Advertisement

ಮಾನವ ಚಟುವಟಿಕೆಗಳಿಂದ ಸೊರಗುತ್ತಿದೆ ಸಸ್ಯಕಾಶಿ

09:05 AM Apr 30, 2019 | Lakshmi GovindaRaju |

ಹೈದರ್‌ ಅಲಿ ಕಾಲದಲ್ಲಿ ಒಂದು ಚಿಕ್ಕ ಕೆರೆ ಅಂಗಳದಲ್ಲಿ ಶುರುವಾದ ತೋಟ, ಮುಂದೆ ಸಸ್ಯಕಾಶಿ ಆಯಿತು. 1856ರಲ್ಲಿ ಬೊಟಾನಿಕಲ್‌ ಗಾರ್ಡನ್‌ ಎಂದೂ ಘೋಷಿಸಲಾಯಿತು. ಶತಮಾನದ ಮರಗಳು ಇರುವುದರಿಂದ ಅವುಗಳ ಸಂರಕ್ಷಣೆಗಾಗಿ ಇಲ್ಲಿ ಮಳೆ ನೀರು ಇಂಗುವಂತಹ ಮರಳು ದಾರಿಯೇ ಇರಬೇಕು. ಆಟೋಟಗಳು ನಡೆಯಬಾರದು. ಹುಲ್ಲುಹಾಸಿನ ಮೇಲೆ ನಡೆಯಕೂಡದು ಇತ್ಯಾದಿ ನಿಯಮಗಳನ್ನೂ ಹಾಕಿಕೊಳ್ಳಲಾಯಿತು. ಆದರೆ, ಅಲ್ಲಿ ಈಗ ವಾಹನಗಳ ನಿಲುಗಡೆ ತಾಣ ತಲೆಯೆತ್ತಿದೆ. ನಡಿಗೆದಾರರಿಗಾಗಿ ಡಾಂಬರು ರಸ್ತೆ ಬರುತ್ತಿದೆ.

Advertisement

ವರ್ಷವಿಡೀ ಒಂದಿಲ್ಲೊಂದು ಮೇಳಗಳು ನಡೆಯುತ್ತಿವೆ. ಹೀಗೆ ಮಾನವ ಚಟುವಟಿಕೆಗಳು ಹೆಚ್ಚುತ್ತಿವೆ. ಇದು ಅಲ್ಲಿನ ಸಸ್ಯ ಪ್ರಬೇಧಗಳ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಆದರೆ, ಜನರಿಗೆ ಸೌಲಭ್ಯಗಳನ್ನು ಕಲ್ಪಿಸುವುದು ಅಪರಾಧವಲ್ಲ. ಅಷ್ಟಕ್ಕೂ ಈ ಸೌಲಭ್ಯಗಳು ಏಕಾಏಕಿ ಉದ್ಭವಿಸಿದ್ದಲ್ಲ; ಈ ಹಿಂದೆಯೂ ಇದ್ದವು ಎಂಬ ಮಾತುಗಳೂ ಇವೆ. ಈ ಪರ-ವಿರೋಧದ ಸುತ್ತ ಒಂದು ನೋಟ ಈ ಬಾರಿಯ ಸುದ್ದಿ ಸುತ್ತಾಟ…

ಬೆಂಗಳೂರು: ಹೈದರ್‌ ಅಲಿ ಕಾಲದಲ್ಲಿ ಒಂದು ಚಿಕ್ಕ ಕೆರೆಯ ಅಂಗಳದಲ್ಲಿ ಶುರುವಾದ ತೋಟ, ಮುಂದೆ ಸಸ್ಯಕಾಶಿಯಾಗಿ ಬೆಳೆಯಿತು. ನಂತರ ಬಂದ ಹೈದರ್‌ಅಲಿ ಮಗ ಟಿಪ್ಪು ಸುಲ್ತಾನ್‌ ನೆಟ್ಟ ಮಾವಿನ ಮರಗಳು, ಫ್ರಾನ್ಸ್‌ನಿಂದ ತಂದು ಊರಿದ ಅಪರೂಪದ ಗಿಡಗಳು ಅದಕ್ಕೆ ಕುರುಹುಗಳು. ಅಷ್ಟೇ ಅಲ್ಲ, ತದನಂತರ ಬಂದ ಈಸ್ಟ್‌ ಇಂಡಿಯಾ ಒಂದು ವ್ಯಾಪಾರಿ ಕಂಪನಿ ಆಗಿದ್ದರೂ ಲಾಲ್‌ಬಾಗ್‌ ಸಂರಕ್ಷಣೆಗೆ ಒಬ್ಬ ಅಧಿಕಾರಿಯನ್ನು ನೇಮಿಸಿತ್ತು.

ಈ ಹಿನ್ನೆಲೆಯಲ್ಲಿ ನಗರಕ್ಕೆ ಅದೊಂದು ಗರಿ. ಹಾಗಾಗಿಯೇ ಲಾಲ್‌ಬಾಗ್‌ ಅನ್ನು ಅತ್ಯಂತ ನಾಜೂಕಾಗಿ ಉಳಿಸಿ-ಬೆಳೆಸಲಾಗುತ್ತಿದೆ. ಆದರೆ, ಉದ್ಯಾನದಲ್ಲಿನ ಇತ್ತೀಚಿನ ಬೆಳವಣಿಗೆಗಳು ಪರಿಸರ ಪ್ರೇಮಿಗಳಿಗೆ ತುಸು ಇರುಸು-ಮುರುಸು ಉಂಟುಮಾಡಿವೆ. ಇದಕ್ಕೆ ಕಾರಣವೂ ಇದೆ. ಜಗತ್ತಿನ ಅಪರೂಪದ ಸಸ್ಯ ಪ್ರಬೇಧಗಳನ್ನು ಹೊಂದಿರುವ ಲಾಲ್‌ಬಾಗ್‌ ಒಂದು ಬೊಟಾನಿಕಲ್‌ ಗಾರ್ಡನ್‌ (ಶಾಸ್ತ್ರೀಯ ಸಸ್ಯತೋಟ).

ಶತಮಾನದ ಮರಗಳು ಅಲ್ಲಿ ಇರುವುದರಿಂದ ಹಿಂದೆಂದಿಗಿಂತ ಹೆಚ್ಚು ಸೂಕ್ಷ್ಮವಾಗಿ ನೋಡಿಕೊಳ್ಳಬೇಕಾಗುತ್ತದೆ. ಮಾನವ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಎಚ್ಚರ ವಹಿಸಬೇಕಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಉಲ್ಟಾ ಆಗುತ್ತಿದೆ. ವಾಹನಗಳ ನಿಲುಗಡೆ ತಾಣ, ನಡಿಗೆದಾರರಿಗಾಗಿ ಡಾಂಬರು ರಸ್ತೆ ಬರುತ್ತಿದೆ. ಒಂದಿಲ್ಲೊಂದು ಮೇಳಗಳು ನಡೆಯುತ್ತಿವೆ. ಇದರ ಅವಶ್ಯಕತೆ ಏನಿದೆ ಎಂಬ ಪ್ರಶ್ನೆ ತಜ್ಞರು, ಪರಿಸರ ಪ್ರೇಮಿಗಳಿಂದ ಕೇಳಿಬರುತ್ತಿದೆ.

Advertisement

ಈ ಮಾನವ ಚಟುವಟಿಕೆಗಳು ಹೆಚ್ಚಾಗಿರುವುದರಿಂದಲೇ ಕಳೆದ ಒಂದು ದಶಕದಲ್ಲಿ ಟಿಪ್ಪು ಸುಲ್ತಾನ್‌ ನೆಟ್ಟ ಮೂರು ಮಾವಿನ ಮರಗಳಲ್ಲಿ ಒಂದು ಧರೆಗುರುಳಿತು. ಶತಮಾನದ “cow milk tree’, ಕೆನಡಾದ ರಾಷ್ಟ್ರೀಯ ಮರ “chorisia speciosa’, “acer’, “pink cedar’, “archeria’ ಮತ್ತಿತರ ಅಪರೂಪದ ಪ್ರಬೇಧಗಳು ಕಣ್ಮರೆಯಾಗುತ್ತಿವೆ. ಇವು ಇನ್ನೂ ಒಂದಷ್ಟು ವರ್ಷ ಬಾಳಿ ಬದುಕುತ್ತಿದ್ದವು. ಇದಕ್ಕೆ ಮಾನವ ಸಂಬಂಧಿ ಚಟುವಟಿಕೆಗಳು ಅಲ್ಲಿ ಹೆಚ್ಚಾಗಿರುವುದು ಕಾರಣ ಎಂದು ತಜ್ಞ ಹಾಗೂ ತೋಟಗಾರಿಕೆ ಸಮಾಲೋಚಕ ಸಂತೆ ನಾರಾಯಣಸ್ವಾಮಿ ಆರೋಪಿಸುತ್ತಾರೆ.

ಬೊಟಾನಿಕಲ್‌ ಗಾರ್ಡನ್‌ಗೆ ಕೆಲವು ನಿಯಮಗಳಿವೆ. ಅದರಂತೆ ಸಂರಕ್ಷಣೆಗಾಗಿ ಇಲ್ಲಿ ಮಳೆ ನೀರು ಇಂಗುವಂತಹ ಮರಳು ದಾರಿಯೇ ಇರಬೇಕು. ಆಟೋಟಗಳು ನಡೆಯಬಾರದು. ಹುಲ್ಲುಹಾಸಿನ ಮೇಲೆ ನಡೆಯಕೂಡದು ಇತ್ಯಾದಿ. ಆದರೆ, ಲಾಲ್‌ಬಾಗ್‌ನಲ್ಲಿ ಈ ನಿಯಮ ಪಾಲನೆ ಆಗುತ್ತಿದೆಯೇ ಎಂಬುದರ ಬಗ್ಗೆ ನಾವು ಪ್ರಶ್ನೆ ಹಾಕಿಕೊಳ್ಳಬೇಕಿದೆ. ಲಂಡನ್‌ನ “ಕ್ಯು ಗಾರ್ಡನ್‌’ನಲ್ಲಿ ಈವರೆಗೆ ನಡಿಗೆದಾರರಿಗೆ ಅವಕಾಶ ನೀಡಿಲ್ಲ.

ಆದರೆ, ನಮ್ಮಲ್ಲಿ ನಡಿಗೆದಾರರಿಗಾಗಿಯೇ ಡಾಂಬರು ರಸ್ತೆ ನಿರ್ಮಿಸುತ್ತಿದ್ದೇವೆ! ಮೊದಲು ಒಂದು ಲಕ್ಷ ಜನರಿಗೆ ಒಂದು ಲಾಲ್‌ಬಾಗ್‌ ಇತ್ತು. ಈಗ ಒಂದು ಕೋಟಿ ಜನರಿಗೆ ಒಂದು ಇದೆ. ಭೇಟಿ ನೀಡುವವರ ಸಂಖ್ಯೆ ಹೆಚ್ಚಿದ್ದರಿಂದ ಅಲ್ಲಿನ ಗಿಡ-ಮರಗಳ ಮೇಲೆ ಒತ್ತಡ ಹೆಚ್ಚಿದೆ. ಅಂತಹದ್ದರಲ್ಲಿ ಈ ರೀತಿಯ ಚಟುವಟಿಕೆಗಳು ಎಷ್ಟು ಔಚಿತ್ಯಪೂರ್ಣವಾಗಿವೆ ಎಂದು ಅವರು ಕೇಳುತ್ತಾರೆ.

ಪರಿಣಾಮ ಏನು?: ಹೆಚ್ಚು ಸೌಲಭ್ಯಗಳನ್ನು ಕಲ್ಪಿಸುವುದು ಜನದಟ್ಟಣೆಗೆ ಅನುವು ಮಾಡಿಕೊಟ್ಟಂತಾಗುತ್ತದೆ. ಇದರಿಂದ ಅಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಅಧಿಕವಾಗುತ್ತದೆ. ಬೆನ್ನಲ್ಲೇ ಬೇಡಿಕೆಗಳು ಕೂಡ ಹೆಚ್ಚುತ್ತಲೇ ಹೋಗುತ್ತವೆ. ಇದೆಲ್ಲದರಿಂದ ಉದ್ಯಾನದ ಗಿಡ-ಮರಗಳ ಬೇರುಗಳ ಮೇಲೆ ಒತ್ತಡ ಬೀಳುತ್ತದೆ. ನಿಧಾನವಾಗಿ ಎಲೆಗಳು ತುದಿಯಿಂದ ಒಣಗಲು ಶುರುವಾಗುತ್ತದೆ. ಮರಗಳ ಆಯಸ್ಸು ಕಡಿಮೆ ಆಗುತ್ತದೆ. ಈಗಾಗಲೇ ಇದು ಪರಿಣಾಮ ಬೀರಲು ಶುರುವಾಗಿದೆ. ಉದಾಹರಣೆಗೆ ಲಾಲ್‌ಬಾಗ್‌ ಮತ್ತು ಹಲಸೂರಿನ ಎಂಇಜಿ ಮೈದಾನದಲ್ಲಿ ಒಟ್ಟಿಗೇ ನೆಟ್ಟಿದ್ದ ಅರ್ಕೇರಿಯಾ ಗಿಡವನ್ನು ಈಗಲೂ ಹಲಸೂರಿನಲ್ಲಿ ಕಾಣಬಹುದು. ಲಾಲ್‌ಬಾಗ್‌ನಲ್ಲಿ ಅದು ಸಿಗುವುದಿಲ್ಲ ಎಂದು ತಜ್ಞರೊಬ್ಬರು ತಿಳಿಸಿದರು.

ಗಾಲ್ಫ್ ಮೈದಾನ ಇತ್ತು!: ಈ ಹಿಂದೆ ಲಾಲ್‌ಬಾಗ್‌ನಲ್ಲೊಂದು ಗಾಲ್ಫ್ ಮೈದಾನ ಇತ್ತು. ತದನಂತರದಲ್ಲಿ ಪರಿಸರ ಪ್ರೇಮಿಗಳ ಒತ್ತಡದಿಂದ ಅದನ್ನು ಎತ್ತಂಗಡಿ ಮಾಡಲಾಯಿತು! ಹೌದು, 1890ರ ಆಸುಪಾಸಿನಲ್ಲಿ ಲಾಲ್‌ಬಾಗ್‌ ವಿಸ್ತೀರ್ಣ ಅಂದಾಜು 40 ಎಕರೆ. ಆ ಪೈಕಿ 15-20 ಎಕರೆ ಗಾಲ್ಫ್ ಮೈದಾನ ನಿರ್ಮಿಸಲಾಗಿತ್ತು. ಆದರೆ, ಜನರ ಒತ್ತಡದಿಂದ ಅದನ್ನು ತೆರವುಗೊಳಿಸಲಾಯಿತು. ಈಗಲೂ ಅಂತಹ ಒತ್ತಡಗಳು ಬರಬೇಕಿದೆ ಎಂದು ನಾರಾಯಣಸ್ವಾಮಿ ಹೇಳುತ್ತಾರೆ.

ಮಿನಿ ಲಾಲ್‌ಬಾಗ್‌ ಪ್ರಸ್ತಾವನೆ: ಲಾಲ್‌ಬಾಗ್‌ ಮಾದರಿಯಲ್ಲಿ ನಗರದ ನಾಲ್ಕು ದಿಕ್ಕುಗಳಲ್ಲಿ ತಲಾ ಒಂದು ಮಿನಿ ಲಾಲ್‌ಬಾಗ್‌ ನಿರ್ಮಿಸಲು ಈ ಹಿಂದೆ ಪ್ರಸ್ತಾವನೆ ಸಲ್ಲಿಸಿ, ಜಾಗಗಳನ್ನೂ ಗುರುತಿಸಲಾಗಿತ್ತು. ಆದರೆ, ತದನಂತರದಲ್ಲಿ ಅದು ನೆನೆಗುದಿಗೆ ಬಿದ್ದಿದೆ. ಹೆಸರಘಟ್ಟ ಹೋಬಳಿಯ ಸೊಣ್ಣೇನಹಳ್ಳಿ, ಚಲ್ಲಘಟ್ಟ, ದೊಡ್ಡಜಾಲಾ, ಮಾದಪಟ್ಟಣ, ಚೋಳನಾಯಕನಹಳ್ಳಿ, ಹುಲುವೇನಹಳ್ಳಿಯಲ್ಲಿ ಜಾಗ ಗುರುತಿಸಲಾಗಿತ್ತು. ಇದೆಲ್ಲವೂ ಗೋಮಾಳ ಜಮೀನಾಗಿದ್ದು, ಕಾರಣಾಂತರಗಳಿಂದ ಯೋಜನೆ ನೆನೆಗುದಿಗೆ ಬಿದ್ದಿದೆ ಎನ್ನಲಾಗಿದೆ.

ಏನಿದು ಬೊಟಾನಿಕಲ್‌ ಗಾರ್ಡನ್‌?: ಲಾಲ್‌ಬಾಗ್‌ 1856ರಲ್ಲಿ ಬೊಟಾನಿಕಲ್‌ ಗಾರ್ಡನ್‌ ಅಂದರೆ “ಶಾಸ್ತ್ರೀಯ ಸಸ್ಯತೋಟ’ ಎಂದು ಘೋಷಿಸಲ್ಪಟ್ಟಿತ್ತು. ಜಗತ್ತಿನ ಅಪರೂಪದ ಸಸ್ಯಪ್ರಬೇಧಗಳು ಇರುವ ಉದ್ಯಾನಕ್ಕೆ ಈ ಹೆಸರು. ವೃಕ್ಷಗಳ ಕಾಡು, ಆರ್ಕಿಡ್‌ಗಳ ಉದ್ಯಾನ, ಹಣ್ಣು, ಗಿಡಮೂಲಿಕೆ ಉದ್ಯಾನ, ಒಳಾಂಗಣ ಉದ್ಯಾನ, ರಾಕ್‌, ಎಕನಾಮಿಕ್‌ ಗಾರ್ಡನ್‌ (ಆದಾಯ ತಂದುಕೊಡುವ ಸಸ್ಯಗಳು), ರೋಸ್‌ ಗಾರ್ಡನ್‌, ಶೇಡ್‌ ಗಾರ್ಡನ್‌, ತರಕಾರಿ, ಲ್ಯಾಂಡ್‌ಸ್ಕೇಪ್‌, ಪುಷ್ಪಗಳು, ಬೊನ್ಸಾಯಿ ಸೇರಿದಂತೆ 20ಕ್ಕೂ ಅಧಿಕ ಪ್ರಕಾರಗಳನ್ನು ಹೊಂದಿರುವಂತಹ ತಾಣಕ್ಕೆ ಬೊಟಾನಿಕಲ್‌ ಗಾರ್ಡನ್‌ ಎನ್ನುತ್ತಾರೆ.

100 ಮೀ. ಅಂತರದಲ್ಲೇ ಅಪಾರ್ಟ್‌ಮೆಂಟ್‌!: ಲಾಲ್‌ಬಾಗ್‌ನ ಮುಖ್ಯದ್ವಾರದಿಂದ ಕೇವಲ ನೂರು ಮೀಟರ್‌ ಅಂತರದಲ್ಲಿ 25ರಿಂದ 30 ಅಂತಸ್ತಿನ ಅಪಾರ್ಟ್‌ಮೆಂಟ್‌ ತಲೆಯೆತ್ತುತ್ತಿದೆ. ಇಲ್ಲಿ ಮುಂದಿನ ದಿನಗಳಲ್ಲಿ ಕನಿಷ್ಠ ಐದು ಸಾವಿರ ಜನ ಬರುತ್ತಾರೆ. ಅವರೆಲ್ಲರೂ ಒಂದಿಲ್ಲೊಂದು ಹೊತ್ತು ಲಾಲ್‌ಬಾಗ್‌ಗೆ ಬರುತ್ತಾರೆ. ಇದು ಒಂದು ಉದಾಹರಣೆ ಅಷ್ಟೇ. ಹೀಗೆ ಉದ್ಯಾನದ ಮೇಲೆ ಒತ್ತಡ ಹೆಚ್ಚುತ್ತಲೇ ಇದೆ.

ನಿರ್ದಿಷ್ಟ ಪ್ರದೇಶಗಳಲ್ಲಿ ನಿರ್ಬಂಧಿಸಲಿ: “ನಮ್ಮ ಮುಂದೆ ಈಗ ಎರಡು ಆಯ್ಕೆಗಳಿವೆ. ಒಂದು ಬೊಟಾನಿಕಲ್‌ ಗಾರ್ಡನ್‌ ಆಗಿ ಸಂರಕ್ಷಿಸಬೇಕು. ಮತ್ತೂಂದು ಬರೀ “ಪ್ಲೆಸರ್‌ ಗಾರ್ಡನ್‌’ (ಆಹ್ಲಾದ ನೀಡುವ ಉದ್ಯಾನ) ಆಗಿ ಅದನ್ನು ಉಳಿಸಿಕೊಳ್ಳುವುದು. ಇದರಲ್ಲಿ ಮೊದಲನೇಯದ್ದು ತುಂಬಾ ಕಷ್ಟ. ಏಕೆಂದರೆ, ಲಾಲ್‌ಬಾಗ್‌ ಈಗ ನಗರದ ಹೃದಯಭಾಗದಲ್ಲಿದೆ.

ನಿತ್ಯ ಸಾವಿರಾರು ಜನ ಅಲ್ಲಿಗೆ ಬರುತ್ತಾರೆ. ಅವರೆಲ್ಲರಿಗೂ ಪ್ರವೇಶಕ್ಕೆ ನಿರ್ಬಂಧ ಹೇರಬೇಕಾಗುತ್ತದೆ. ಈ ಮೂಲಕ ಜನರಿಗೆ ನಿಷ್ಠುರ ಆಗಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಇದು ಕಷ್ಟ. ಹಾಗಾಗಿ, ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ನಿರ್ಬಂಧ ವಿಧಿಸಿ, ಉಳಿದೆಡೆ ಈಗಾಗಲೇ ಇರುವಂತೆ ಮುಕ್ತ ಪ್ರವೇಶ ಕಲ್ಪಿಸುವುದು ಸೂಕ್ತ,’ ಎಂದು ತೋಟಗಾರಿಕೆ ಇಲಾಖೆಯ ನಿವೃತ್ತ ಅಪರ ನಿರ್ದೇಶಕ ಡಾ.ಎಸ್‌.ವಿ.ಹಿತ್ತಲಮನಿ ಸಲಹೆ ಮಾಡುತ್ತಾರೆ.

ಹಾನಿ ಉಂಟಾಗದಂತೆ ಅಭಿವೃದ್ಧಿ: “ಲಾಲ್‌ಬಾಗ್‌ಗೆ ಭೇಟಿ ನೀಡುವವರ ಅನುಕೂಲಕ್ಕಾಗಿ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಅವು ಪರಿಸರ ಸ್ನೇಹಿಯಾಗಿಯೇ ಇವೆ’ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್‌ ತಿಳಿಸುತ್ತಾರೆ. “ಯಾವುದೇ ವಲಯದಲ್ಲಾದರೂ ಅಭಿವೃದ್ಧಿ ಚಟುವಟಿಕೆ ಇಂದು ಅನಿವಾರ್ಯ. ಇದಕ್ಕೆ ಉದ್ಯಾನವೂ ಹೊರತಗಿಲ್ಲ.

ಇಲ್ಲಿ ಕಾಲ ಕಾಲಕ್ಕೆ ಪ್ರವಾಸಿಗರಿಗೆ ಹಾಗೂ ವಾಯುವಿಹಾರಿಗಳಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಮುಂದುವರಿದ ಭಾಗವಾಗಿ ಉದ್ಯಾನದ 5 ಕಿ.ಮೀ ರಸ್ತೆಗೆ 12 ಕೋಟಿ ರೂ. ವೆಚ್ಚದಲ್ಲಿ ಡಾಂಬರೀಕರಣ ಮಾಡಲಾಗುತ್ತಿದೆ. ಸುಸಜ್ಜಿತ ಪಾರ್ಕಿಂಗ್‌ ಸೌಲಭ್ಯ ಹಾಗೂ ಬೀದಿ ದೀಪ ಅಳವಡಿಕೆ ಮಾಡಲಾಗಿದೆ. ಇವು ಉದ್ಯಾನಕ್ಕೆ ಬರುವ ಪ್ರವಾಸಿಗ ಅನುಕೂಲಕ್ಕೆ ಹಾಗೂ ಹೆಚ್ಚಳಕ್ಕೆ ಅವಶ್ಯಕವಾಗಿದೆಯಷ್ಟೇ. ಯಾವುದೇ ದೃಷ್ಟಿಯಿಂದ ಮಾರಕವಾಗಿಲ್ಲ’ ಎಂದು ಸ್ಪಷ್ಟಪಡಿಸಿದರು.

ಅಭಿವೃದ್ಧಿ ಜತೆಗೆ ಸಸ್ಯ ಪ್ರಬೇಧಗಳ ಹೆಚ್ಚಳಕ್ಕೂ ಒತ್ತು ನೀಡಲಾಗಿದೆ. ಇದರ ಪರಿಣಾಮ ದಶಕದ ಹಿಂದೆ 1,600 ಇದ್ದ ಪ್ರಬೇಧಗಳ ಸಂಖ್ಯೆ 2,600ಕ್ಕೆ ಏರಿಕೆಯಾಗಿದೆ. ಅಲ್ಲದೆ, ಉದ್ಯಾನದಲ್ಲಿ ತಿಂಗಳಿಗೆ ಒಂದಿಲ್ಲೊಂದು ಮೇಳ, ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಇದರಿಂದ ಉದ್ಯಾನ ಹಾಳಾಗುತ್ತಿದೆ ಎಂಬ ಮಾತು ವಾಯುವಿಹಾರಿಗಳು ಬೇಸರ ವ್ಯಕ್ತಪಡೆಸುತ್ತಿದ್ದರು. ಈ ನಿಟ್ಟಿನಲ್ಲಿ ಈಗಾಗಲೇ ನಬಾರ್ಡ್‌, ಕೃಷಿ ಇಲಾಖೆ ಸೇರಿದಂತೆ ಇತರೆ ಇಲಾಖೆಗೆ ಲಾಲ್‌ಬಾಗ್‌ನಲ್ಲಿ ಕಾರ್ಯಕ್ರಮ ಮಾಡಲು ಅನುಮತಿ ನೀಡಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳಿಗೆ ತಡೆ ಹಿಡಿಯಲಾಗುವುದು ಎಂದೂ ಅವರು ಸಮರ್ಥನೆ ನೀಡಿದರು.

ಮರಗಳ ಸಮೀಕ್ಷೆ: ಸಸ್ಯ ವಿಜ್ಞಾನಿ ರವಿಕುಮಾರ್‌ ತಂಡವು ಆರೇಳು ತಿಂಗಳಿನಿಂದ ಇಲ್ಲಿನ ಮರಗಳ ಮಾಹಿತಿ ಸಂಗ್ರಹಿಸಿ ದಾಖಲೀಕರಣ ಮಾಡುತ್ತಿದೆ. ಇದರಿಂದ ಮರಗಳ ಸ್ಥಿತಿಗತಿ ಹಾಗೂ ಉದ್ಯಾನ ಪರಿಸರಕ್ಕೆ ಅವುಗಳ ಕೊಡುಗೆ ಏನು ಎಂಬ ಅಂಶ ತಿಳಿಯಲಿದೆ. ಈ ಹಿಂದೆ 1980ರಲ್ಲಿ ಇಂತಹ ಸಮೀಕ್ಷೆ ನಡೆದಿತ್ತು. ಅದರ ವರದಿ ಆಧರಿಸಿ ನಂತರದಲ್ಲಿ ಜೀವವೈವಿಧ್ಯತೆ ಕಾಪಾಡಲು ಪೂರಕ ಕ್ರಮ ಹಾಗೂ ಹೊಸ ಸಸ್ಯ ಪ್ರಭೇದ ನಾಟಿ ಮಾಡಲಾಗಿತ್ತು ಎಂದರು.

ಅಲ್ಲದೆ, ಕಬ್ಬನ್‌ ಉದ್ಯಾನದ ಫೈನ್‌ ಡಸ್ಟ್‌ ಈಟರ್‌ ಯಂತ್ರ ಅಳವಡಿಸಿದೆ. ಇದೇ ಮಾದರಿಯಲ್ಲಿ ಲಾಲ್‌ಬಾಗ್‌ನಲ್ಲೂ ಸೂಕ್ತ ಅಧ್ಯಯನ ನಡೆಸಿ, ಅಗತ್ಯಬಿದ್ದರೆ ಗಾಳಿ ಶುದ್ಧೀಕರಣಕ್ಕಾಗಿ ಯಂತ್ರವೊಂದನ್ನು ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಲಾಲ್‌ಬಾಗ್‌ಗೆ ಬರುವ ವಾಹನಗಳು
ಸಾಮಾನ್ಯ ದಿನಗಳಲ್ಲಿ
-150 ದ್ವಿಚಕ್ರ ವಾಹನ
-80 ರಿಂದ 100 ಕಾರುಗಳು
-10 ಬಸ್‌ಗಳು

ರಜೆ ದಿನಗಳಲ್ಲಿ
-500 ದ್ವಿಚಕ್ರ
-200-220 ಕಾರುಗಳು
-25-30 ಬಸ್‌ಗಳು
(ಇದನ್ನು ಹೊರತುಪಡಿಸಿ, ಅಧಿಕಾರಿಗಳ ಹಾಗೂ ಸಿಬ್ಬಂದಿ ವರ್ಗದ ವಾಹನಗಳ ಓಡಾಟವೂ ಇರುತ್ತದೆ)

ಚಿಟ್ಟೆ ಉದ್ಯಾನ ಕಷ್ಟ?: ಈ ಮಧ್ಯೆ ಲಾಲ್‌ಬಾಗ್‌ನಲ್ಲಿ ಚಿಟ್ಟೆ ಪಾರ್ಕ್‌ ನಿರ್ಮಿಸಲು ಉದ್ದೇಶಿಸಿದ್ದು, ಇದಕ್ಕಾಗಿ ಪೂರ್ವಸಿದ್ಧತೆ ಕೂಡ ನಡೆದಿದೆ. ಆದರೆ, ತಜ್ಞರ ಪ್ರಕಾರ ಈಗಿರುವ ಸ್ಥಿತಿಯಲ್ಲಿ ಅದು ಕಷ್ಟಸಾಧ್ಯ. ಚಿಟ್ಟೆಗಳು ಬಂದು ನೆಲೆಸಲು ಪ್ರಾದೇಶಿಕ ಸಸ್ಯ ಪ್ರಭೇದ ಹಾಗೂ ಕಾಡಿನ ಮಾದರಿ ವಾತಾವರಣ ಅತ್ಯಗತ್ಯ. ಲಾಲ್‌ಬಾಗ್‌ನಲ್ಲಿ ಆ ವಾತಾವರಣ ನಿರ್ಮಿಸಬೇಕಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಆಧುನಿಕರಣಕ್ಕೆ ಒಗ್ಗಿಕೊಳ್ಳುತ್ತಿರುವ ಉದ್ಯಾನದಲ್ಲಿ ಚಿಟ್ಟೆ ಪ್ರಬೇಧಗಳು ನೆಲೆಸುವ ಸಾಧ್ಯತೆಗಳು ತುಂಬಾ ಕಡಿಮೆ ಎಂದು ದಕ್ಷಿಣ ಕನ್ನಡದ ಬೆಳವೈನಲ್ಲಿ ಖಾಸಗಿ ಚಿಟ್ಟೆ ಉದ್ಯಾನ ನಿರ್ಮಿಸಿರುವ ಸಮ್ಮಿಲನ ಶೆಟ್ಟಿ ಅಭಿಪ್ರಾಯಪಡುತ್ತಾರೆ.

ಲಾಲ್‌ಬಾಗ್‌ ಜೀವಕಳೆ ಕಳೆದುಕೊಂಡಿದೆ. ಆಧುನೀಕರಣ, ವ್ಯಾಪಾರಿಕರಣದ ಪರಿಣಾಮ ಈಗ ಅದು ಸಸ್ಯಕಾಶಿಯಾಗಿ ಉಳಿದಿಲ್ಲ. ಉದ್ಯಾನದಲ್ಲಿ ವಾಹನ ಸಂಚಾರ ಹಾಗೂ ನಿಲುಗಡೆ ತಾಣ ನಿರ್ಮಾಣ ಮಾಡುವುದರಿಂದ ಸಸ್ಯ ಸಂಪತ್ತಿಗೆ ಸಾಕಷ್ಟು ಹಾನಿಯಾಗುತ್ತಿದೆ. ಕಟ್ಟಡ ನಿರ್ಮಾಣ ಹಾಗೂ ಸಂಚಾರಕ್ಕೆ ಅನುಮತಿ ನೀಡಿದ ಫ‌ಲವಾಗಿ ನಾವು ಇಂದು ಕಬ್ಬನ್‌ ಉದ್ಯಾನದಲ್ಲಿ ಉತ್ತಮ ವಾತಾವರಣ ಕಳೆದುಕೊಳ್ಳುತ್ತಿದ್ದೇವೆ. ಇದೇ ಸ್ಥಿತಿ ಲಾಲ್‌ಬಾಗ್‌ಗೆ ಬಂದರೂ ಅಚ್ಚರಿ ಇಲ್ಲ.
-ಸಿ.ಕೆ.ರವಿಚಂದ್ರ, ಲಾಲ್‌ಬಾಗ್‌ ನಡಿಗೆದಾರರ ಸಂಘದ ಅಧ್ಯಕ್ಷ

* ವಿಜಯಕುಮಾರ ಚಂದರಗಿ/ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next