ನವದೆಹಲಿ:ದೇಶದಲ್ಲಿ ವಿವಿಐಪಿ ಸಂಸ್ಕೃತಿಗೆ ಅಂತ್ಯ ಹಾಡಲು ಮುಂದಾಗಿರುವ ಕೇಂದ್ರ ಸರ್ಕಾರ ವಿವಿಐಪಿಗಳು, ಅಧಿಕಾರಿಗಳು ಸೇರಿದಂತೆ ಯಾರೂ ಕೂಡಾ ಕೆಂಪುಗೂಟದ ಕಾರನ್ನು ಬಳಸುವಂತಿಲ್ಲ ಎಂದು ಕೇಂದ್ರ ಕ್ಯಾಬಿನೆಟ್ ಸಮಿತಿ ತೀರ್ಮಾನಿಸಿದ್ದು, ಈ ಮೂಲಕ ಬ್ರಿಟಿಷ್ ಕಾಲದ ನಿಯಮಕ್ಕೆ ತಿಲಾಂಜಲಿ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಕೂಡಾ ಕೆಂಪು ಗೂಟದ ಕಾರನ್ನು ಯಾವುದೇ ಕಾರಣಕ್ಕೂ ಬಳಸುವುದಿಲ್ಲ. ಅದೇ ರೀತಿ ಮೇ 1ರಿಂದ ಅಧಿಕಾರಿಗಳು, ಸಚಿವರು, ಮುಖ್ಯಮಂತ್ರಿಗಳು ಹಾಗೂ ನ್ಯಾಯಾಧೀಶರು ಕೆಂಪು ಗೂಟದ ಕಾರನ್ನು ಬಳಸುವಂತಿಲ್ಲ. ತುರ್ತು ಸೇವೆಯ ವಾಹನಗಳು ಮಾತ್ರ ಕೆಂಪು ದೀಪವನ್ನು ಬಳಸಬಹುದಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ. ಸ್ವತಃ ಗಡ್ಕರಿ ಅವರ ಕಾರಿನ ಕೆಂಪು ದೀಪವನ್ನು ತೆಗೆದುಹಾಕಿದ್ದಾರೆ.
ಮೇ 1ರಿಂದ ವಿಐಪಿ ಹಾಗೂ ವಿವಿಐಪಿ ಕಾರುಗಳು ಕೆಂಪು ದೀಪ ಬಳಸುವಂತಿಲ್ಲ ಎಂದು ಕ್ಯಾಬಿನೆಟ್ ನಲ್ಲಿ ನಿರ್ಧರಿಸುವ ಮೂಲಕ ವಿಐಪಿ ಸಂಸ್ಕೃತಿಗೆ ಬ್ರೇಕ್ ಹಾಕಿದೆ. ಈ ನಿಯಮ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಚಿವರಿಗೆ ಅನ್ವಯ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಲೋಕಸಭಾ ಸ್ಪೀಕರ್ ಅವರಿಗೆ ವಿನಾಯ್ತಿ ನೀಡಲಾಗಿದೆ ಎಂದು ವರದಿ ತಿಳಿಸಿದೆ.
2013ರಲ್ಲೇ ಸುಪ್ರೀಂ ಕೋರ್ಟ್, ಕೆಂಪು ಗೂಟದ ದೀಪವಿರುವ ವಾಹನಗಳನ್ನು ಬಳಸುವುದಕ್ಕೆ ಒಂದು ನಿರ್ದಿಷ್ಟ ಮಾನದಂಡ ರಚಿಸುವಂತೆ ಕೇಂದ್ರ ಸರಕಾರವನ್ನು ಕೇಳಿಕೊಂಡಿತ್ತು. ಗಡ್ಕರಿ ಅವರು ಸುಪ್ರೀಂ ಕೋರ್ಟ್ ಆದೇಶದ ವಿವರಗಳನ್ನು, ಕಾನೂನು ಅಭಿಪ್ರಾಯದ ಟಿಪ್ಪಣಿಗಳನ್ನು ಸಂಪುಟ ಸದಸ್ಯರಿಗೆ ನೀಡಿ ಅವರ ಅಭಿಪ್ರಾಯವನ್ನು ಕೋರಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಕೇಂದ್ರ ಸಚಿವ ಸಂಪುಟ ಅಂತಿಮ ತೀರ್ಮಾನ ಕೈಗೊಂಡಿದೆ ಎಂದು ವರದಿ ತಿಳಿಸಿದೆ.