Advertisement

ಲಕ್ವಾ: ಅಪಾಯಕರ ಅಂಶಗಳು

06:00 AM Nov 25, 2018 | |

(ನ.11ರಿಂದ ಮುಂದುವರಿದ ಭಾಗ) ಲಕ್ವಾದ ಅಪಾಯಾಂಶಗಳನ್ನು ದೂರಮಾಡಿ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವುದರಿಂದ ಲಕ್ವಾ ಉಂಟಾಗುವ ಅಪಾಯವನ್ನು ವಿಳಂಬಿಸಬಹುದು ಮಾತ್ರವಲ್ಲ, ಇದು ಅದರ ದ್ವಿತೀಯಕ ಪ್ರತಿಬಂಧಕವಾಗಿಯೂ ಕೆಲಸ ಮಾಡುತ್ತದೆ.

Advertisement

ಲಕ್ವಾಕ್ಕೆ ಚಿಕಿತ್ಸೆಯೇನು?
ಹೃದ್ರೋಗದಂತೆಯೇ ಮಿದುಳು ಆಘಾತ ಅಥವಾ ಲಕ್ವಾ ಕೂಡ ಒಂದು ವೈದ್ಯಕೀಯ ತುರ್ತು ಪರಿಸ್ಥಿತಿಯಾಗಿದೆ. ಈ ಸಂದರ್ಭದಲ್ಲಿ ಎಷ್ಟು ಸಾಧ್ಯವೋ ಅಷ್ಟು ಬೇಗನೆ ಆಸ್ಪತ್ರೆಗೆ ದಾಖಲಾದರೆ ಚಿಕಿತ್ಸೆ ಒದಗಿಸಿ ಮಿದುಳಿಗೆ ರಕ್ತ ಸರಬರಾಜನ್ನು ಪುನಃಸ್ಥಾಪಿಸುವುದು ಕೆಲವು ರೋಗಿಗಳಲ್ಲಿ ಸಾಧ್ಯವಿದೆ. ಒಂದು ಲಕ್ವಾ ಆರಂಭವಾದ ಬಳಿಕ ಪ್ರತೀ ನಿಮಿಷಕ್ಕೆ ಸರಿಸುಮಾರು 2 ಮಿಲಿಯಗಳಂತೆ ಮಿದುಳಿನ ನ್ಯುರಾನ್‌ಗಳು ನಾಶ ಹೊಂದುತ್ತವೆ. 

ಕ್ಷಿಪ್ರ ಲಕ್ವಾ ನಿರ್ವಹಣೆಯಲ್ಲಿ “ಸಮಯವೇ ಮಿದುಳು’ ಎಂದು ಪರಿಭಾವಿಸಲಾಗುತ್ತದೆ. ಏಕೆಂದರೆ, ರೋಗಪತ್ತೆ, ಚಿಕಿತ್ಸೆಯಲ್ಲಿ ಕೊಂಚ ವಿಳಂಬವಾದರೂ ಅದು ರೋಗಿಯನ್ನು ನರಶಾಸ್ತ್ರೀಯವಾಗಿ ವಿಕಲಗೊಳಿಸಬಹುದು ಮತ್ತು ಶಾಶ್ವತವಾಗಿ ಅಂಗವೈಕಲ್ಯಕ್ಕೆ ಈಡು ಮಾಡಬಹುದು. ಲಕ್ವಾದ ಸಂದರ್ಭದಲ್ಲಿ ನಷ್ಟವಾಗುವ ಪ್ರತೀ ಕ್ಷಣವೂ ಮಿದುಳಿನ ನಷ್ಟವೇ.

“ಆ್ಯಕ್ಟ್ ಫಾಸ್ಟ್‌’ ಸೂತ್ರದಂತೆ ಇಶೆಮಿಕ್‌ ಲಕ್ವಾ ಉಂಟಾದ 4ರಿಂದ 5 ತಾಸುಗಳ ಒಳಗೆ ಆಸ್ಪತ್ರೆಗೆ ತಲುಪುವ ರೋಗಿಗೆ ತತ್‌ಕ್ಷಣ ಸೂಕ್ತವಾದ ರಕ್ತ ಪರೀಕ್ಷೆಗಳನ್ನು ನಡೆಸಲಾಗುತ್ತದೆ, ಸಿಟಿ ಸ್ಕ್ಯಾನ್‌ಗಳನ್ನು ಮಾಡಲಾಗುತ್ತದೆ ಹಾಗೂ ಥ್ರೊಂಬೊಲಿಟಿಕ್‌ ಥೆರಪಿ (ಟಿಪಿಎ, ಹೆಪ್ಪುಗಟ್ಟಿದ ರಕ್ತವನ್ನು ವಿಲೀನಗೊಳಿಸುವ ಚಿಕಿತ್ಸೆ) ಅಥವಾ ಹೆಪ್ಪುಗಟ್ಟಿದ ರಕ್ತವನ್ನು ಹೊರತೆಗೆಯುವ ಚಿಕಿತ್ಸೆ (ತಡೆಗೀಡಾದ ರಕ್ತನಾಳದ ಒಳಕ್ಕೆ ಕೆಥೆಟರ್‌ ತೂರಿಸಿ ಹೆಪ್ಪುಗಟ್ಟಿರುವುದನ್ನು ಯಾಂತ್ರಿಕವಾಗಿ ತೆಗೆದುಹಾಕುವುದು ಅಥವಾ ಮೆಕ್ಯಾನಿಟಲ್‌ ಥ್ರೊಂಬೆಕ್ಟಮಿ) -ಇವು ಚಿಕಿತ್ಸೆಯ ಆಯ್ಕೆಗಳಾಗಿವೆ. 

ಹೆಪ್ಪುಗಟ್ಟಿದ ರಕ್ತವನ್ನು ತೊಡೆದುಹಾಕುವ ಚಿಕಿತ್ಸೆಯು ಅತ್ಯಂತ ಪ್ರಯೋಜನಕಾರಿಯಾಗಿದೆ. ಸೂಕ್ತ ಸಮಯದೊಳಗೆ ಈ ಚಿಕಿತ್ಸೆಯನ್ನು ಈ ಚಿಕಿತ್ಸೆಯನ್ನು ಪಡೆಯುವ ರೋಗಿಗಳು ಹೆಚ್ಚು ಕ್ಷಿಪ್ರವಾಗಿ ಗುಣಮುಖರಾಗುತ್ತಾರೆ ಹಾಗೂ ಲಕ್ವಾದ ಬಳಿಕದ ಅವರ ಜೀವನ ಗುಣಮಟ್ಟ ಹೆಚ್ಚು ಉತ್ತಮವಾಗಿರುತ್ತದೆ. ಈ ಚಿಕಿತ್ಸೆಯು ಮಿದುಳಿಗೆ ರಕ್ತ ಸರಬರಾಜನ್ನು ಪುನರಾರಂಭಿಸುವುದರಿಂದ ಇಶೆಮಿಕ್‌ ಹಾನಿಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ. 

Advertisement

ಭಾರತದಲ್ಲಿ ಕ್ಲಾಟ್‌ ಬಸ್ಟರ್‌ ಥೆರಪಿ ಲಭ್ಯವಾಗಿ 20 ವರ್ಷಗಳಾಗುತ್ತಿದ್ದರೂ, ಕೇವಲ 1-2% ಲಕ್ವಾ ಪೀಡಿತರು ತ್ರಂಬೊಲೈಸ್ಡ್ ಆಗಿದ್ದಾರೆ ಎಂಬುದು ಖೇದಕರ. ತ್ರಂಬೊಲೈಸಿಸ್‌ನಿಂದ ಹಿಂಜರಿಯಲು ಕಾರಣಗಳೆಂದರೆ; ಜನರಲ್ಲಿ ಅರಿವಿನ ಕೊರತೆ ಮತ್ತು ತಪ್ಪು ತಿಳಿವಳಿಕೆಗಳು, ಬಡತನದಿಂದ ದುಬಾರಿ ಚಿಕಿತ್ಸಾ ವೆಚ್ಚವನ್ನು ಭರಿಸಲು ಸಾಧ್ಯವಾಗದಿರುವುದು, ಮೂಲ ಸೌಕರ್ಯ ಮತ್ತು ಆರೋಗ್ಯ ಸೇವೆಗಳ ಕೊರತೆ, 4ರಿಂದ 5 ಗಂಟೆಗಳ ಚಿಕಿತ್ಸಾ ಅವಧಿಗಾಗಿ ಚಿಕಿತ್ಸಾ ಕೇಂದ್ರಗಳಿಗೆ ತೆರಳಲು ಇರುವ ಸಾರಿಗೆ ಸಮಸ್ಯೆಗಳು, ಇತ್ಯಾದಿ.
 
ಯಾವ ರೋಗಿಗಳಲ್ಲಿ ಠಿಕಅ ಮತ್ತು ಇತರ ಚಿಕಿತ್ಸಾ ಪ್ರವೇಶಗಳು ಸಾಧ್ಯವಾಗುವುದಿಲ್ಲವೋ, ಅಥವಾ ಸೂಚನೆಗಳು ಕಂಡು ಬರುವುದಿಲ್ಲವೋ, ಅಂಥವರನ್ನು ಆಸ್ಪತ್ರೆಗೆ ದಾಖಲಿಸಿ ಅಧ್ಯಯನ ನಡೆಸಲಾಗುತ್ತದೆ. ಅಧ್ಯಯನ ಅವಧಿಯಲ್ಲಿ ರೋಗಿಯ ಸಮಗ್ರ ವಿಶ್ಲೇಷಣೆಯೊಂದಿಗೆ ಅಪಾಯದ ಸಾಧ್ಯತೆಗಳನ್ನೂ-ಪರಿಹಾರ ಮಾರ್ಗಗಳನ್ನೂ ಅಂದಾಜಿಸಲಾಗುತ್ತದೆ. ಯಾಕೆಂದರೆ ಲಕ್ವಾದ ಆರಂಭದ 2ರಿಂದ 7 ದಿನಗಳ ಅವಧಿಯ ಪರಿಣಾಮ ಬಹಳ ಗಂಭೀರವಾಗಿರುತ್ತದೆ. 

ಲಕ್ವಾಕ್ಕೆ ನೀಡುವ ಚಿಕಿತ್ಸೆಯ ಪ್ರಮುಖ ಉದ್ದೇಶ; ಲಕ್ವಾ ವಿಸ್ತರಿಸದಂತೆ ನೋಡಿಕೊಳ್ಳುವುದು ಮತ್ತು ಶೀಘ್ರ ಉಪಶಮನ. ಈ ಚಿಕಿತ್ಸೆಗಳು ಪೂರಕ ವೈದ್ಯಕೀಯ ನಿಗಾದೊಂದಿಗೆ ರಕ್ತವನ್ನು ತೆಳು ಮಾಡುವ ಆ್ಯಸ್ಪಿರಿನ್‌ ಅಥವಾ ಇತರ ಔಷಧಗಳಿಂದ ಮೊದಲ್ಗೊಂಡು, ಲಕ್ವಾದ ಉಪಶಮನಕ್ಕಾಗಿ ಮಾಡುವಂಥ ಫಿಜಿಯೊ ಥೆರಪಿ ಮತ್ತು ಅಕ್ಯೂಪೇಶನಲ್‌ ಥೆರಪಿಯನ್ನು ಒಳಗೊಂಡಿರುತ್ತವೆ.  ಮತ್ತೆ ಲಕ್ವಾ ಉಂಟಾಗುವುದನ್ನು ತಡೆಯುವುದಕ್ಕಾಗಿ ವೈದ್ಯರ ನಿರ್ದೇಶದಂತೆ ರಕ್ತವನ್ನು ತೆಳು ಮಾಡುವ ಔಷಧಗಳನ್ನು ಜೀವನಪೂರ್ತಿ ತೆಗೆದುಕೊಳ್ಳಬೇಕಾಗುತ್ತದೆ. 

ಮೆಕ್ಯಾನಿಕಲ್‌ ತ್ರಂಬೆಕ್ಟಮಿ (ಆಧುನಿಕ ಚಿಕಿತ್ಸೆ)ಯನ್ನು ಲಕ್ವಾದ ಪ್ರಮಾಣ, ಮಿದುಳಿನಲ್ಲಿ ಬ್ಲಾಕೇಜ್‌ ಆದ ಸ್ಥಳ ಮತ್ತು ಮಿದುಳಿನ ಕಾರ್ಯ ನಿರ್ವಹಣೆಯನ್ನು ಅಧ್ಯಯನ ಮಾಡಿ ಕೆಲವು ರೋಗಿಗಳಿಗೆ ಅನ್ವಯಿಸಬಹುದಾಗಿದೆ. ಯವುದೇ ವ್ಯತಿರಿಕ್ತತೆ ಕಂಡು ಬಾರದಿದ್ದಲ್ಲಿ ಈ ಚಿಕಿತ್ಸೆಯ ಅವಧಿ 24 ಗಂಟೆಗಳ ವರೆಗೆ ಇರಬಹುದು. ಆದರೆ ಈ ಚಿಕಿತ್ಸೆ ಎಲ್ಲ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲ ಮತ್ತು ಎಲ್ಲ ರೀತಿಯ ರೋಗಿಗಳಿಗೆ ಅನ್ವಯಿಸಲು ಸಾಧ್ಯವಿಲ್ಲ. 

– ಮುಂದಿನ ವಾರಕ್ಕೆ

Advertisement

Udayavani is now on Telegram. Click here to join our channel and stay updated with the latest news.

Next