Advertisement

Desi Swara: ಐರಿಶ್‌ ಕನ್ನಡ ಸಂಘ: ಕನ್ನಡ ನಾಡು-ನುಡಿ, ಸಂಸ್ಕೃತಿಯ ಅನಾವರಣ

11:54 AM Mar 30, 2024 | Team Udayavani |

ಐರ್ಲೆಂಡ್‌:ಇಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿ ಐರಿಶ್‌ ಕನ್ನಡ ಸಂಘದ ನೇತೃತ್ವದಲ್ಲಿ ಮಾ. 15ರಂದು ಮೊಟ್ಟ ಮೊದಲ ಬಾರಿಗೆ ಐರಿಶ್‌ ಕನ್ನಡಿಗರು ಎಲ್ಲ ಒಟ್ಟು ಸೇರಿ ಕರ್ನಾಟಕದ ವೈವಿಧ್ಯತೆಯನ್ನು ತಿಳಿಸುವ ನಮ್ಮ ಕರ್ನಾಟಕ ಕಾರ್ಯಕ್ರಮವನ್ನು ನಡೆಸಿದರು. ಕನ್ನಡ ದೀಪವನ್ನು ಬೆಳುಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

Advertisement

ಹಚ್ಚೇವು ಕನ್ನಡದ ದೀಪ ಹಾಡಿನ ಮೂಲಕ 75ಕ್ಕೂ ಹೆಚ್ಚು ಮಂದಿ ಕನ್ನಡ ನಾಡು, ನುಡಿ, ಸಂಸ್ಕೃತಿ, ಸಂಗೀತ, ಆಹಾರ, ಕವಿ, ಕನ್ನಡ ಭಾಷೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕನ್ನಡವನ್ನು ಮೆರೆಸಿದ್ದಕ್ಕೆ ಸಾಕ್ಷಿಯಾದರು ಮತ್ತು ಇತಿಹಾಸ ಸೃಷ್ಟಿಸಿದರು. ಭಾರತದ ರಾಯಭಾರಿಗಳಾದ ಅಖಿಲೇಶ್‌ ಮಿಶ್ರ ಕಾರ್ಯಕ್ರವನ್ನು ಉದ್ಘಾಟನೆ ಮಾಡಿ, ಕರ್ನಾಟಕದ ಶ್ರೀಮಂತತೆ, ಕನ್ನಡ ಭಾಷೆ, ರಾಷ್ಟ್ರ ಕವಿ ಹಾಗೂ ಜ್ಞಾನಪೀಠ ಪ್ರಶಸ್ತಿ ವಿಜೇತರು ಹಾಗೂ ಐರ್ಲೆಂಡಿನಲ್ಲಿ ಐರಿಶ್‌ ಕನ್ನಡಿಗರ ಕೊಡುಗೆ ಬಗ್ಗೆ ಮಾತನಾಡಿದರು.

ಐರಿಶ್‌ ಕನ್ನಡಿಗರು ತಾವು ತಯಾರಿಸಿದ ಕರಾವಳಿ ಅಡುಗೆ, ಹಳೆ ಮೈಸೂರಿನ ಗೌಡರ ರಾಗಿ ಮುದ್ದೆ ಊಟ, ಅಯ್ಯಂಗಾರ್‌ ಪುಳಿಯೋಗರೆ, ಬೆಂಗಳೂರು ಬಿಸಿಬೆಳೆ ಬಾತ್‌, ಕೋಡ್ಬಳೆ, ಅವಲಕ್ಕಿ, ಮದ್ದೂರ್‌ ವಡೆ ಹಾಗೂ ಮತ್ತಿತರ ಆಹಾರಗಳನ್ನು ಪ್ರದರ್ಶಿಸಿ ಅದರ ಬಗ್ಗೆ ರಾಯಭಾರಿಗಳಿಗೆ ವಿವರಿಸಿದರು.

ಐರಿಶ್‌ ಕನ್ನಡಿಗರ ಸಂಘದ ರೂವಾರಿಗಳಲ್ಲಿ ಒಬ್ಬರಾದ ಸುರೇಶ ಮರಿಯಪ್ಪ ಮಾತನಾಡಿ, ಸಂಘದ ಇತಿಹಾಸ ಹಾಗೂ ಸಂಘ ಆರಂಭವಾದ ರೀತಿ, ಪ್ರಮುಖ ಸದಸ್ಯರ ಬಗ್ಗೆ ತಿಳಿಸಿದರು. ಜತೆಗೆ ಸಂಘ ಆಯೋಜಿಸುವಂತ ಕಾರ್ಯಕ್ರಮಗಳ ಬಗ್ಗೆ ವಿವರಿಸಿ ಕರ್ನಾಟಕ ರಾಜ್ಯೋತ್ಸವ, ಗಣೇಶ ಹಬ್ಬಗಳ ಬಗ್ಗೆ ವಿವರಿಸಿದರು. ಭಾರತದಿಂದ ಐರ್ಲೆಂಡಿಗೆ ಸ್ನಾತಕೋತ್ತರ ಪದವಿಗಾಗಿ ಬರುವಂತ ವಿದ್ಯಾರ್ಥಿಗಳಿಗೆ ಆಯೋಜಿಸುವ ಕಾರ್ಯಕ್ರಮಗಳ ಬಗ್ಗೆ ಎಳೆ ಎಳೆಯಾಗಿ ಬಿಡಿಸಿ ತಿಳಿಸಿದರು.

Advertisement

ಕಾಂತೇಶ್‌ ಮತ್ತು ತಂಡದವರಿಂದ ಆಯೋಜಿಸುವ ಕನ್ನಡ ಕಲಿ ತರಗತಿಗಳ ಬಗ್ಗೆ ತಿಳಿಸುತ್ತ, ಗಂಗಾಧರ ಹಾಗೂ ತಂಡದವರು ಕಾಕರ್‌ನಲ್ಲಿ ನಡೆಸುವ ಕಾರ್ಯಕ್ರಮಗಳ ಬಗ್ಗೆ ಪರಿಚಯಿಸಿದರು.

ಅರ್ಪಿತ ಪ್ರಸನ್ನ ಕರ್ನಾಟಕ ರಾಜ್ಯದ ಬಗ್ಗೆ, ಅದರ ಪ್ರಾಮುಖ್ಯತೆ, ವಿಶೇಷತೆ, ಉದ್ಯಮ, ಪ್ರವಾಸ ಮತ್ತಿತರ ಅಮೂಲ್ಯವಾದ ವಿವರಗಳನ್ನು ತಿಳಿಸಿ ನೆರದಿದ್ದ ಎಲ್ಲರಿಗೂ ಕರ್ನಾಟಕದ ಬಗ್ಗೆ ಒಂದು ಮೆಲುಕು ಹಾಕುವಂತೆ ಮಾಡಿದರು. ಕರ್ನಾಟಕದ ಶ್ರೀಮಂತಿಕೆ, ಸರಳತೆ, ವಾಣಿಜ್ಯ, ಜ್ಞಾನ ಕಾಶಿಗಳು ಮತ್ತು ಇತರ ವಿಷಯಗಳನ್ನು ಅರ್ಪಿತ ಹಂಚಿಕೊಂಡರು.

ಕಾರ್ಯಕ್ರಮದ ಅಂಗವಾಗಿ ಹಲವಾರು ನೃತ್ಯ, ಹಾಡುಗಳನ್ನು ಆಯೋಜಿಸಲಾಗಿತ್ತು. ಹಚ್ಚೇವು ಕನ್ನಡದ ದೀಪದಿಂದ ಆರಂಭವಾಗಿ, ಜೇನಿನ ಹೊಳೆಯೋ ಹಾಲಿನ ಮಳೆಯೋ ಹಾಡಿನ ಮುಖಾಂತರ ಕಾರ್ಯಕ್ರಮ ಮುಂದುವರಿಯಿತು. ಆಹತ ಸಂಗೀತ ಶಾಲೆಯ ಮಕ್ಕಳು ಪುರಂದರ ದಾಸರ ವಚನಗಳನ್ನು ಲೀಲಾಜಾಲವಾಗಿ ಹಾಡಿದ್ದನ್ನು ಕೇಳಿ ಜನರಲ್ಲಿ ಭಕ್ತಿ ತುಂಬಿ ಬರುವಂತೆ ಮಾಡಿತು. ಭಾವನ ಅವರ ಭರತನಾಟ್ಯ ಎಲ್ಲರಿಗೂ ಮುದ ನೀಡಿದರೆ ಶ್ರುತಿ ಮತ್ತು ತಂಡದ ವಿವಿಧ ಕನ್ನಡ ಹಾಡುಗಳಿಗೆ ನೃತ್ಯ ಮಾಡಿ ಸೇರಿದ ಎಲ್ಲ ಕನ್ನಡಿಗರಿಗೆ ಖುಷಿ ತಂದರು.

ಐರಿಶ್‌ ಕನ್ನಡದ ತಂಡದಿಂದ ಅಖೀಲೇಶ್‌ ಮಿಶ್ರ ಅವರಿಗೆ ಈ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ತಂಡದ ಪರವಾಗಿ ಧನ್ಯವಾದ ಹೇಳಿ ಸಮ್ಮಾನ ಮಾಡಲಾಯಿತು ಮತ್ತು ಅದೇ ಸಮಯದಲ್ಲಿ ರೀತಿ ಮಿಶ್ರ ಹಾಗೂ ರಾಯಭಾರಿ ಕಾರ್ಯದರ್ಶಿಗಳಾದ ಹೇಮಾ ಅವರಿಗೆ ತಾಂಬೂಲ ನೀಡಲಾಯಿತು. ಕಾರ್ತಿಕ್‌ ಕಾರ್ಯಕ್ರಮವನ್ನು ನಡೆಸಿಕೊಟ್ಟರೆ, ಡಾ| ಅರುಣ್‌ ವಂದನಾರ್ಪಣೆ ಮಾಡಿದರು. ವಿಭಾ ಮಧುಸೂದನ್‌ ಕಾರ್ಯಕ್ರಮ ಆಯೋಜಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next