Advertisement

ಮೀನುಗಾರರು, ನೇಕಾರರು, ಸಣ್ಣ ಉದ್ಯೋಗಿಗಳಿಗೆ ಪರಿಹಾರ ಒದಗಿಸಿ : ಸಿಎಂಗೆ ಮೆಂಡನ್ ಮನವಿ

08:07 PM Jun 01, 2021 | Team Udayavani |

ಕಾಪು : ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಮಂಗಳವಾರ ಬೆಂಗಳೂರಿನಲ್ಲಿ ಭೇಟಿಯಾದ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಅವರು ಕೊರೊನಾ ನಿರ್ವಹಣೆ, ತೌಖ್ತೆ ಚಂಡ ಮಾರುತದ ಹಾನಿ ಮತ್ತು ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಗಳ‌ ಕುರಿತಾಗಿ ಚರ್ಚೆ ನಡೆಸಿದರು.

Advertisement

ತೌಖ್ತೆ ಚಂಡಮಾರುತದ ಪರಿಣಾಮ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು7-8 ಕಿ.ಮೀ. ಉದ್ದದ ಕರಾವಳಿಯಲ್ಲಿ ಹಾನಿಯುಂಟಾಗಿದೆ. ಕಡಲ್ಕೊರೆತದಿಂದಾಗಿ ಹಲವಾರು ತೆಂಗಿನ ಮರಗಳು ಸಮುದ್ರ ಪಾಲಾಗಿವೆ.‌ ಅಪಾರ ಪ್ರಮಾಣದ ಹಾನಿಯುಂಟಾಗಿರುವ ಬಗ್ಗೆ  ಸಿ.ಎಂ. ಬಿ.ಎಸ್.ವೈ ಅವರಿಗೆ ವಿವರಿಸಿದ್ದಾರೆ.

ಇದನ್ನೂ ಓದಿ : ಮೂರನೇ ಅಲೆ ತಡೆಗೆ ಜಿಲ್ಲಾಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸಾ ವಿಭಾಗ ಅಭಿವೃದ್ಧಿ: ಸುಧಾಕರ್

ವಿಶ್ವ ಪ್ರಸಿದ್ದ ಪ್ರವಾಸಿ ತಾಣ ಕಾಪು ಲೈಟ್‌ ಹೌಸ್ ಪರಿಸರದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಸಮುದ್ರ ಮತ್ತು ನದಿಯ ನೀರಿನ ಸಂಗಮ ಪ್ರದೇಶ ಅಳಿವೆಯಲ್ಲಿ‌ 100 ಲೋಡ್ ನಷ್ಟು ಮರಳು ಶೇಖರಣೆಗೊಂಡು, ಕೃತಕ ದಿಬ್ಬ  ರಚನೆಯಾಗಿದೆ. ಇದನ್ನು ತೆರವುಗೊಳಿಸದಿದ್ದಲ್ಲಿ ಮಳೆಗಾಲದಲ್ಲಿ ಭಾರೀ ತೊಂದರೆಗಳುಂಟಾಗುವ ಸಾಧ್ಯತೆಗಳಿವೆ. ಇದರ ಸಹಿತವಾಗಿ ಎಲ್ಲಾ ರೀತಿಯ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು,  ಕಾಪು ಮತ್ತು ಪಡುಬಿದ್ರಿ ಯಲ್ಲಿ ಅಪಘಾತಕ್ಕೀಡಾದ ಟಗ್ ಗಳನ್ನು ತೆರವುಗೊಳಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ. ಇಲ್ಲದಿದ್ದಲ್ಲಿ ಇದರಿಂದಾಗಿ ಮೀನುಗಾರಿಕೆಗೆ ತೊಂದರೆಯುಂಟಾಗಲಿದೆ. ಟಗ್ ನಿಂದ ತೈಲ ಸೋರಿಕೆಯಾದಲ್ಲಿ ಮತ್ಸ್ಯ ಸಂಪತ್ತಿಗೆ ಹಾನಿಯುಂಟಾಗುವ ಸಾಧ್ಯತೆಗಳಿವೆ. ಟಗ್ ತೆರವಿಗೆ ಶೀಘ್ರ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದರು.

Advertisement

ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿರುವ ನಿಟ್ಟಿನಲ್ಲಿ ಈಗಾಗಲೇ ಘೋಷಣೆ ಮಾಡಿರುವ ವಿಶೇಷ ಪ್ಯಾಕೇಜ್ ನಲ್ಲಿ ಕರಾವಳಿ ಮೀನುಗಾರರನ್ನು, ನೇಕಾರರು, ಸಣ್ಣ ಉದ್ಯೋಗ ಮಾಡುತ್ತಿರುವ ಕಾರ್ಮಿಕರಿಗೆ, ಕುಶಲಕಾರ್ಮಿಕರನ್ನು ಕೈಬಿಟ್ಟಿದ್ದು ಮುಂದಿನ ಪ್ಯಾಕೇಜ್ ನಲ್ಲಿ ಹೆಚ್ಚಿನ ರೀತಿಯಲ್ಲಿ ಪರಿಹಾರ ಒದಗಿಸಲು ವಿಶೇಷವಾಗಿ ಪರಿಗಣಿಸುವಂತೆ ಅವರು ಮನವಿ ಮಾಡಿದರು.

ಈ ಬಗ್ಗೆ ಪೂರಕವಾಗಿ ಸ್ಪಂಧಿಸುವ ಭರವಸೆ ನೀಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉಡುಪಿ ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚಿಸಿ, ಕ್ರಮಕ್ಕೆ ಸೂಚನೆ ನೀಡಲಾಗುವುದು.‌ ಚಂಡ ಮಾರುತದ ಹಾನಿಯ ಬಗ್ಗೆ ಪರಿಶೀಲನೆ ನಡೆಸಿ, ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದ್ದಾರೆ‌ ಎಂದು ಶಾಸಕರು ತಿಳಿಸಿದ್ದಾರೆ.

ಇದನ್ನೂ ಓದಿ :ಕೋವಿಡ್ : ರಾಜ್ಯದಲ್ಲಿಂದು 29271 ಜನ ಗುಣಮುಖ; 14304 ಹೊಸ ಪ್ರಕರಣ ಪತ್ತೆ  

Advertisement

Udayavani is now on Telegram. Click here to join our channel and stay updated with the latest news.

Next