ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಹಮ್ಮಿಕೊಂಡಿದ್ದ 210ನೇ ಫಲಪುಷ್ಪ ಪ್ರದರ್ಶನಕ್ಕೆ ಭಾನುವಾರ ತೆರೆಬಿದ್ದಿತು. ಜಯಚಾಮರಾಜ ಒಡೆಯರ್ ಜನ್ಮ ಶತಮಾನೋತ್ಸವದ ಪ್ರಯುಕ್ತ ಈ ಬಾರಿಯ ಫಲಪುಷ್ಪ ಪ್ರದರ್ಶನವನ್ನು ಡೆಯರ್‌ಗೆ ಸಮರ್ಪಿಸಲಾಗಿತ್ತು.
ಹತ್ತು ದಿನಗಳ ಪ್ರದರ್ಶನಕ್ಕೆ ನಾಲ್ಕು ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿ ಜನರು ಹೂಗಳಲ್ಲಿ ಅರಳಿದ ಒಡೆಯರ್ ಸಾಧನೆ, ಕೊಡುಗೆಗಳನ್ನು ಕಣ್ತುಂಬಿಕೊಂಡಿದ್ದಾರೆ. ಆ.9ರಂದು ಆರಂಭವಾದ ಪ್ರದರ್ಶನಕ್ಕೆ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ವಿಶೇಷವಾಗಿ ಸ್ವಾತಂತ್ರ್ಯ ದಿನದಂದು 1.72 ಲಕ್ಷ ಮಂದಿ ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿ ದಾಖಲೆ ಬರೆದಿದ್ದರು.
ಪ್ರದರ್ಶನದ ಕೊನೆಯ ದಿನವಾದ ಭಾನುವಾರ, ನಗರದ ನಾನಾ ಭಾಗಗಳಿಂದ ಆಗಮಿಸಿದ್ದ ಸಾರ್ವಜನಿಕರು ಪುಷ್ಪ ಸೊಬಗನ್ನು ಸವಿದರು. ಉದ್ಯಾನದ ಗಾಜಿನ ಮನೆಯ ಸುತ್ತ ಮುತ್ತ ಬೆಳಗ್ಗೆ 9ರಿಂದ ಸಂಜೆ 7 ಗಂಟೆವರೆಗೂ ಜನಜಂಗುಳಿ ಕಂಡುಬಂದಿತು. ರಜಾ ದಿನವಾಗಿದ್ದರಿಂದ ಕುಟುಂಬ ಸಮೇತರಾಗಿ ಬಂದವರ ಸಂಖ್ಯೆಯೂ ಹೆಚ್ಚಾಗಿತ್ತು.
ಹೂವುಗಳ ಸೌಂದರ್ಯ ಕಣ್ತುಂಬಿಕೊಳ್ಳುವ ಜತೆಗೆ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆ ಹಿಡಿದು ಸಂತಸಪಟ್ಟರು. ಪ್ರದರ್ಶನ ವೀಕ್ಷಿಸಿದ ಬಹಳ ಮಂದಿ ಲಾಲ್‌ಬಾಗ್ ಕೆರೆ ಬಳಿಯ ಜಲಪಾತದ ಬಳಿ ನೆರೆದಿದ್ದರು. ಭಾನುವಾರ ಲಾಲ್‌ಬಾಗ್‌ಗೆ ಒಟ್ಟು 36 ಸಾವಿರಾರು ಮಂದಿ ಭೇಟಿ ನೀಡಿದ್ದು, 14.38 ಲಕ್ಷ ರೂ. ಪ್ರವೇಶ ಶುಲ್ಕ ಸಂಗ್ರಹವಾಗಿದೆ.210ನೇ ಪ್ರದರ್ಶನದಲ್ಲಿ 210 ಲಕ್ಷ ರೂ. ಸಂಗ್ರಹ
ಮೈಸೂರು ಉದ್ಯಾನ ಕಲಾ ಸಂಘ ಲಾಲ್‌ಬಾಗ್‌ನಲ್ಲಿ 1912ರಿಂದ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳುತ್ತಿದ್ದು, ಈ ಬಾರಿ 210ನೇ ಪ್ರದರ್ಶನವಾಗಿತ್ತು. ಈ ಬಾರಿ 210 ಲಕ್ಷ ರೂ. ಪ್ರವೇಶ ಶುಲ್ಕ ಸಂಗ್ರಹವಾಗಿರುವುದು ವಿಶೇಷ. 10 ದಿನ ನಡೆದ ಪ್ರದರ್ಶನಕ್ಕೆ ಒಟ್ಟು 4,58,600 ಜನ ಭೇಟಿ ನೀಡಿದ್ದು, 2.10 ಕೋಟಿ ರೂ. ಸಂಗ್ರಹವಾಗಿದೆ.
ಪ್ರದರ್ಶನಕ್ಕೆ 2 ಕೋಟಿ. ರೂ. ವೆಚ್ಚವಾಗಿತ್ತು ಎಂದು ತೊಟಗಾರಿಕೆ ಇಲಾಖೆ ಲಾಲ್‌ಬಾಗ್ ಉದ್ಯಾನ ಉಪನಿರ್ದೇಶಕ ಚಂದ್ರಶೇಖರ್ ತಿಳಿಸಿದರು. ಗಣರಾಜ್ಯೋತ್ಸವದ ಅಂಗವಾಗಿ ಜನವರಿಯಲ್ಲಿ ನಡೆದಿದ್ದ ಗಾಂಧೀಜಿ ವಿಷಯಾಧಾರಿತ ಫಲಪುಷ್ಪ ಪ್ರದರ್ಶನದಲ್ಲಿ 4.02 ಲಕ್ಷ ಮಂದಿ ಭೇಟಿ 1.55 ಕೋಟಿ ಹಣ ಸಂಗ್ರಹವಾಗಿತ್ತು.