ಬೆಂಗಳೂರು: ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನ ಆ್ಯತ್ಲೆಟಿಕ್ ಸ್ಪರ್ಧೆಯ 10,000 ಮೀ. ಓಟದಲ್ಲಿ ಮಂಗಳೂರು ವಿ.ವಿ.ಯ ಕೆ.ಎಂ.ಲಕ್ಷ್ಮೀ ಚಿನ್ನ ಗೆದ್ದರು. ಹಾಗೆಯೇ 100 ಮೀ. ಓಟದ ಪುರುಷರ ವಿಭಾಗದಲ್ಲಿ ಎ.ವಿಘ್ನೇಶ್, ಮಹಿಳೆಯರ 1,500 ಮೀ. ಓಟದಲ್ಲಿ ರಾಧಾ ಸಿಂಗ್ ಚಿನ್ನ ಗೆದ್ದರು. ಇದರೊಂದಿಗೆ ಕಳೆದ ಬಾರಿಯ ಆ್ಯತ್ಲೆಟಿಕ್ಸ್ ಸ್ಪರ್ಧೆಯ ಚಾಂಪಿಯನ್ ಮಂಗಳೂರು ವಿ.ವಿ. 3 ಚಿನ್ನ ಗೆದ್ದು ಶುಭಾರಂಭ ಮಾಡಿದೆ.
ಒಡಿಶಾದ ಕಳಿಂಗ ವಿ.ವಿ.ಯನ್ನು ಪ್ರತಿನಿಧಿಸಿರುವ ಏಷ್ಯಾದ ಖ್ಯಾತ ಓಟಗಾರ್ತಿ ದ್ಯುತಿಚಂದ್ ಚಿನ್ನಾರಂಭ ಮಾಡಿದ್ದಾರೆ. ಅವರು ಮಹಿಳೆಯರ 100 ಮೀ.ನಲ್ಲಿ 11.68 ಸೆಕೆಂಡ್‌ಗಳಲ್ಲಿ ಗುರಿಮುಟ್ಟಿದರು.
ಲಕ್ಷ್ಮೀ ಗೆ ದಿನದ ಮೊದಲ ಚಿನ್ನ: 10,000 ಮೀ. ಓಟದಲ್ಲಿ ಮಂಗಳೂರು ವಿ.ವಿ.ಯ ಕೆ.ಎಂ.ಲಕ್ಷ್ಮೀ35 ನಿ., 49.23 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಇದು ದಿನದ ಮೊದಲ ಚಿನ್ನದ ಸಾಧನೆ. ಇಲ್ಲಿ ಮಹರ್ಷಿ ದಯಾನಂದ ವಿ.ವಿ.ಯ ಭಾರತಿ ಮತ್ತು ಬಧೋ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು.
ವಿಶೇಷ ಸುದ್ದಿಯೆಂದರೆ ಪುರುಷರ 100 ಮೀ. ಓಟದಲ್ಲಿ ಮಂಗಳೂರು ವಿ.ವಿ.ಯ ಎ.ವಿಘ್ನೇಶ್ ಚಿನ್ನ ಸಾಧನೆ ಮತ್ತು ಕೂಟ ದಾಖಲೆ. ಅವರು 10.50 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಹಿಂದಿನ ದಾಖಲೆ 10.68 ಸೆಕೆಂಡುಗಳಲ್ಲಿ ಗುರಿಮುಟ್ಟಿದ್ದ ಜಿ.ಕಠಿವರನ್ ಹೆಸರಲ್ಲಿತ್ತು. ಇಲ್ಲಿ ಭಾರತೀಯಾರ್ ಎಸ್.ತಮಿಳ್ ಅರಸು, ಸಾವಿತ್ರಿಬಾಯಿ ಫುಲೆ ವಿ.ವಿ.ಯ ಪ್ರಣವ್ ಗೌರವ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು.
ಮಹಿಳೆಯ 1500 ಮೀ. ಓಟದಲ್ಲಿ ಮಂಗಳೂರು ವಿ.ವಿ.ಯ ರಾಧಾಸಿಂಗ್ ಚಿನ್ನ ಗೆದ್ದರು. ಅವರು 4 ನಿ., 31.43 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಇಲ್ಲಿ ಹಿಮಾಚಲ ವಿ.ವಿ.ಯ ಸುನೀತಾ, ಮಣಿಪುರ ವಿ.ವಿ.ಯ ಭೂಮೇಶ್ವರಿ ಹ್ಯುದ್ರೋಮ್ ದೇವಿ ಕ್ರಮವಾಗಿ ಬೆಳ್ಳಿ, ಕಂಚು ಗೆದ್ದರು.
ಲವ್ಲಿ ವಿ.ವಿ.ಗೆ 2 ಚಿನ್ನ: ಶನಿವಾರ ನಡೆದ ಆ್ಯತ್ಲೆಟಿಕ್ಸ್‌ನ 6 ಸ್ಪರ್ಧೆಗಳಲ್ಲಿ ಪಂಜಾಬ್‌ನ ಲವಿÉ ವಿ.ವಿ. ಎರಡು ಚಿನ್ನ ಜಯಿಸಿತು. ಪುರುಷರ ಡಿಸ್ಕಸ್ ಎಸೆತದಲ್ಲಿ ಈ ವಿ.ವಿ.ಯ ಅಭಿನವ್ 54.46 ಮೀ. ದೂರ ಎಸೆದು ಚಿನ್ನ ಗೆದ್ದರು. ಇದು ನೂತನ ಖೇಲೋ ಇಂಡಿಯಾ ದಾಖಲೆ. ಇಲ್ಲಿ ಮಂಗಳೂರು ವಿ.ವಿ.ಯ ಬಸುಕೇಶ್ ಪುನಿಯ 51.54 ಮೀ. ದೂರ ಎಸೆದು ಬೆಳ್ಳಿ ಗೆದ್ದರು. ಸಾವಿತ್ರಿ ಬಾಯಿ ಫುಲೆಯ ಪೃಥ್ವಿರಾಜ್ ನಲ್ವಾಡೆ ಕಂಚು ಗೆದ್ದರು.
ದೂರಜಿಗಿತ: ಮಂಗಳೂರು ವಿ.ವಿ.ಗೆ ಬೆಳ್ಳಿ ಪುರುಷರ ದೂರಜಿಗಿತದಲ್ಲಿ ಮಂಗಳೂರು ವಿ.ವಿ.ಯ ಅನಿಲ್ ಕುಮಾರ್ ಸಾಹೂಗೆ ಬೆಳ್ಳಿ ಲಭಿಸಿತು. ಅವರು 7.27 ಮೀ. ದೂರ ಹಾರಿದರು.
ಕಬಡ್ಡಿ: ಮಂಗಳೂರಿಗೆ ಮಿಶ್ರಫಲ: ಮಹಿಳೆಯರ ಕಬಡ್ಡಿ ಪಂದ್ಯದಲ್ಲಿ ಮಂಗಳೂರು ವಿ.ವಿ. ತಂಡ ಮೊದಲ ಪಂದ್ಯದಲ್ಲಿ ಗುರುನಾನಕ್ ದೇವ್ ವಿ.ವಿ. ವಿರುದ್ಧ ಜಯ ಸಾಧಿಸಿತು. ಆದರೆ 2ನೇ ಪಂದ್ಯದಲ್ಲಿ ಮಹರ್ಷಿ ದಯಾನಂದ ವಿ.ವಿ. ಎದುರು ಸೋತು ಹೋಯಿತು.