Advertisement

Flower Show: ಲಾಲ್‌ಬಾಗ್‌ಗೆ 8.26 ಲಕ್ಷ ಜನ ಭೇಟಿ, 4 ಕೋಟಿ ರೂ. ಸಂಗ್ರಹ

11:03 AM Aug 16, 2023 | Team Udayavani |

ಬೆಂಗಳೂರು: ಸ್ವಾತಂತ್ರ್ಯೋತ್ಸವ ಪ್ರಯುಕ್ತ ತೋಟಗಾರಿಕೆ ಇಲಾಖೆಯಿಂದ ಲಾಲ್‌ಬಾಗ್‌ನಲ್ಲಿ ಏರ್ಪಡಿಸಿದ್ದ 214ನೇ ಫ‌ಲಪುಷ್ಪ ಪ್ರದರ್ಶನ ಅದ್ದೂರಿ ತೆರೆ ಕಂಡಿದೆ. ಮಂಗಳವಾರ 245000 ಜನ ಭೇಟಿ ನೀಡಿದ್ದು, 81.5 ಲಕ್ಷ ರೂ. ಹಣ ಸಂಗ್ರಹವಾಗಿದೆ. ಆ.4ರಿಂದ 15(ಮಂಗಳವಾರ)ವರೆಗೆ 8.26 ಲಕ್ಷಕ್ಕೂ ಹೆಚ್ಚು ಜನರು ಆಗಮಿಸಿದ್ದು, 4 ಕೋಟಿ ರೂ. ದಾಖಲೆಯ ಟಿಕೆಟ್‌ ಹಣ ಸಂಗ್ರಹವಾಗಿದೆ.

Advertisement

ವಿಧಾನಸೌಧ ನಿರ್ಮಾತೃ ಕೆಂಗಲ್‌ ಹನುಮಂತಯ್ಯ ಅವರ ವಿಷಯಾಧಾರಿತ ಫಲಪುಷ್ಪ ಪ್ರದರ್ಶನಕ್ಕೆ ಆ.4ರಂದು ಚಾಲನೆ ದೊರೆತಿತ್ತು. 12 ದಿನಗಳ ಕಾಲ ನಿತ್ಯ ಲಕ್ಷಾಂತರ ಜನ ಆಗಮಿಸಿ ಫ‌ಲಪುಷ್ಪ ಪ್ರದರ್ಶನ ವನ್ನು ವೀಕ್ಷಣೆ ಮಾಡಿ ಯಶಸ್ವಿಗೊಳಿಸಿದ್ದಾರೆ.

ಕೊನೆಯ ದಿನವಾದ ಮಂಗಳವಾರ ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಯುಕ್ತ ರಜಾ ಇದ್ದ ಕಾರಣ ಬೆಳಗ್ಗೆಯಿಂದ ಸಂಜೆವರೆಗೂ ಲಾಲ್‌ಬಾಗ್‌ ಜನದಟ್ಟಣೆಯಿಂದ ಕೂಡಿತ್ತು. ನಾಲ್ಕೂ ಪ್ರವೇಶ ದ್ವಾರಗಳಲ್ಲೂ ಜನರೇ ತುಂಬಿದ್ದರು.

ಜನ ನಿಯಂತ್ರಣಕ್ಕೆ ಹರಸಾಹಸ: ಉದ್ಯಾನದೆಲ್ಲೆಡೆ ತ್ರಿವರ್ಣ ಧ್ವಜಗಳನ್ನು ಹಿಡಿದ ಚಿಣ್ಣರು, ಶಾಲಾ- ಕಾಲೇ ಜು ವಿದ್ಯಾರ್ಥಿಗಳು, ಯುವಕರು ವಂದೇ ಮಾತರಂ, ಭಾರತ್‌ ಮಾತಾ ಕೀ ಜೈ ಎಂದು ಘೋಷಣೆಗಳನ್ನು ಕೂಗುತ್ತಿದ್ದರು. ಗಾಜಿನಮನೆ ಯೊಳಗಿನ ಜನದಟ್ಟಣೆಯನ್ನು ನಿಯಂತ್ರಿಸಲು ಪೊಲೀಸ್‌ ಹಾಗೂ ಇಲಾಖಾ ತಂಡದವರು ಹರಸಾಹಸ ಪಡುತ್ತಿದ್ದರು.

“ನಮ್ಮ ಮೆಟ್ರೋ’ದಲ್ಲಿ ರಿಯಾಯ್ತಿ ಟಿಕೆಟ್‌ ಖರೀದಿಗೆ ಪ್ರಯಾಣಿಕರು ಹರಸಾಹಸ ಪಡುತ್ತಿದ್ದರು. ಬಿಎಂಟಿಸಿ ಬಸ್‌ಗಳೂ ಜನರಿಂದ ತುಂಬಿತುಳುಕು ತ್ತಿದ್ದವು. ಲಾಲ್‌ಬಾಗ್‌ನ ಮುಖ್ಯದ್ವಾರದ ರಸ್ತೆಯಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರೂ, ಬೀದಿ ವ್ಯಾಪಾರಿಗಳ ಹಾವಳಿಯಿಂದಾಗಿ ಸಂಚಾರ ದಟ್ಟಣೆ ಉಂಟಾಗಿತ್ತು.

Advertisement

ಶಾಂತಿ ನಗರ ಬಸ್‌ ನಿಲ್ದಾಣದಿಂದ ಲಾಲ್‌ಬಾಗ್‌ ಪಶ್ಚಿಮ ದ್ವಾರದವರೆಗಿನ ಪಾದಚಾರಿ ಮಾರ್ಗದಲ್ಲಿ ಮಿನಿ ಮಾರುಕಟ್ಟೆ ಸೃಷ್ಟಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next