ನವದೆಹಲಿ: ರೈತರ ಪ್ರತಿಭಟನೆ ಸಂದರ್ಭದಲ್ಲಿ ಜನವರಿ 26ರಂದು ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೆಷಲ್ ಟಾಸ್ಕ್ ಫೋರ್ಸ್ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದೆ ಎಂದು ತಿಳಿಸಿದೆ.
ಚಂಡೀಗಢದ ಪ್ರಮುಖ ಆರೋಪಿ ಸುಖ್ ದೇವ್ ಸಿಂಗ್ ನನ್ನು ಸ್ಪೆಷಲ್ ಟಾಸ್ಕ್ ಫೋರ್ಸ್ ಪೊಲೀಸರು ಸುಮಾರು ನೂರು ಕಿಲೋ ಮೀಟರ್ ವರೆಗೆ ಹಿಂಬಾಲಿಸಿಕೊಂಡು ಹೋಗಿ ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಹತ್ತು ದಿನಗಳಿಂದ ದೆಹಲಿ ಪೊಲೀಸರು ಆರೋಪಿಯ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದರು. ಹಿಂಸಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸುಖ್ ದೇವ್ ತಲೆಗೆ 50 ಸಾವಿರ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.
ಇದಕ್ಕೂ ಮುನ್ನ ಆರೋಪಿ ಬಂಧನಕ್ಕೆ ಯತ್ನಿಸಿ ಎರಡು ಬಾರಿ ಪೊಲೀಸರು ವಿಫಲರಾಗಿದ್ದರು. ಹರ್ಯಾಣದ ಕುರ್ನಾಲ್ ಮನೆಯಲ್ಲಿ ಆರೋಪಿ ಇರುವ ಸುಳಿವು ಪಡೆದು ಬಂಧನಕ್ಕೆ ಪೊಲೀಸರು ತೆರಳಿದ್ದಾಗ, ಸುಖ್ ದೇವ್ ಪರಾರಿಯಾಗಿದ್ದ. ನಂತರ ಚಂಡೀಗಢದಲ್ಲಿ ಆರೋಪಿ ಸುಖ್ ದೇವ್ ಕುರಿತು ಸುಳಿವು ದೊರೆತಿದ್ದರೂ ಬಂಧನ ಸಾಧ್ಯವಾಗಿಲ್ಲವಾಗಿತ್ತು. ನಂತರ ಚಂಡೀಗಢದ ಸೆಂಟ್ರಲ್ ಮಾಲ್ ಪ್ರದೇಶದ ಸಮೀಪ ಸುಖ್ ದೇವ್ ಠಿಕಾಣಿ ಹೂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸ್ಪೆಷಲ್ ಟಾಸ್ಕ್ ಫೋರ್ಸ್ ದಾಳಿ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿತ್ತು ಎಂದು ವರದಿ ವಿವರಿಸಿದೆ.
ದೆಹಲಿ ಕ್ರೈಂ ಬ್ರ್ಯಾಂಚ್ ಪೊಲೀಸರು ಸುಖ್ ದೇವ್ ನನ್ನು ದೆಹಲಿಗೆ ಕರೆತಂದಿದ್ದು, ಸೋಮವಾರ (ಫೆ.08, 2021) ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳ ಮಾಹಿತಿ ಪ್ರಕಾರ, ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 38 ಎಫ್ ಐಆರ್ ದಾಖಲಾಗಿದ್ದು, 126 ಮಂದಿಯನ್ನು ಬಂಧಿಸಲಾಗಿದೆ.