ನಂಜನಗೂಡು: ತಾಲೂಕು ಕಳಲೆ ಗ್ರಾಮದ ಶ್ರೀಲಕ್ಷ್ಮೀಕಾಂತಸ್ವಾಮಿ ಅವರ ಬ್ರಹ್ಮೋತ್ಸವ ಹಾಗೂ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು. ಈ ವೇಳೆ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕುಮಾರಸ್ವಾಮಿ ಬ್ರಹ್ಮೋತ್ಸವಕ್ಕೆ ಚಾಲನೆ ನೀಡಿದರು.
ಶ್ರೀಲಕ್ಷ್ಮೀಕಾಂತಸ್ವಾಮಿಯ ಜಾತ್ರಾ ಮಹೋತ್ಸವ, ಬ್ರಹ್ಮೋತ್ಸವ ಪ್ರಯುಕ್ತ ಬೆಳಗ್ಗೆ 7.47ರಿಂದ 8.10 ಸಮಯದ ಶುಭ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಲಕ್ಷ್ಮೀಕಾಂತ ದೇವಾಲಯ ಪಾರುಪತ್ತೆಗಾರರಾದ ಜಯರಾಮು, ದೇವಸ್ಥಾನದ ಸಮಿತಿ ಅಧ್ಯಕ್ಷ ಪುಟ್ಟರಂಗಶೆಟ್ಟಿ, ಶಶಿರೇಖಾ, ಮಂಜುಮಧು, ಕಳಲೆ ಗ್ರಾಪಂ ಅಧ್ಯಕ್ಷೆ ಲತಾ, ಮಹೇಶ್ ಗ್ರಾಮಸ್ಥರು, ಗ್ರಾಮದ ಯಜಮಾನರು, ರಥದ ಉಸ್ತುವಾರಿ ಯುವಕರು ಇದ್ದರು.
ಇತಿಹಾಸ ಪ್ರಸಿದ್ಧ ದೇವಾಲಯಗಳ ಸಾಲಿಗೆ ಸೇರಿದ ಕಳಲೆ ಗ್ರಾಮದ ಶ್ರೀಲಕ್ಷ್ಮೀಕಾಂತಸ್ವಾಮಿ ದೇವಾಲಯ, ನಂಜನಗೂಡಿನಿಂದ 5 ಕಿ.ಮೀ.ಅಂತರದಲ್ಲಿದೆ. ರಾಜರ ಆಳ್ವಿಕೆ, ದಳವಾಯಿಗಳ ಆಡಳಿತದಲ್ಲಿ ಈ ಗ್ರಾಮ ಪ್ರಸಿದ್ಧಿಪಡೆದಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಶ್ರೀಕಂಠೇಶ್ವರಸ್ವಾಮಿಯ ಜಾತ್ರಾ ಮಹೋತ್ಸವದ 5ದಿನಗಳ ನಂತರ ಜಾತ್ರಾ ಆಚರಿಸುವ ಪದ್ಧತಿಯಿದೆ.
ಶ್ರೀರಂಗಪಟ್ಟಣದ ರಾಜ ಟಿಪ್ಪುಸುಲ್ತಾನ್ ದಂಡೆತ್ತಿ ಬಂದು, ವಜ್ರವೈಢೂರ್ಯಗಳನ್ನು, ಶ್ರೀಲಕ್ಷ್ಮೀಕಾಂತದೇವರ ಉತ್ಸವ ಮೂರ್ತಿಯನ್ನು ಅಪಹರಿಸಿದ್ದರು. ಗ್ರಾಮದ ಮುಖಂಡರು ಟಿಪ್ಪು ಸುಲ್ತಾನ್‌ರಲ್ಲಿ ಮೊರೆ ಹೋಗಿ ಮತ್ತೆ ದೇವರ ವಿಗ್ರಹ, ಬೆಳ್ಳಿ ಪಾತ್ರೆ ಪಡೆದ ಇತಿಹಾಸ ಈ ದೇವಾಲಯದ್ದಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.