ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ ಕೋಟಿ ರೂ. ಮೌಲ್ಯದ ಆಸ್ತಿಗಳ ಒಡತಿ. ಜತೆಗೆ ಕೋಟ್ಯಾಂತರ ರೂ. ಸಾಲದ ಭಾರ. ಸ್ವಂತ ಹೆಸರಿನಲ್ಲಿ ಐಷಾರಾಮಿ ಕಾರು, ಬಂಗಾರದ ಆಭರಣಗಳಿವೆ. ಆದರೂ ಸಾಲದ ಹೊರೆ ಬಿಟ್ಟಿಲ್ಲ.
ಐದು ವರ್ಷಗಳಲ್ಲಿ 6.70 ಕೋಟಿ ರೂ. ಆದಾಯ ಏರಿಕೆ ಕಂಡಿದೆ. 2018ರಲ್ಲಿ 36.58 ಲಕ್ಷ ರೂ. ಆದಾಯ ಹೊಂದಿದ್ದ ಹೆಬ್ಬಾಳಕರ, 2019ರಲ್ಲಿ 41.67 ಲಕ್ಷ ರೂ., 2020ರಲ್ಲಿ 43.71 ಲಕ್ಷ ರೂ., 2021ರಲ್ಲಿ 42.14 ಲಕ್ಷ ರೂ. ಆದಾಯ ಹೊಂದಿದ್ದಾಗಿ ಅವರು ಸಲ್ಲಿಸಿದ ಅಫಿಡವಿಟ್‌ನಲ್ಲಿದೆ. 2022ರಲ್ಲಿ ಆದಾಯ ಅಪಾರ ಪ್ರಮಾಣದಲ್ಲಿ ಹೆಚ್ಚಾಗಿದೆ.
ಮಂಗಳವಾರ ನಾಮಪತ್ರ ಸಲ್ಲಿಸಿದ ನಂತರ ತಮ್ಮ ಪ್ರಮಾಣ ಪತ್ರದಲ್ಲಿ ಆಸ್ತಿ ವಿವರ ನೀಡಿರುವ ಲಕ್ಷ್ಮೀ ಹೆಬ್ಬಾಳಕರ ತಮ್ಮ ಹೆಸರಿನಲ್ಲಿ 10,85,81,167 ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅವರ ಪತಿ ರವೀಂದ್ರ ಅವರ ಹೆಸರಿನಲ್ಲಿ 26.80 ಲಕ್ಷ ರೂ. ಬೆಲೆಯ ಚರಾಸ್ತಿ ಇದೆ ಎಂದು ತಿಳಿಸಿದ್ದಾರೆ.
ಅಲ್ಲದೆ 1.90 ಕೋಟಿ ರೂ. ಬೆಲೆಯ ಸ್ಥಿರಾಸ್ತಿ ಹೊಂದಿರುವ ಹೆಬ್ಬಾಳಕರ ಅವರ ಮೈಮೇಲೆ 8 ಕೋಟಿ ಸಾಲ ಸಹ ಇದೆ. ಅವರ ಪತಿಯ ಹೆಸರಿನಲ್ಲಿ ಸಹ 5.25 ಲಕ್ಷ ರೂ. ಸಾಲ ಇದೆ. ಹೆಬ್ಬಾಳಕರ ಅವರ ಕೈಯಲ್ಲಿ 11.51 ಲಕ್ಷ ರೂ. ನಗದು ಹಣವಿದೆ. ಪತಿ ರವೀಂದ್ರ ಅವರ ಕೈಯಲ್ಲಿ 29,658 ರೂ. ನಗದು ಹಣ ಹೊಂದಿದ್ದಾರೆ.
Related Articles
27.55 ಲಕ್ಷ ರೂ. ಬೆಲೆಬಾಳುವ ಕೃಷಿ ಭೂಮಿ, 18 ಲಕ್ಷದಷ್ಟು ಕೃಷಿಯೇತರ ಜಮೀನು ಹೊಂದಿದ್ದಾರೆ. 10.86 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ 1.90 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.
ಹೆಬ್ಬಾಳಕರ ಅವರ ಹೆಸರಿನಲ್ಲಿ 30 ಲಕ್ಷ ರೂ. ಬೆಲೆಯ ಐಷಾರಾಮಿ ಕಾರಿದ್ದರೆ, ಪತಿಯ ಹೆಸರಿನಲ್ಲಿ 14 ಲಕ್ಷ ರೂ ಬೆಲೆಯ ಕಾರಿದೆ. ಲಕ್ಷ್ಮೀ ಹೆಬ್ಬಾಳಕರ ತಮ್ಮ ಹೆಸರಿನಲ್ಲಿ 28 ಲಕ್ಷ ರೂ. ಬೆಲೆಯ ಬಂಗಾರದ ಆಭರಣ ಮತ್ತು 1.10 ಲಕ್ಷ ರೂ ಬೆಲೆಯ ಎರಡು ಕೆಜಿ ಬೆಳ್ಳಿ ಹೊಂದಿದ್ದಾರೆ. ಅವರ ಪತಿಯ ಬಳಿ ಐದು ಲಕ್ಷ ರೂ. ಬೆಲೆಯ ಬಂಗಾರದ ಆಭರಣಗಳಿವೆ.
ಹೆಬ್ಬಾಳಕರ ಅವರಿಗೆ ಸ್ನೇಹಿತರು ಮತ್ತು ಕುಟುಂಬದ ಸದಸ್ಯರು 5.63 ಕೋಟಿ ರೂ. ಸಾಲ ನೀಡಿದ್ದಾರೆ. ಅಲ್ಲದೆ ಸರ್ಕಾರದ 1.19 ಕೋಟಿ ರೂ ಬಾಕಿ ಇದೆ. ಬ್ಯಾಂಕ್ ಮತ್ತು ವಿವಿಧ ಹಣಕಾಸು ಸಂಸ್ಥೆಗಳಿAದ 2.80 ಕೋಟಿ ರೂ. ಸಾಲ ಇದೆ. ಇದರಲ್ಲಿ ಸಹೋದರ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಹೆಬ್ಬಾಳಕರ ಅವರಿಗೆ 1.73 ಕೋಟಿ ರೂ. ಸಾಲ ನೀಡಿದ್ದಾರೆ. ಒಟ್ಟಾರೆ ಸುಮಾರು ಎಂಟು ಕೋಟಿ ರೂ. ಗಳಿಗೂ ಹೆಚ್ಚು ಸಾಲದ ಹೊರೆ ಹೆಬ್ಬಾಳಕರ ಅವರ ಮೇಲಿದೆ.
ಮುಖ್ಯವಾಗಿ ಲಕ್ಷ್ಮೀ ಹೆಬ್ಬಾಳಕರ ಅವರು ಹರ್ಷ ಶುರ‍್ಸ್ದಲ್ಲಿ 6.43 ಕೋಟಿ ರೂ. ಬೆಲೆಯ ಷೇರುಗಳನ್ನು ಹೊಂದಿದ್ದಾರೆ. ಇದಲ್ಲದೆ ಎನ್‌ಎಸ್‌ಎಸ್ ಸೇರಿದಂತೆ ವಿವಿಧ ಉಳಿತಾಯ ಯೋಜನೆಯಲ್ಲಿ ಆರು ಲಕ್ಷ ರೂ. ವಿನಿಯೋಗಿಸಿದ್ದಾರೆ.