Advertisement
ಸಣ್ಣ ಗೇಟಿನ ದೊಡ್ಡ ಮನೆ. ಆ ಕಡೆ ಈ ಕಡೆ ಕೈಸಾಲೆ. ಚಾಚಿದ ಹೆಂಚುಗಳು. ಮನೆಯ ಮುಂದೆ ದೊಡ್ಡ ಬೃಂದಾವನ. ಜಗುಲಿಯ ಮೇಲೆ ಯಾರೋ ಕೂತು ಉಬ್ಬು, ಮೀಸೆ ತೀಡುತ್ತಾ ಮೇಕಪ್ ಮಾಡಿಕೊಳ್ಳುತ್ತಿದ್ದರು. ಕೈಯಲ್ಲೊಂದು ಕನ್ನಡಿ ಇತ್ತು. ಗೇಟು ತೆರೆದು ಕಾಲಿಡುವ ಮುನ್ನ ಬೆನ್ನ ಹಿಂದೆ ” ಸಾರ್ ಸಾರ್, ಆ ಕಡೆ ಏಕೆ ಹೋಗ್ತಿàರಿ. ಈ ಕಡೆ ತಿರುಗಿ’ ಅಂದಿತು ದನಿ.
Related Articles
Advertisement
“ಎರಡಕ್ಕೂ ನಾನೇ ಮಾಲೀಕ ಸ್ವಾಮೀ. ಅದರಪಾಡಿಗೆ ಅದು, ಇದರ ಪಾಡಿಗೆ ಇದು. ನಮಗೆ ಕಷ್ಟದಲ್ಲಿ ಊಟ ಹಾಕಿದ್ದು ಕೃಷಿ. ಅದಕ್ಕೇ ಇದನ್ನು ಬಿಡದೆ ಮಾಡ್ಕೊಂಡು ಬರ್ತಾ ಇದ್ದೀನಿ. ನೀವೇನಾದ್ರು ಇನ್ನು ಐದುವರ್ಷ ಬಿಟ್ಟು ಇಲ್ಲಿಗೆ ಬಂದ್ರೋ. ತೋಟಾನೇ ಇರಕ್ಕಿಲ್ಲ. ಅಲ್ನೋಡಿ, ಎಷ್ಟೊಂದು ಬಿಲ್ಡಂಗ್‌ಗಳು ಎದ್ದುಬಿಟ್ಟವೇ ‘ ಆಶ್ಚರ್ಯದಿಂದ ತೋರಿಸಿದರು. ನಿಜ, ಲಕ್ಷ್ಮೀನಾರಾಯಣರ ಜಮೀನಿನ ಸುತ್ತ ಕಣ್ಣು ಹಾಯಿಸಿದರೆ ಬೆಂಗಳೂರು ತನ್ನ ಕಬಂಧ ಬಾಹುಗಳನ್ನು ಚಾಚಿದ ಕುರುಹುಗಳಂತೆ ಬರೀ ಸಿಮೆಂಟ್ ಮನೆಗಳು ಎದ್ದು ನಿಂತಿವೆ. ಲಕ್ಷ್ಮೀನಾರಾಯಣರಿಗೆ ಇದು ಆಮಿಷವಾಗಿಲ್ಲ. “ಪಕ್ಕದವರು ಜಮೀನು ಮಾಡ್ತೀನಿ ಅಂತ ಕೊಂಡುಕೊಂಡ್ರು. ಈಗ ನೋಡಿದ್ರೆ ಲೇಔಟ್ ಮಾಡಿಬಿಟ್ಟಿದ್ದಾರೆ. ನಾನಂಗೆ ಮಾಡಕ್ಕಿಲ್ಲ’ ಅಂತ ರಿಯಲ್ ಎಸ್ಟೇಟ್‌ಗೆ ನಾನು ಎಂದೂ ಮರುಳಾಗಲಾರೆ ಅನ್ನೋದನ್ನು ಹೇಳಿದರು.
**
ಲಕ್ಷ್ಮೀನಾರಾಯಣ್ ಮುಲತಃ ತುಮಕೂರು ಜಿಲ್ಲೆಯ ಯಡಿಯೂರಿನವರು. ಕೃಷಿಕರು. ಕೂಡುಕುಟುಂಬ. ಅಲ್ಲಿನ ಮನೆ, ಜಮೀನು ಎಲ್ಲಾ ಭಾಗವಾದ ಮೇಲೆ 2002ರಲ್ಲಿ ಬೆಂಗಳೂರಿಗೆ ಬಂದರು. ಕನಕಪುರ ರಸ್ತೆಯ ತಾತಗುಣಿ ಪೈಪ್‌ಲೈನ್ ರಸ್ತೆಯಲ್ಲಿ ಈ ಜಮೀನನ್ನು ಕೊಂಡರು. ಆಗಂತೂ ಇದು ಥೇಟ್ ಹಳ್ಳಿಯೇ. ಬಸ್ಸುಗಳು ಇರಲಿಲ್ಲ. ಸೈಕಲ್ಲೂ ಹೋಗಲು ಆಗದ ಕಾಲು ಹಾದಿಗಳಿದ್ದವು. ಅಣ್ಣ ತಮ್ಮಂದಿರು ಮತ್ತೆ ಒಂದೇ ಕಡೆ ನೆಲಸಬೇಕೆಂದು ಜಮೀನಿನಲ್ಲಿ ಆಸೆಪಟ್ಟು, ದೊಡ್ಡ ತೊಟ್ಟಿ ಮನೆ ಕಟ್ಟಿಸಿದರೆ ಅದು ಶೂಟಿಂಗ್‌ನವರ ಪಾಲಾಯ್ತು. ಒಂದು ಸಲ ನಿರ್ದೇಶಕ ಟಿ.ಎನ್. ಸೀತಾರಾಮ್ ಅವರ ಬಂದಿದ್ದರು. ಮನೆ ನೋಡಿದವರೇ, “ಲಕ್ಷ್ಮೀನಾರಾಯಣ್ ಈ ಮನೆ ನಮ್ಮ ಶೂಟಿಂಗ್‌ಗೆ ಚೆನ್ನಾಗಿದೆ ರೀ.. ಕೊಟ್ಟು ಬಿಡಿ’ ಅಂದರು. ಸರಿಸಾರ್ ಅಂದು ಬಿಟ್ಟುಕೊಟ್ಟೆ. ಮುಕ್ತ ಧಾರಾವಾಹಿಯ ಶೂಟಿಂಗ್ ಶುರುವಾಗಿದ್ದೇ, ಆವತ್ತಿಂದ ಈ ಮನೆ ಶೂಟಿಂಗ್‌ಗೆ ಮೀಸಲಾಯ್ತು. ನಾವು ಜೆ.ಪಿನಗರಕ್ಕೆ ಸ್ಥಳಾಂತರವಾದೆವು ಅಂತ ಹೇಳುತ್ತಾರೆ ಲಕ್ಷ್ಮೀ. ಹಾಗಂತ ಕೃಷಿಯನ್ನು ಬಿಡಲಿಲ್ಲ. ಈ ಜಮೀನಿನಲ್ಲಿ ಭತ್ತ, ಜೋಳ, ತರಕಾರಿಗಳನ್ನು ಬೆಳೆಯುತ್ತಾ ಹೋದರು ಲಕ್ಷ್ಮೀನಾರಾಯಣ್. ಬೆಳಗ್ಗೆ ಅಷ್ಟೊತ್ತಿಗೆ ತೋಟಕ್ಕೆ ಬಂದರೆ ರಾತ್ರಿ 8-9ಕ್ಕೆ ಮನೆ ಸೇರುವುದು ಇವರ ಅಂದಿನ ಮತ್ತು ಇಂದಿನ ದಿನಚರಿಯೂ ಆಗಿದೆ. ಪ್ರಸ್ತುತ 390 ಅಡಿಕೆ, 20 ಸಪೋಟ, 30 ತೆಂಗು ಮರಗಳಿವೆ. ಈಸಲ ಅಡಿಕೆಯಿಂದ 55 ಸಾವಿರ, ತೆಂಗು 75ಸಾವಿರ ಬಂತು ಅಂತ ಲೆಕ್ಕ ಕೊಟ್ಟರು ಲಕ್ಷ್ಮೀನಾರಾಯಣ್. ಇವಿಷ್ಟೇ, ಅಲ್ಲ, ಇವರು ಹೈನುಗಾರಿಕೆ ಕೂಡ ಮಾಡುತ್ತಿದ್ದಾರೆ. ಎರಡು ಹಸು, ಒಂದು ಕರು ಇದೆ. ದಿನಕ್ಕೆ 20 ಲೀಟರ್‌ನಂತೆ ಸಾವಯವ ಹಾಲು ಉತ್ಪಾದನೆಯಾಗುತ್ತಿದೆ. ಇದರರಿಂದ ತಿಂಗಳ ಆದಾಯ 55 ಸಾವಿರ ರೂ. ಇದೆಯಂತೆ. ಹೈನುಗಾರಿಯ ಲಾಭದ ಇನ್ನೊಂದು ರೂಪದಲ್ಲಿ ವರ್ಷಕ್ಕೆ 20 ಟ್ರ್ಯಾಕ್ಟರ್ ಕೊಟ್ಟಿಗೆ ಗೊಬ್ಬರ ಬೇರೆ ಸಿಗುತ್ತಿದೆ. ಇದನ್ನೇ ಬೆಳೆಗಳಿಗೆ ಬಳಸುತ್ತಿದ್ದಾರೆ. 15 ಗುಂಟೆ ಜಮೀನಿನಲ್ಲಿ 750 ಕೋಳಿಗಳನ್ನು ಮೇಯಿಸುತ್ತಿದ್ದಾರೆ. ವರ್ಷಕ್ಕೆ ಮೂರು ಬ್ಯಾಚ್ ಮಾಡಿದ್ದಾರೆ. ಅಂದರೆ ಇಡೀ ವರ್ಷ ಕೋಳಿಗಳ ವಹಿವಾಟು ನಡೆಯುತ್ತಲೇ ಇರಬೇಕು ಅನ್ನೋದು ಮೂಲ ಉದ್ದೇಶ. ನಾಟಿ ಕೋಳಿಗಳಾಗಿರುವುದರಿಂದ ಡಿಮ್ಯಾಂಡ್ ಇದ್ದೇ ಇದೆ. ಮಾರಾಟಗಾರರೇ ಇವರ ಜಮೀನಿಗೆ ಬಂದು ಕೊಳ್ಳುವುದರಿಂದ ಹೆಚ್ಚಾ ಕಮ್ಮಿ ವರ್ಷಕ್ಕೆ ಮೂರು ಲಕ್ಷ ರೂ. ಆದಾಯದ ಜೋಳಿಗೆಗೆ ಭರ್ತಿಯಾಗುತ್ತಿದೆಯಂತೆ.
ಲಕ್ಷ್ಮೀನಾರಾಯಣ್, ಮನೆಗೆ ಅಕ್ಕಿ, ರಾಗಿ, ತರಕಾರಿ ಕೊಳ್ಳುವುದೇ ಇಲ್ಲ. ಇದಕ್ಕಾಗಿ 6 ಗುಂಟೆಯನ್ನು ಎತ್ತಿಟ್ಟಿದ್ದಾರೆ. ಅದರಲ್ಲಿ ವರ್ಷಕ್ಕೆ ಭತ್ತ, ರಾಗಿ, ಜೋಳ ಅಂತ ಮೂರು ಬೆಳೆ ಬೆಳೆಯುತ್ತಾರೆ. ವರ್ಷಕ್ಕೆ ಮೂರು ಕ್ವಿಂಟಾಲ್ ಸಾವಯವ ಅಕ್ಕಿ ಸಿಗುತ್ತಿದೆಯಂತೆ. ಇದೇ ಜಾಗದಲ್ಲಿ ನಂತರ ರಾಗಿಯನ್ನೂ, ಹಸುಗಳ ಮೇವಿಗಾಗಿ ಜೋಳವನ್ನೂ ಬೆಳೆಯುತ್ತಾರೆ. ನಮ್ಮ ತೋಟ ಸಂಪೂರ್ಣ ಸಾವಯವ. ಹೀಗಾಗಿ ರೋಗಗಳು ಕಡಿಮೆ ಇರುವುದರಿಂದ ತಲೆನೋವಿಲ್ಲ ಎನ್ನುತ್ತಾರೆ ಲಕ್ಷ್ಮೀನಾರಾಯಣ್. ಜಮೀನಿನ ಬದುಗಳಲ್ಲಿ 60 ಸ್ವಿಲರ್ ಓಕ್ ಮರಗಳಿವೆ.
ಲಕ್ಷ್ಮೀನಾರಾಯಣ್‌ಗೆ ನೀರಿನ ಪರದಾಟವಿಲ್ಲ. ಒಂದು ಬೋರ್‌ವೆಲ್ ಇದೆ. ನೀರು ಇಡೀ ತೋಟಕ್ಕೆ ಆಗಿ ಮಿಗುತ್ತದೆ. ಸಮೀಪದಲ್ಲೇ ಮುನೇಶ್ವರ ಗುಡ್ಡವಿದೆ. ಮಳೆಗಾಲದಲ್ಲಿ ಅಲ್ಲಿಂದ ಹರಿದು ಬರುವ ನೀರನ್ನು ತೋಟದ ಒಳಗೆ ಕಟ್ಟಿಹಾಕುವುದಕ್ಕಾಗಿಯೇ ಸಣ್ಣ ಒಡ್ಡು ಮಾಡಿದ್ದಾರೆ. ಪ್ರತಿ ಮಳೆಗಾಲದಲ್ಲೂ ಒಡ್ಡು ತುಂಬಿ, ಬೇಸಿಗೆಯ ತನಕ ನೀರು ಬಳಕೆಯಾಗುತ್ತದೆಯಂತೆ. ಲಕ್ಷ್ಮೀನಾರಾಯಣರಿಗೂ ಕೂಲಿಯಾಳುಗಳ ಕಿರಿಕಿರಿ ಇದೆ. ಇಡೀ ತೋಟವನ್ನು ನೋಡಿಕೊಳ್ಳಲು ಒಂದು ಸಂಸಾರವನ್ನು ಇಟ್ಟಿದ್ದಾರೆ. ಇನ್ನೂ ಜನ ಬೇಕು ಅಂದರೆ- “ನನಗೇನೂ ಬೇಸರ ಇಲ್ಲಪ್ಪ, ಜನರು ಸಿಗಲಿಲ್ಲ ಅಂದ್ರೆ ನಾನೇ ಗದ್ದೆಗೆ ಇಳಿದು ಬಿಡ್ತೀನಿ ‘ ಅಂತಾರೆ ಲಕ್ಷ್ಮೀ. ನಗರಕ್ಕೆ ಹೊಂದಿಕೊಂಡ ಜಮೀನು ಮಾರಿದರೆ ಕೋಟಿ ಕೋಟಿ ಬೆಲೆ ಬರುತ್ತದೆ. ಹೀಗಿದ್ದರೆ ಯಾರು ತಾನೇ ಕೃಷಿಕಡೆ ಮುಖ ಮಾಡುತ್ತಾರೆ ಹೇಳಿ? ಕೈ ತುಂಬ ಕಾಂಚಾಣ ತುಂಬಿಕೊಂಡು ಕೃಷಿಯಿಂದ ದೂರ ನಿಂತು ಬಿಡುತ್ತಾರೆ. ಆದರೆ ಈ ಲಕ್ಷ್ಮೀನಾರಾಯಣ್ ರಿಯಲ್‌ಎಷ್ಟೇಟ್‌ಗೆ ಮಾರುಹೋಗದೆ ಈಗಲೂ ಕೃಷಿ ಮಾಡುತ್ತಲೇ ಇದ್ದಾರೆ. ಪುಟಿಯುವ ಇವರ ಕೃಷಿ ಉತ್ಸಾಹ ಎಲ್ಲರಲ್ಲೂ ಮೂಡಿದರೆ ರೈತಾಪಿಗಳ ಬದುಕು ಹಸನಾಗಬಹುದು.
ಅಲ್ಲವೇ? – ಕಟ್ಟೆ ಗುರುರಾಜ್