Advertisement

“ಜೋಳ’ದ ಸಿರಿ ಬೆಳಕಿನಲ್ಲಿ! ಲಕ್ಷ್ಮೀ ರೊಟ್ಟಿ ಫ್ಯಾಕ್ಟರಿ

03:45 AM Apr 05, 2017 | Harsha Rao |

ಹುಚ್ಚೆಳ್ಳು ಚಟ್ನಿ, ಪಲ್ಯದೊಂದಿಗೆ ಜೋಳದ ರೊಟ್ಟಿಯನ್ನು ಮೆಲ್ಲುವ ಸೊಬಗು ಅದ್ಭುತ! ಆ ರುಚಿಯನ್ನು ನಾಡಿನುದ್ದಗಲಕ್ಕೆ ಉಣಿಸುವ ಸಾಧಕಿ ಲಕ್ಷ್ಮೀ. ಹುಬ್ಬಳ್ಳಿಯ ನೇಕಾರ ನಗರದ ಮಹಿಳೆ. ಅವರ ರೊಟ್ಟಿ ಫ್ಯಾಕ್ಟರಿಯ ಕಂಪ್ಲೀಟ್‌ ಸ್ಟೋರಿ ಇಲ್ಲಿದೆ…

Advertisement

ಕಟುಂ, ಕುಟುಂ! ಊಟಕ್ಕೆ ಕುಳಿತಾಗ ಉತ್ತರ ಕರ್ನಾಟಕದಲ್ಲಿ ಈ ಸದ್ದು ಕಾಮನ್‌. ಆ ಭಾಗದ ಆತಿಥ್ಯದ ವೈಶಿಷ್ಟéವೇ ರುಚಿಕರ ರೊಟ್ಟಿಗಳು. ರಾಗಿ ರೊಟ್ಟಿ, ಸಜ್ಜೆ ರೊಟ್ಟಿ, ಜೋಳದ ರೊಟ್ಟಿಗಳ ಜೊತೆಗೆ ನಾಲಿಗೆಯಲ್ಲಿ ನೀರೂರಿಸುವ ಹುಚ್ಚೆಳ್ಳು ಚಟ್ನಿ, ಬದನೆಕಾಯಿ ಎಣ್ಣೆಗಾಯಿಯಂಥ ಪಲ್ಯ, ಪದಾರ್ಥಗಳೂ ಇದ್ದರೆ ಕೇಳ್ಬೇಕಾ? ಬಾಯಿಯಲ್ಲಿ ಸ್ವರ್ಗದ ಸ್ವಾದ. ಈ ಅನುಪಮ ರುಚಿಯನ್ನು ನಾಡಿಗೆ ಹಂಚುವ ಮಹಿಳೆಯ ಬಗ್ಗೆ ಹೇಳದಿದ್ದರೆ ನಾಲಿಗೆ ಸಪ್ಪೆ ಆದೀತು.

ಆಕೆ ಲಕ್ಷ್ಮೀ. ಹುಬ್ಬಳ್ಳಿಯ ನೇಕಾರ ನಗರದ ಮಹಿಳೆ. ವಾರದಲ್ಲಿ ಹತ್ತು ಕ್ವಿಂಟಾಲು ಜೋಳವನ್ನು ಹುಡಿ ಮಾಡಿ ಅದರಿಂದ ರೊಟ್ಟಿಗಳನ್ನು ತಯಾರಿಸಿ ಹಸಿದ ಹೊಟ್ಟೆಗಳಿಗೆ ಅಮೃತಾನ್ನ ನೀಡುವ ಈ ಸ್ವಾವಲಂಬಿ ಮಹಿಳೆ, ಹತ್ತು ಮಹಿಳೆಯರಿಗೆ ಕೆಲಸವನ್ನೂ ಕೊಟ್ಟಿದ್ದಾರೆ. ಒಂದು ಕಿಲೋ ಜೋಳದಲ್ಲಿ 25 ರೊಟ್ಟಿಗಳ ಪ್ರಕಾರ ತಿಂಗಳೊಂದರ ಒಂದು ಲಕ್ಷ ರೊಟ್ಟಿಗಳನ್ನು ತಯಾರಿಸಿ ಮಾರುಕಟ್ಟೆಗೆ ಕಳುಹಿಸುವ ಲಕ್ಷಿ¾ಯ ಸಾಧನೆ ಇತರರಿಗೂ ಮಾದರಿ.

ರೊಟ್ಟಿ ತಯಾರಿಸಿ, ಸಿಕ್ಕಿದ ವೇತನದಲ್ಲಿ ಎಂಟು ವರ್ಷ ಬದುಕಿನ ಬಂಡಿ ಎಳೆದವರು ಈ ಮಹಿಳೆ. ದಿನಕ್ಕೆ ಇನ್ನೂರು ರೊಟ್ಟಿಗಳನ್ನು ಬೇಯಿಸಿ ಮಾರಾಟ ಮಾಡುತ್ತಿದ್ದರು. ಇಬ್ಬರಿಗೆ ಉದ್ಯೋಗವನ್ನೂ ಕೊಟ್ಟಿದ್ದರು. ಆದರೆ 2009ರಲ್ಲಿ ಇಲ್ಲಿ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಆರಂಭವಾದಾಗ ಮಹಿಳೆಯರಿಗೆ ಸ್ವಂತ ಬದುಕಿನ ಕನಸಿಗೆ ಕಾವು ಕೊಟ್ಟು ಹುರಿದುಂಬಿಸಿತು. ಸ್ವಸಹಾಯ ಸಂಘಗಳ ಸದಸ್ಯರಾದ ಮಹಿಳೆಯರಿಗೆ ಯೋಗ್ಯ ವ್ಯವಹಾರದ ತರಬೇತಿಯ ಜೊತೆಗೆ ಸಲಕರಣೆಗಳ ಖರೀದಿಗೆ ಸಾಲವನ್ನೂ ಒದಗಿಸಿತು.

ಲಕ್ಷಿ¾ ಕೂಡ ಸ್ವಸಹಾಯ ಸಂಘದ ಸದಸ್ಯೆಯಾಗಿ ರೊಟ್ಟಿ ಉದ್ಯಮವನ್ನು ದೊಡ್ಡದಾಗಿ ಬೆಳೆಸಿದರು. ಈಗ ಪ್ರತಿದಿನ ಮಧ್ಯಾಹ್ನ ಒಂದರಿಂದ ಆರು ಗಂಟೆಯ ತನಕ ಅವರ ಮನೆಯ ಅಡುಗೆ ಕೋಣೆಯಲ್ಲಿ ರೊಟ್ಟಿ ತಯಾರಿಕೆಯ ಬಿರುಸಿನ ಕಾರ್ಯ ನಡೆಯುತ್ತದೆ. ಜೋಳದ ಹಿಟ್ಟನ್ನು ಕುದಿಯುವ ನೀರಿಗೆ ಹಾಕಿ ಗಂಟು ಕಟ್ಟದ ಹಾಗೆ ಕಲಸಿ ಅದನ್ನು ಬಡಿದು ಹದಗೊಳಿಸುವ ಕೆಲಸದಲ್ಲಿ ಕೆಲವರು ನಿರತರು. ಬಿಸಿಯಿರುವಾಗಲೇ ಹಿಟ್ಟನ್ನು ಉಂಡೆ ಮಾಡಿ ಲಟ್ಟಣಿಗೆಯಲ್ಲಿ ಲಟ್ಟಿಸುವ ಕೆಲಸಕ್ಕೆ ಇನ್ನು ಕೆಲವರು. ನಾಲ್ಕು ಒಲೆಗಳಲ್ಲಿ ತವಾಗಳನ್ನಿಟ್ಟು ಏಕಕಾಲದಲ್ಲಿ ನಾಲ್ಕು ರೊಟ್ಟಿಗಳನ್ನು ಬೇಯಿಸುವ ಕಾಯಕಕ್ಕೆ ಒಬ್ಬರೇ ಮೀಸಲು. ಸ್ವಸಹಾಯ ಸಂಘದ ಐವರು, ಹೊರಗಿನಿಂದ ಆರು ಮಂದಿ ಸೇರಿದರೆ ವಾರದ ಕೊನೆಗೆ 25 ಸಾವಿರ ರೊಟ್ಟಿಗಳು ಮಾರುಕಟ್ಟೆಯನ್ನು ಮುಟ್ಟುತ್ತವೆ. ಇವು ಒಣರೊಟ್ಟಿಗಳಾದುದರಿಂದ ತಿಂಗಳ ವರೆಗೂ ಕೆಡದೆ ತಾಜಾ ಆಗಿಯೇ ಉಳಿಯುತ್ತವೆ.

Advertisement

ಇಲ್ಲಿ ಎಲ್ಲ ದುಡಿಮೆಗೂ ಒಪ್ಪಂದದ ಕೂಲಿಯ ಕ್ರಮವಿದೆ. ನೂರು ರೊಟ್ಟಿಗಳನ್ನು ಲಟ್ಟಿಸಿದವರಿಗೆ ನಲುವತ್ತು ರೂಪಾಯಿ ಗಳಿಕೆಯಿದೆ. ಹಿಟ್ಟು ನಾದಿದವರು ಹನ್ನೆರಡು ರೂಪಾಯಿ ಪಡೆಯುತ್ತಾರೆ. ಬೇಯಿಸುವವರಿಗೆ ಸಿಗುವುದು ಹದಿನೈದು ರೂಪಾಯಿ. ಒಬ್ಬರು ಮುನ್ನೂರು ರೊಟ್ಟಿಗಳನ್ನು ಲಟ್ಟಿಸಿ ನೂರಾ ಇಪ್ಪತ್ತು ರೂಪಾಯಿ ಪಡೆಯಬಲ್ಲರು. ಒಂದು ತಾಸಿನಲ್ಲಿ ಅರವತ್ತು ರೊಟ್ಟಿಗಳು ಚಕಚಕ ಸಿದ್ಧವಾಗುತ್ತವೆ.

ಬೆಂದ ರೊಟ್ಟಿಗಳನ್ನು ಸಗಟಾಗಿ ಒಯ್ಯುವವರು ವ್ಯಾಪಾರಿಗಳು. ಕಿಲೋಗೆ ಇಪ್ಪತ್ತೆ„ದು ರೂಪಾಯಿಗೆ ಜೋಳ ಪೂರೈಸುವವರೂ ಅವರೇ. ಆದರೆ ಒಂದು ರೊಟ್ಟಿಗೆ ಆತ ಕೊಡುವ ದರ ಕೇವಲ ಮೂರು ರೂಪಾಯಿ. ಇದೇ ರೊಟ್ಟಿ ಗ್ರಾಹಕರ ಕೈಗೆ ತಲಪುವಾಗ ಅದರ ಬೆಲೆ ಐದು ರೂಪಾಯಿ ಆಗುತ್ತದೆ. ಹೋಟೆಲ್ಲುಗಳಲ್ಲಿ ಅದಕ್ಕೆ ಹತ್ತು ರೂಪಾಯಿ ದರ ವಿಧಿಸುತ್ತಾರೆ. ಇಲ್ಲಿ ಗಲ್ಲಿ ಗಲ್ಲಿಗಳಲ್ಲೂ ರೊಟ್ಟಿ ತಯಾರಕರಿದ್ದಾರೆ. ಎರಡೂವರೆ ರೂಪಾಯಿಗೇ ಪೂರೈಕೆ ಮಾಡುವ ಸ್ಪರ್ಧಿಗಳಿರುವ ಕಾರಣ ದುಡಿಯುವ ಮಂದಿಗೆ ಸಿಗುವ ಲಾಭ ಅತ್ಯಲ್ಪವೆಂದು ವಿಷಾದ ತೋರುತ್ತಾರೆ ಲಕ್ಷ್ಮೀ.

ಸ್ವಸಹಾಯ ಸಂಘದ ಸಾಲದ ಮೂಲಕ ಲಕ್ಷ್ಮೀ ಜೋಳ ಹುಡಿ ಮಾಡುವ ಯಂತ್ರ ಖರೀದಿಸಿದ್ದಾರೆ. ತಿಂಗಳಿಗೆ ನಾಲ್ಕು ಸಾವಿರ ರೂಪಾಯಿಗಳನ್ನು ಹಿಟ್ಟು ತಯಾರಿಕೆಗೆ ಕೊಡುತ್ತಿರುವ ಅವರಿಗೆ ಯಂತ್ರಕ್ಕೆ ಕೊಡುವ ನಲವತ್ತು ಸಾವಿರ ಹತ್ತೇ ತಿಂಗಳಲ್ಲಿ ಮರಳಿ ಬರುತ್ತದೆ ಎನ್ನುತ್ತಾರೆ ಯೋಜನೆಯ ನಿರ್ದೇಶಕ ಜಯಶಂಕರ ಶರ್ಮಾ. ಇಲ್ಲಿ ರೊಟ್ಟಿ ತಯಾರಿಸುವ ಮಹಿಳೆಯರು ಸಂಘಟಿತರಾಗದ ಕಾರಣ ವ್ಯಾಪಾರಿಗಳು ಶ್ರಮಕ್ಕೆ ತಕ್ಕ ಬೆಲೆ ನೀಡದೆ ಲಾಭದ ದೊಡ್ಡ ಪಾಲನ್ನು ತಾವೇ ಪಡೆಯುತ್ತಿದ್ದಾರೆ ಎನ್ನುವ ಅವರಿಗೆ ಸಿರಿ ಸಂಸ್ಥೆಯ ಮೂಲಕ ಸ್ವಸಹಾಯ ಸಂಘದ ಮಹಿಳೆಯರ ತಯಾರಿಕೆಗೆ ಯೋಗ್ಯ ಮಾರುಕಟ್ಟೆ ಕಲ್ಪಿಸಬೇಕೆಂಬ ಚಿಂತನೆಯೂ ಇದೆ. ಹೀಗಿದ್ದರೂ ಒಂದು ರೊಟ್ಟಿಯಲ್ಲಿ ಒಂದು ರೂಪಾಯಿ ಲಾಭ ಪಡೆಯುವ ಲಕ್ಷ್ಮೀ ಸ್ಥಳೀಯ ಮಹಿಳೆಯರಿಗೆ ನಿಶ್ಚಿಂತವಾದ ಉದ್ಯೋಗ ಕಲ್ಪಿಸಿ ಸ್ವಂತ ಬದುಕಿನ ದಾರಿಗೆ ಬೆಳಕು ಚೆಲ್ಲಿದ್ದಾರೆ. 

– ಪ. ರಾಮಕೃಷ್ಣ ಶಾಸ್ತ್ರೀ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next