ಬೆಂಗಳೂರು: ಲಾಲ್‌ಬಾಗ್ ಪ್ರವೇಶ ಶುಲ್ಕ ಮತ್ತು ವಾಹನಗಳ ಪಾರ್ಕಿಂಗ್ ಶುಲ್ಕ ಸಂಗ್ರಹದ ಗುತ್ತಿಗೆ ಮತ್ತೆ ಕೆಸಿಐಸಿ ಪ್ರೈವೇಟ್ ಲಿಮಿಟೆಡ್ ಪಾಲಾಗಿದೆ. ಶುಲ್ಕ ಸಂಗ್ರಹದ ಟೆಂಡರ್‌ನಲ್ಲಿ ಅತಿ ಹೆಚ್ಚು, ವಾರ್ಷಿಕ 4.21 ಕೋಟಿ ರೂ. ಬಿಡ್ ದಾಖಲಿಸಿದ್ದ ಹಿನ್ನೆಲೆಯಲ್ಲಿ ಎ.ಎ.ಸಿದ್ದಿಕಿ ಅವರ ಕೆಸಿಐಸಿ ಕಂಪನಿ ಮತ್ತೆ ಗುತ್ತಿಗೆಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.
ಕಳೆದ ಬಾರಿ ಸಂಸ್ಥೆ 3.60 ಕೋಟಿ ರೂ. ಬಿಡ್ ಮಾಡಿ ಗುತ್ತಿಗೆ ತನ್ನದಾಗಿಸಿಕೊಂಡಿತ್ತು. ಆಗ ಲಾಲ್‌ಬಾಗ್ ಪ್ರವೇಶ ಶುಲ್ಕ ಒಬ್ಬರಿಗೆ 10 ರೂ. ಇತ್ತು. ಈ ಬಾರಿ ಶುಲ್ಕವನ್ನು 20 ರೂ.ಗೆ ಹೆಚ್ಚಳ ಮಾಡಿದ್ದರಿಂದ ಟೆಂಡರ್ ಮೊತ್ತವನ್ನೂ ಏರಿಸಲಾಗಿತ್ತು.
ಬೇರೆಯವರಿಗೆ ಗುತ್ತಿಗೆ ನೀಡಬೇಕು ಎಂದು ಇಲಾಖೆಯಲ್ಲಿ ಪ್ರಸ್ತಾಪವಾಗಿತ್ತು. ಆದರೆ, ಅತಿ ಹೆಚ್ಚು ಮೊತ್ತ ಬಿಡ್ ಮಾಡಿದವರಿಗೆ ಗುತ್ತಿಗೆ ನೀಡಬೇಕು ಎಂದು ಪಟ್ಟು ಹಿಡಿದ ಕೆಸಿಐಸಿ ಕಂಪನಿ, ನ್ಯಾಯಾಲಯದ ಮೊರೆ ಹೋಗಿತ್ತು. ಇದರಿಂದಾಗಿ ಕಳೆದ ಆರೇಳು ತಿಂಗಳಿನಿಂದ ತೋಟಗಾರಿಕೆ ಇಲಾಖೆ ಸಿಬ್ಬಂದಿಯೇ ಟಿಕೆಟ್ ಶುಲ್ಕ ಸಂಗ್ರಹಿಸುತ್ತಿದ್ದರು. ಇದೀಗ ನ್ಯಾಯಾಲಯದ ಆದೇಶದಂತೆ ಕೆಸಿಐಸಿ ಕಂಪನಿಗೆ ಶುಲ್ಕ ಸಂಗ್ರಹದ ಗುತ್ತಿಗೆ ನೀಡಲಾಗಿದೆ ಎಂದು ಲಾಲ್‌ಬಾಗ್ ಉಪನಿರ್ದೇಶಕ ಎಂ.ಚಂದ್ರಶೇಖರ್ ತಿಳಿಸಿದ್ದಾರೆ.
25 ಲಕ್ಷ ಪ್ರವಾಸಿಗರ ಭೇಟಿ: ಲಾಲ್‌ಬಾಗ್‌ಗೆ ವಾರ್ಷಿಕ ಸುಮಾರು 25 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಾರೆ. ಫಲಪುಷ್ಪ ಪ್ರದರ್ಶನದ ವೇಳೆಯೇ ಸುಮಾರು 8 ಲಕ್ಷ ಮಂದಿ ಭೇಟಿ ನೀಡಿದ ದಾಖಲೆ ಇದೆ. ಈ ಬಾರಿ ತೋಟಗಾರಿಕೆ ಇಲಾಖೆ ಲಾಲ್‌ಬಾಗ್‌ನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಸುಮಾರು 30 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಯಾವುದಕ್ಕೆ ಎಷ್ಟು ಶುಲ್ಕ?
* ಬಸ್-100 ರೂ.
* ಮಿನಿ ಬಸ್-50 ರೂ.
* ಕಾರ್-25 ರೂ.
* ಬೈಕ್-20 ರೂ.
* ಕ್ಯಾಮೆರಾ-50 ರೂ.