Advertisement

ಲಕ್ಷ್ಮೀನರಸಿಂಹಗೆ ಸಹಸ್ರ ಪಾರಾಯಣ

01:19 PM Nov 13, 2017 | |

ಮೈಸೂರು: ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರದಲ್ಲಿ 2018ಕ್ಕೆ ನಡೆಯಲಿರುವ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ಮಹಾ ಕುಂಭಾಭಿಷೇಕದ ಅಂಗವಾಗಿ ನಗರದಲ್ಲಿ ಶ್ರೀ ಲಕ್ಷ್ಮೀನರಸಿಂಹ ಸಹಸ್ರನಾಮ ಪಾರಾಯಣ ಹಾಗೂ ಕೋಟಿ ತುಳಸಿ ಅರ್ಚನೆ ಮಹೋತ್ಸವ ನಡೆಯಿತು.

Advertisement

ಲೋಕ ಕಲ್ಯಾಣಾರ್ಥವಾಗಿ ಶ್ರೀಮಠದ ವತಿಯಿಂದ ಭಾನುವಾರ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಾವಿರಾರು ಮಹಿಳೆಯರು ಸಾಮೂಹಿಕವಾಗಿ ಏಕಕಂಠದಲ್ಲಿ ಶ್ರೀ ಲಕ್ಷ್ಮೀನರಸಿಂಹ ಸಹಸ್ರನಾಮ ಪಾರಾಯಣ ಮಾಡಿದರು.

ಮೈಸೂರು, ಚಾಮರಾಜನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಕೊಡಗು ಸೇರಿದಂತೆ ಇನ್ನಿತರ ಜಿಲ್ಲೆಗಳಿಂದ ಮಹಿಳೆಯರು ಆಗಮಿಸಿ ಪಾರಾಯಣದಲ್ಲಿ ಪಾಲ್ಗೊಂಡಿದ್ದರು.

ಹಳದಿ ಸೀರೆ, ಕೆಂಪು ರವಿಕೆ ಸಮವಸ್ತ್ರವನ್ನು ಸಾಂಪ್ರದಾಯಿಕ ರೀತಿಯಲ್ಲಿ ಧರಿಸಿದ್ದ ಮಹಿಳೆಯರು, ಪಾರಾಯಣದಲ್ಲಿ ಪಾಲ್ಗೊಂಡಿದ್ದದ್ದು ವಿಶೇಷವಾಗಿತ್ತು.
 ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಪೀಠಾಧಿಪತಿ ಶಂಕರಾಚಾರ್ಯ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮೀಜಿ ಪಾರಾಯಣ ನಡೆಯುವ ವೇಳೆ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಗೆ ಕೋಟಿ ತುಳಸಿ ಅರ್ಚನೆ ನೆರವೇರಿಸಿದರು.

ಬೆಳಗ್ಗೆ 10.30ಕ್ಕೆ ಪ್ರಾರಂಭವಾದ ಶ್ರೀ ಲಕ್ಷ್ಮೀನರಸಿಂಹ ಕೋಟಿ ಸಹಸ್ರನಾಮ ಪಾರಾಯಣ 11.30ರವರೆಗೆ ನಡೆಯಿತು. ಸಾಮೂಹಿಕ ಪಾರಾಯಣದ ನಂತರ ಶ್ರೀಗಳು ವೇದಿಕೆಯಲ್ಲಿ ಇರಿಸಿದ್ದ ಲಕ್ಷ್ಮೀನರಸಿಂಹ ದೇವರ ವಿಗ್ರಹಕ್ಕೆ ನೈವೇದ್ಯ, ಮಹಾ ಮಂಗಳಾರತಿ ನೆರವೇರಿಸಿದರು.

Advertisement

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್‌.ಎ.ರಾಮದಾಸ್‌, ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ಎಚ್‌.ವಿ.ರಾಜೀವ್‌, ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್‌, ವಿಕಲ ಸೇವಾ ಟ್ರಸ್ಟ್‌ನ ಸುಬ್ಬರಾವ್‌, ಉದ್ಯಮಿ ಯಶಸ್ವಿನಿ ಸೋಮಶೇಖರ್‌ ಭಾಗವಹಿಸಿದ್ದರು.

ಶ್ರೀಮಠದ ಆಡಳಿತಾಧಿಕಾರಿ ಬಿ.ಎಸ್‌.ರವಿಶಂಕರ್‌ ಮಾತನಾಡಿ, ಶ್ರೀಮಠದಲ್ಲಿ ಶಾರದಾ ಲಕ್ಷ್ಮೀನರಸಿಂಹ ದೇವಾಲಯದ ಪುನರ್‌ ನಿರ್ಮಾಣ ಕಾರ್ಯ ಮುಕ್ತಾಯ ಹಂತದಲ್ಲಿದೆ. 2018ರಲ್ಲಿ ಮಹಾ ಕುಂಭಾಭಿಷೇಕ ನಡೆಸಲು ಸ್ವಾಮೀಜಿಯವರು ಸಂಕಲ್ಪಿಸಿದ್ದಾರೆ.

ಮಹಾ ಕುಂಭಾಭಿಷೇಕ ಸಂದರ್ಭದಲ್ಲಿ ದಕ್ಷಿಣ ಭಾರತದ ವಿವಿಧ ರಾಜ್ಯಗಳಿಂದ ಆಗಮಿಸಲಿರುವ 50 ಸಾವಿರಕ್ಕೂ ಹೆಚ್ಚು ಮಹಿಳೆಯರು ಏಕಕಂಠದಲ್ಲಿ ಶ್ರೀಲಕ್ಷ್ಮೀನರಸಿಂಹ ಕೋಟಿ ಸಹಸ್ರನಾಮ ಪಾರಾಯಣ ಮಾಡ‌ಲಿದ್ದಾರೆಂದು ಹೇಳಿದರು. ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next