Advertisement

ಬರದಲ್ಲೂ ಬತ್ತದ ಯತ್ನಳ್ಳಿ ಕೆರೆ

04:42 PM Mar 31, 2019 | Naveen |

ಲಕ್ಷ್ಮೇಶ್ವರ: ಇಂದಿನ ಆಧುನಿಕ ತಂತ್ರಜ್ಞಾನ ಮತ್ತು ವಿಜ್ಞಾನದ ಸುಳಿಗೆ ಸಿಲುಕಿ ಪೂರ್ವಜರ ಕಾಲದಿಂದಲೂ ಬಳುವಳಿಯಾಗಿ ಬಂದ ಕೆರೆ, ಬಾವಿಗಳು ಅಸಡ್ಡೆಗೊಳಗಾಗಿ ಇನ್ನಿಲ್ಲದಂತಾಗಿವೆ. ಆದರೆ ತಾಲೂಕಿನ ಯತ್ನಳ್ಳಿ ಗ್ರಾಮದಲ್ಲಿನ ಜನತೆ ತಮ್ಮೂರಿನ ಕೆರೆಯನ್ನು ಕಾಪಾಡಿಕೊಂಡಿದ್ದಾರೆ. ಇದರಿಂದ ಬರಗಲಾದ ಸಂದಿಗ್ಧ ಸ್ಥಿತಿಯಲ್ಲೂ ನೀರಿನ ತೊಂದರೆ ಉಂಟಾಗಿಲ್ಲ. ಇದು ಇತರೇ ಗ್ರಾಮದ ಜನರಿಗೆ ಪ್ರೇರಣೆಯಾಗಿದೆ.

Advertisement

ಗ್ರಾಮದಲ್ಲಿರುವ ಸುಮಾರು 4.24 ಎಕರೆ ವಿಸ್ತಾರದ ಕೆರೆಯನ್ನು ಅತ್ಯಂತ ವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಗ್ರಾಮದ ದಕ್ಷಿಣ ಭಾಗದ ಕೃಷಿ ಜಮೀನುಗಳಿಂದ ಹರಿದು ಬರುವ ನೀರನ್ನು ಮೂರು ಹಂತದಲ್ಲಿ ವಿಂಗಡಿಸಿ ಕೆರೆಗೆ ಸಂಗ್ರಹಿಸಲಾಗುತ್ತದೆ. ಮಳೆ ನೀರಿನೊಂದಿಗೆ ಹರಿದು ಬರುವ ಮುಳ್ಳು ಕಂಟಿ, ತ್ಯಾಜ್ಯ, ಹೂಳು ಕೆರೆಗೆ ಹರಿದು ಬರದಂತೆ ತಡೆಗೋಡೆ ನಿರ್ಮಿಸಿದ್ದಾರೆ. ಇದು ತುಂಬಿದ ನಂತರವೇ ಮೂಲ ಕೆರೆಗೆ ಸ್ವತ್ಛವಾದ ನೀರು ಸಂಗ್ರಹವಾಗಿ ಕೆರೆ ಸಂಪೂರ್ಣ ತುಂಬಿದ ಬಳಿಕವೇ ನೀರು ಕೋಡಿಯ ಮೂಲಕ ಹೊರ ಹೋಗುತ್ತದೆ.

ಈ ಕೆರೆಯ ಅಭಿವೃದ್ಧಿಗಾಗಿ 2015-16ನೇ ಸಾಲಿನ ಆರ್‌ಐಡಿಎಫ್‌-21ರ ಯೋಜನೆಯಡಿ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಕೆರೆಯ ಸುತ್ತಲೂ 540 ಮೀಟರ್‌ ಕಲ್ಲಿನ ಪಿಚ್ಚಿಂಗ್‌ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಈ ಸಂದರ್ಭದಲ್ಲಿ ಮಳೆಯಿಂದ ಕೆರೆಗೆ ನೀರು ಸಂಗ್ರಹವಾಗಿ ಪಿಚ್ಚಿಂಗ್‌ ಮಾಡಲು ಅಡ್ಡಿಯಾಯಿತು. ಗ್ರಾಮಸ್ಥರು ಸರ್ಕಾರದ ಅನುದಾನದ ಬಳಕೆಗೆ ಪಿಚ್ಚಿಂಗ್‌ ಬದಲು ಕೆರೆಯ ಸುತ್ತಲೂ ತಂತಿಬೇಲಿ ಅಳವಡಿಸಲು ಸಣ್ಣ ನೀರಾವರಿ ಇಲಾಖೆಗೆ ದುಂಬಾಲು ಬಿದ್ದರು. ಗ್ರಾಮಸ್ಥರ ಆಸೆಯದಂತೆ ಇಲಾಖೆಯು ಕಾಮಗಾರಿ ಬದಲಿಸಿ ಕೆರೆಯ ಸುತ್ತಲೂ ತಂತಿ ಬೇಲಿ ಅಳಡಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ನಿಟ್ಟಿನಲ್ಲಿ ಸರ್ಕಾರದ ಯೋಜನೆಗಳು ಸಾಕಾರಗೊಳ್ಳಲು ಸಾರ್ವಜನಿಕರ ಸಹಭಾಗಿತ್ವದ ಕಾರಣದಿಂದ ನೀರಿನ ಬರಕ್ಕೆ ಕೆರೆಯೇ ಪರಿಹಾರವಾಗಿದೆ.

ಮೂರು ಹಂತದಲ್ಲಿ ಕೆರೆ ನಿರ್ಮಾಣ
ಮೂರು ಹಂತದಲ್ಲಿ ಈ ಕೆರೆಯನ್ನು ನಿರ್ಮಾಣ ಮಾಡಲಾಗಿದೆ. 1ನೇ ಹಂತದಲ್ಲಿನ ಕೆರೆಯಲ್ಲಿನ ಕಸಕಡ್ಡಿಗಳಿಂದ ಕೂಡಿದ ನೀರನ್ನು ಜಾನುವಾರು, ಕುರಿ ಮೇಕೆಗಳಿಗೆ ಉಪಯೋಗಿಸಲಾಗುತ್ತದೆ. ಬೇಸಿಗೆ ಸಂದರ್ಭದಲ್ಲಿ ಸಣ್ಣ ಪ್ರಮಾಣದ ಈ ಕೆರೆಯಲ್ಲಿನ ಹೂಳು ಸ್ವಚ್ಛಗೊಳಿಸಿದರೆ ಮಾತ್ರ ಸಾಕು. 2 ಮತ್ತು 3ನೇ ಹಂತದ ಕೆರೆಗೆ ನೈಸರ್ಗಿಕವಾಗಿಯೇ ನೀರು ಫಿಲ್ಟರ್‌ ಆಗಿ ಸಂಗ್ರಹವಾಗುತ್ತದೆ. ಇದೇ ನೀರನ್ನು ಜನತೆ ವರ್ಷಪೂರ್ತಿ ಕುಡಿಯಲು ಮತ್ತು ಬಳಕೆ ಮಾಡುತ್ತಾರೆ.

ಅನುದಾನ ನೀಡಲು ಸ್ಥಳೀಯರ ಮನವಿ
ಗ್ರಾಮದ ಕೆರೆ ನೈಸಗಿಕವಾಗಿ ನೀರು ಸಂಗ್ರಹವಾಗುವ ಸೂಕ್ತ ಸ್ಥಳದಲ್ಲಿದ್ದು, ವರ್ಷಪೂರ್ತಿ ನೀರು ಸಂಗ್ರಹವಾಗುವ ಕೆರೆ ನಮ್ಮೂರಿನ ಜನರ ಆಸರೆ ಮತ್ತು ಹೆಮ್ಮೆಯಾಗಿದೆ. ಭವಿಷತ್ತಿನಲ್ಲಿ ಈ ಕೆರೆಯ ಸುತ್ತಲೂ ಕಲ್ಲಿನ ಪಿಚ್ಚಿಂಗ್‌, ಉದ್ಯಾನ ಸೇರಿ ಕೆರೆಯ ಸಂಪೂರ್ಣ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದವರು ವಿವಿಧ ಯೋಜನೆಗಳಡಿ ಅನುದಾನ ತಂದು ಮಾದರಿ ಕೆರೆಯನ್ನಾಗಿಸಲು ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ ಗ್ರಾಮದ ಸಿ.ಬಿ. ಪಾಟೀಲ, ಕರಿಭರಮಗೌಡ್ರ, ಶೇಖರಗೌಡ ಪಾಟೀಲ ಮತ್ತಿತರರು.

Advertisement
Advertisement

Udayavani is now on Telegram. Click here to join our channel and stay updated with the latest news.

Next