದೆ ಎಂಬಂತೆ ಲಾಲ್‌ಬಾಗ್‌ನ ಕಲಾಸೃಷ್ಟಿ ಬೆರಗುಗೊಳಿಸುತ್ತಿದೆ. ಕವಿಶೈಲದಲ್ಲಿರುವಂತೆ 2×2 ಅಡಿ ಗಾತ್ರ ಹಾಗೂ 10 ಅಡಿ ಎತ್ತರದ 18 ಬೃಹತ್‌ ಶಿಲಾ ಮಾದರಿ ಸ್ತಂಭಗಳು, 10 ಶಿಲಾ ಮಾದರಿಯ ಬೀಮ್‌ಗಳ ಜೋಡಣೆ ಅಲ್ಲದೆ, ಕುವೆಂಪುರವರ ಸಮಾಧಿಯನ್ನು ಫೈಬರ್‌ಗಳಿಂದ ನಿರ್ಮಾಣ ಮಾಡಲಾಗಿದೆ. 30 ಜನ ಕಲಾವಿದರ ತಂಡ 25 ದಿನಗಳಲ್ಲಿ ಕವಿಶೈಲವನ್ನು ಬೆಂಗಳೂರಿಗೆ ತಂದಿದ್ದಾರೆ. ಜತೆಗೆ ಕವಿಶೈಲದ ಬಂಡೆಯ ಮೇಲಿನ ಕಾವ್ಯನಾಮದ ಪ್ರತಿರೂಪಗಳನ್ನು ಇಲ್ಲಿಯೂ ಕಾಣಬಹುದು.

Advertisement

Udayavani is now on Telegram. Click here to join our channel and stay updated with the latest news.

Next