Advertisement

ಉಡುಪಿಯಲ್ಲಿ ಪುಂಡಾಟಿಕೆ ತೋರಿದ್ದ ಲಕ್ಷ್ಮೀಶ ಸಾವು

10:49 AM Sep 22, 2018 | |

ಉಡುಪಿ: ಉಡುಪಿಯಲ್ಲಿ 16 ವರ್ಷಗಳ ಹಿಂದೆ ತನ್ನ ಆಕ್ರೋಶ ತೋರಿಸಿದ್ದ ಶೀರೂರು ಮಠದ ಆನೆ ಲಕ್ಷ್ಮೀಶ ಸೆ. 19ರಂದು ಮೈಸೂರು ಜಿಲ್ಲೆ ಹುಣಸೂರು ಬಳಿ ಕಲ್ಲಳ್ಳದಲ್ಲಿ ಮೃತಪಟ್ಟಿದೆ.  ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರದಿಂದ 20 ದಿನಗಳ ಹಿಂದೆ ಮದವೇರಿ ನಾಪತ್ತೆಯಾದ ಬಳಿಕ ಲಕ್ಷ್ಮೀಶ ಕಾಡಾನೆ ಹಿಂಡಿನಲ್ಲಿ ಸೇರಿಕೊಂಡು ಜಗಳವಾಡಿ ಪೆಟ್ಟು ತಿಂದಿತ್ತು. ಮಂಗಳವಾರ ಸಂಜೆ ವೇಳೆ ಕೊಳಂಗೇರಿ ಹಾಡಿ ಬಳಿ ಆನೆಯನ್ನು ಪತ್ತೆ ಹಚ್ಚಲಾಗಿತ್ತು. 

Advertisement

ಆನೆಯನ್ನು ಶಿಬಿರಕ್ಕೆ ಕರೆ ತರಲು ಪಶುವೈದ್ಯ ಡಾ| ಮುಜೀಬ್‌ ರೆಹಮಾನ್‌ ಅವರು ಅರಿವಳಿಕೆ ಚುಚ್ಚುಮದ್ದು ನೀಡಿದ್ದರು. ಇದರಿಂದ ಜ್ಞಾನತಪ್ಪಿ ಬಳಿಕ ಎಚ್ಚರಗೊಂಡಿದ್ದ ಆನೆ ಅಸ್ವಸ್ಥಗೊಂಡು ಮೃತಪಟ್ಟಿದೆ. 

2ನೇ ಪರ್ಯಾಯ ವೇಳೆ ದಾನ 
ಶೀರೂರು ಮಠದ ಶ್ರೀಲಕ್ಷ್ಮೀವರ ತೀರ್ಥರ ಎರಡನೆಯ ಪರ್ಯಾಯ 1994-96ರ ಅವಧಿಯಲ್ಲಿ ಎಂ.ವೀರಪ್ಪ ಮೊಲಿ ಮುಖ್ಯಮಂತ್ರಿಯಾಗಿದ್ದಾಗ ಲಕ್ಷ್ಮೀಶನನ್ನು ದಾನವಾಗಿ ಕೊಡಲಾಗಿತ್ತು. ಈ ಆನೆ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಮೊದಲ ಪರ್ಯಾಯ 2002-04ರ ಅವಧಿಯಲ್ಲಿ ಉಡುಪಿಯಲ್ಲಿ ಪುಂಡಾಟ ನಡೆಸಿತ್ತು. ಆಗ ಪೊಲೀಸ್‌ ಹಿರಿಯ ಅಧಿಕಾರಿಗಳು “ಶೂಟ್‌ ಎಟ್‌ ಸೈಟ್‌’ಗೆ ನಿರ್ಧರಿಸಿದ್ದರು. ಆದರೆ ಶೀರೂರು ಸ್ವಾಮೀಜಿಯವರು ಪೊಲೀಸರ ಮನವೊಲಿಸಿದ್ದರು. ಅನಂತರ ಮೈಸೂರಿನ ಮೃಗಾಲಯದ ವೈದ್ಯರು ಬಂದು ಚಿಕಿತ್ಸೆ ನೀಡಿದ್ದರು. ಅನಂತರ ಶೀರೂರಿನಲ್ಲಿದ್ದ ಆನೆ ಧರ್ಮಸ್ಥಳದಿಂದ ಕಳುಹಿಸಲಾದ ಮಾವುತನಿಂದ ನಿಯಂತ್ರಣಕ್ಕೆ ಬಂದಿತ್ತು. ಬಳಿಕ ವೈದ್ಯರು ನೀಡಿದ ಸಲಹೆಯಂತೆ ಉಪ್ಪಿನಂಗಡಿಗೆ ಕಳುಹಿಸಲಾಯಿತು. 

ಸ್ವಾಮೀಜಿ ನಿಧನದ  2 ತಿಂಗಳ ಬಳಿಕ
ಶ್ರೀಲಕ್ಷ್ಮೀವರ ತೀರ್ಥರ ಅಕ್ಕರೆಯಲ್ಲಿ ಬೆಳೆದಿದ್ದ ಲಕ್ಷ್ಮೀಶ ಆನೆ, ಸ್ವಾಮೀಜಿ ತೀರಿಕೊಂಡ 2ತಿಂಗಳ ಬಳಿಕ ಮೃತಪಟ್ಟಿದೆ.ಸ್ವಾಮೀಜಿ ಜು. 19ರಂದು ಮೃತಪಟ್ಟಿದ್ದರೆ ಲಕ್ಷ್ಮೀಶ ಸೆ. 19ರಂದು ಮೃತಪಟ್ಟಿದೆ. 

Advertisement

Udayavani is now on Telegram. Click here to join our channel and stay updated with the latest news.

Next